ಬೆಂಗಳೂರು: ಮಹಿಳಾ ಸೊಸೈಟಿ ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಹಲವು ಯೋಜನೆಯಡಿ ಸಾಲ ಕೊಡಿಸುವುದಾಗಿ ನಂಬಿಸಿ ಹಣ ಪಡೆದಿರುವ ಸ್ನೇಹಿತನನ್ನು ಹತ್ಯೆಗೈದು ಶವದೊಂದಿಗೆ ಕಾರಿನಲ್ಲಿ ಪೊಲೀಸ್ ಠಾಣೆಗೆ ಆಗಮಿಸಿ ಆರೋಪಿ ಶರಣಾಗಿದ್ದಾನೆ.
ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹೇಶಪ್ಪ ಎಂಬುವರನ್ನು ಕೊಲೆ ಮಾಡಿ ಪೊಲೀಸರ ಮುಂದೆ ರಾಜಶೇಖರ್ ಎಂಬಾತ ಶರಣಾಗಿದ್ದಾನೆ.
ಹಣ ನೀಡುವುದಾಗಿ ಸಬೂಬು ಹೇಳಿಕೊಂಡು ಮಹೇಶಪ್ಪನನ್ನು ನಿನ್ನೆ ಕಾರಿನಲ್ಲಿ ರಾಜಶೇಖರ್ ಕರೆತಂದಿದ್ದ. ಆವಲಹಳ್ಳಿ ಬಳಿ ಕಾರಿನಲ್ಲೇ ಇಬ್ಬರ ನಡುವೆ ಕಿತ್ತಾಟವಾಗಿದ್ದು, ಕೋಪದಲ್ಲಿ ರಾಜಶೇಖರ್ ರಾಡ್’ನಿಂದ ಮಹೇಶಪ್ಪನ ತಲೆಗೆ ಥಳಿಸಿದ್ದಾನೆ. ಪರಿಣಾಮ ಕಾರಿನಲ್ಲೇ ಮೃತಪಟ್ಟಿರುವುದಾಗಿ ಆರೋಪಿ ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸದ್ಯ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ಪ್ರಕರಣದ ವಿವರ: ನಂಜನಗೂಡು ಹಿಮನಗುಂಡಿ ಗ್ರಾಮದ ಮಹೇಶಪ್ಪ ಮತ್ತು ಆರೋಪಿ ರಾಜಶೇಖರ್ 13 ವರ್ಷಗಳಿಂದ ಪರಿಚಿತರಾಗಿದ್ದರು. ಮಹೇಶಪ್ಪ ಸಹಕಾರ-ಸಂಘ ಸೇರಿ ವಿವಿಧ ಬ್ಯಾಂಕ್ ಗಳಲ್ಲಿ ಹಲವು ಯೋಜನೆಯಡಿ ಸಾಲ ಕೊಡಿಸುವುದಾಗಿ ನಂಬಿಸಿ ಹಲವರಿಂದ ಹಣ ಪಡೆದಿದ್ದ. ಹಣ ಪಡೆದು ತಿಂಗಳುಗಳು ಕಳೆದರೂ ಲೋನ್ ಹಣ ಕೊಡಿಸದೆ ತೆಗೆದುಕೊಂಡ ಹಣವೂ ವಾಪಸ್ ನೀಡಿದೆ ವಂಚಿಸಿದ್ದ ಎನ್ನಲಾಗಿದೆ. ಆರೋಪಿ ರಾಜಶೇಖರ್ ಹಾಗೂ ಆತನ ತಾಯಿ ಮಹೇಶಪ್ಪನೊಂದಿಗೆ ಹಣಕಾಸಿನ ವ್ಯವಹಾರಗಳಲ್ಲಿ ಭಾಗಿಯಾಗಿದ್ದರು. ಆದರೆ ಲೋನ್ ಕೊಡಿಸದೆ ವಂಚಿಸಿದ್ದರಿಂದ ರಾಜಶೇಖರ್ ತಮ್ಮ ಮನೆ ಮಾರಾಟ ಮಾಡಿ ಹಣ ನೀಡಿದ್ದ. ಸ್ನೇಹಿತ ಮಾಡಿದ ವಂಚನೆಯಿಂದಾಗಿ ಕೋಟಿಗಟ್ಟಲೇ ಹಣ ಕಳೆದುಕೊಂಡಿದ್ದೇನೆ ಎಂದು ಪೊಲೀಸರ ಮುಂದೆ ರಾಜಶೇಖರ್ ಹೇಳಿರುವುದಾಗಿ ತಿಳಿದುಬಂದಿದೆ.














