ತಂಜಾವೂರು: ತಮಿಳುನಾಡಿನ ಸರ್ಕಾರಿ ಶಾಲೆಯೊಂದರಲ್ಲಿ ಹಾಡಹಗಲೇ ಶಿಕ್ಷಕಿಯೊಬ್ಬರನ್ನು ಹತ್ಯೆ ಮಾಡಿರುವ ಭಯಾನಕ ಘಟನೆ ಬುಧವಾರ(ನ.20) ನಡೆದಿದೆ.
ಮಲ್ಲಿಪಟ್ಟಣಂ ಸರ್ಕಾರಿ ಪ್ರೌಢಶಾಲೆಯಲ್ಲಿ ಕೆಲಸಮಾಡುತ್ತಿದ್ದ ಶಿಕ್ಷಕಿ ರಮಣಿ (26) ಹತ್ಯೆಯಾದ ಶಿಕ್ಷಕಿ.
ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕೆ ಕೋಪಗೊಂಡ ಯುವಕ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಂದು (ಬುಧವಾರ) ಬೆಳಗ್ಗೆ ಮಲ್ಲಿಪಟ್ಟಣಂ ಸರ್ಕಾರಿ ಪ್ರೌಢಶಾಲೆಗೆ ಯುವಕನೊಬ್ಬ ಪ್ರವೇಶಿಸಿ ನೇರವಾಗಿ ಸಿಬ್ಬಂದಿ ಕೊಠಡಿಗೆ ತೆರಳಿದ್ದಾನೆ. ಶಾಲೆಯ ಇತರೆ ಸಿಬ್ಬಂದಿ ಆತನನ್ನು ವಿಚಾರಣೆಗೊಳಪಡಿಸುವ ಮುನ್ನವೇ ಅಲ್ಲಿಯೇ ಕುಳಿತಿದ್ದ ಶಿಕ್ಷಕಿ ರಮಣಿ ಎಂಬುವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಕೂಡಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಿಕ್ಷಕಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ ಈ ವೇಳೆ ಪರಿಶೀಲಿಸಿದ ವೈದ್ಯರು ಶಿಕ್ಷಕಿ ಮೃತಪಟ್ಟಿರುವುದಾಗಿ ಹೇಳಿದ್ದಾರೆ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನಾ ಸ್ಥಳದ ಪರಿಶೀಲನೆ ನಡೆಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಯನ್ನು ಚಿನ್ನಮನೈ ಪ್ರದೇಶದ ನಿವಾಸಿ ಮಾಧವನ್ (30) ಎಂದು ಗುರುತಿಸಲಾಗಿದೆ.
ಸೇತುಬಾವಸತ್ರಂ ಪೊಲೀಸರು ನೀಡಿದ ಮಾಹಿತಿ ಪ್ರಕಾರ ರಮಣಿ 4 ತಿಂಗಳ ಹಿಂದೆಯಷ್ಟೇ ಶಾಲೆಗೆ ಸೇರಿದ್ದರು ಎನ್ನಲಾಗಿದೆ. ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ಘಟನೆ ನಡೆದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆರೋಪಿಯು ಮದುವೆಗೆ ಪ್ರಸ್ತಾವನೆ ಸಲ್ಲಿಸಿದ್ದನ್ನು ಆದರೆ ರಮಣಿ ತಿರಸ್ಕರಿಸಿದ್ದಳು ಎನ್ನಲಾಗಿದೆ ಇದೇ ಕಾರಣಕ್ಕೆ ಕೋಪಗೊಂಡ ಮಾಧವನ್ ಇಂದು ನೇರವಾಗಿ ಶಾಲೆಗೆ ಪ್ರವೇಶಿಸಿ ರಮಣಿ ಕುತ್ತಿಗೆಗೆ ಚಾಕು ಇರಿದಿದ್ದಾನೆ ಎಂದು ಹೇಳಲಾಗಿದೆ.














