ಸಿಡ್ನಿ : ಆಸ್ಟ್ರೇಲಿಯಾದ ಬೊಂಡಿ ಬೀಚ್‌ನಲ್ಲಿ ಯಹೂದಿಗಳ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿ 16 ಜನರನ್ನು ಕೊಂದ ಇಬ್ಬರು ಬಂದೂಕುಧಾರಿಗಳು ತಂದೆ ಮತ್ತು ಮಗ ಎಂದು ಪೊಲೀಸರು ತಿಳಿಸಿದ್ದಾರೆ.
ಆಸ್ಟ್ರೇಲಿಯಾ ಸರ್ಕಾರ ಈ ಹತ್ಯಾಕಾಂಡವನ್ನು ಭಯೋತ್ಪದನಾ ಕೃತ್ಯ ಎಂದು ಪರಿಗಣಿಸಿದ್ದು, ಪಾಕಿಸ್ತಾನ ಮೂಲದ ತಂದೆ ಮತ್ತು ಪುತ್ರ ಜೊತೆಯಾಗಿ ಈ ಕೃತ್ಯ ಎಸಗಿದ್ದಾರೆ. ಯಹೂದಿಗಳ ಹನುಕ್ಕಾ ಹಬ್ಬದ ಆಚರಣೆ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೇರಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
50 ವರ್ಷದ ಸಾಜಿದ್ ಅಕ್ರಮ್ ಎಂಬಾತನನ್ನು ಪೊಲೀಸರು ಹತ್ಯೆ ಮಾಡಿದ್ದಾರೆ. ಆತನ 24 ವರ್ಷದ ಮಗ ನವೀದ್ ಅಕ್ರಮ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ನ್ಯೂ ಸೌತ್ ವೇಲ್ಸ್ ಪೊಲೀಸ್ ಆಯುಕ್ತ ಮಾಲ್ ಲ್ಯಾನ್ಯನ್ ಹೇಳಿದ್ದಾರೆ.
ಸಾಜಿದ್ ಅಕ್ರಮ್ ಹಣ್ಣಿನ ಅಂಗಡಿ ಇಟ್ಟುಕೊಂಡಿದ್ದ. ನವೀದ್ ಅಕ್ರಮ್ ಸಿಡ್ನಿಯ ಸೆಂಟ್ರಲ್ ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯ, ಇಸ್ಲಾಮಾಬಾದ್‌ನ ಹಮ್‌ದರ್ಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದ. ಪಶ್ಚಿಮ ಸಿಡ್ನಿಯಲ್ಲಿರುವ ಹೆಕೆನ್‌ಬರ್ಗ್‌ನಲ್ಲಿರುವ ಅರೇಬಿಕ್ ಮತ್ತು ಕುರಾನ್ ಅಧ್ಯಯನಗಳನ್ನು ಕಲಿಸುವ ಅಲ್-ಮುರಾದ್ ಸಂಸ್ಥೆಯಲ್ಲಿ ನವೀದ್ ಅಕ್ರಮ್ ಕುರಾನ್ ಅಧ್ಯಯನ ಮಾಡಿದ್ದ. ಆಸ್ಟ್ರೇಲಿಯಾ ಕಠಿಣ ಬಂದೂಕು ನಿಯಂತ್ರಣ ಕಾನೂನುಗಳನ್ನು ಹೊಂದಿದೆ.
ಸುಮಾರು ಮೂರು ದಶಕಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಅತ್ಯಂತ ಮಾರಕ ಗುಂಡಿನ ದಾಳಿ ಎಂದು ಪರಿಗಣಿಸಲಾಗಿದೆ. 10 ನಿಮಿಷಗಳ ಕಾಲ ಈ ದಾಳಿ ನಡೆದಿದೆ. ಬೀಚ್‌ನ ಹೊರಗಿನ ಒಂದು ಸಣ್ಣ ಉದ್ಯಾನವನದಲ್ಲಿ ನಡೆದ ಹನುಕ್ಕಾ ಕಾರ್ಯಕ್ರಮದಲ್ಲಿ ಸುಮಾರು 1,000 ಜನರು ಭಾಗವಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.















