ಜಮ್ಮು: ಶಿವ ಖೋರಿ ದೇವಾಲಯದಿಂದ ಹಿಂತಿರುಗುತ್ತಿದ್ದ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಜೂನ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಚುರುಕುಗೊಳಿಸಿದೆ. ರಾಜೌರಿ ಮತ್ತು ರಿಯಾಸಿ ಜಿಲ್ಲೆಗಳ ಹಲವೆಡೆ ಶುಕ್ರವಾರ ಶೋಧ ಕಾರ್ಯಾಚರಣೆ ಆರಂಭಿಸಿದೆ.
ರಿಯಾಸಿ ಜಿಲ್ಲೆಯಲ್ಲಿರುವ ಶಿವ ಖೋರಿ ದೇವಾಲಯದಿಂದ ಕತ್ರಾದತ್ತ ಹೋಗುತ್ತಿದ್ದ ಬಸ್ ಮೇಲೆ ಉಗ್ರರು ಜೂನ್ 9ರಂದು ಗುಂಡಿನ ದಾಳಿ ನಡೆಸಿದ್ದರು. ಇದರಿಂದಾಗಿ ಬಸ್ ಕಂದಕಕ್ಕೆ ಉರುಳಿತ್ತು. 7 ಯಾತ್ರಾರ್ಥಿಗಳು ಸೇರಿದಂತೆ ಒಟ್ಟು 9 ಮಂದಿ ಮೃತಪಟ್ಟು, 41 ಜನರು ಗಾಯಗೊಂಡಿದ್ದರು.
ಕೇಂದ್ರ ಗೃಹ ಸಚಿವಾಲಯ ಈ ಪ್ರಕರಣವನ್ನು ಜೂನ್ 17ರಂದು ಎನ್‌ಐಎಗೆ ವಹಿಸಿತ್ತು.
ದಾಳಿಗೂ ಮುನ್ನ ಭಯೋತ್ಪಾದಕರಿಗೆ ನೆರವಾದ ಆರೋಪದಲ್ಲಿ ರಾಜೌರಿಯ ಹಕಮ್ ಖಾನ್ ಎಂಬಾತನನ್ನು ಬಂಧಿಸಲಾಗಿದೆ.
ಉಗ್ರರ ದಾಳಿ ಸಂಬಂಧ ಎನ್‌ಐಎ ವಿವಿಧ ತಂಡಗಳು ರಾಜೌರಿ ಮತ್ತು ರಿಯಾಸಿ ಜಿಲ್ಲೆಗಳಲ್ಲಿ ಶೋಧ ನಡೆಸುತ್ತಿವೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜೌರಿಯ ಐದು ಸ್ಥಳಗಳಲ್ಲಿ ಜೂನ್ 30ರಂದು ಕಾರ್ಯಾಚರಣೆ ನಡೆಸಿದ್ದ ಎನ್ಐಎ, ಭಯೋತ್ಪಾದಕರಿಗೆ ಸಂಬಂಧಿಸಿದ ಹಲವು ವಸ್ತುಗಳನ್ನು ಜಪ್ತಿ ಮಾಡಿದ್ದರು.