ಹುಣಸೂರು: ನಗರದ 4 ಕಡೆ ಕಳ್ಳತನ ಸೇರಿದಂತೆ ರಾಜ್ಯದ ವಿವಿಧೆಡೆ ಕಳ್ಳತನ ನಡೆಸಿದ್ದ 18 ಪ್ರಕರಣಗಳನ್ನು ಬೇಧಿಸಿರುವ ಹುಣಸೂರು ನಗರ ಠಾಣೆ ಪೊಲೀಸರು ಆರೋಪಿಯೊಬ್ಬನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಮೈಸೂರು ಕೆಸರೆ ಬಳಿಯ ಬೆಲವೆತ್ತ ಗ್ರಾಮದ ವೆಲ್ಡಿಂಗ್ ಕಾರ್ಮಿಕ ಸೈಯದ್ ಉಸ್ಮಾನ್ ಉ. ಪೈಲ್ವಾನ್, ಉ.ಕಬೂತರ್ ಬಂಧಿತ ಆರೋಪಿ. ಈತನಿಂದ 1.72 ಲಕ್ಷ ರೂ. ನಗದು, 10 ಗ್ರಾಂ. ಚಿನ್ನಾಭರಣ, 3 ಬೈಕ್ ವಶಪಡಿಸಿಕೊಂಡಿದ್ದಾರೆ. ಮತ್ತೊರ್ವ ತಲೆ ಮರೆಸಿಕೊಂಡಿದ್ದಾನೆ.
ಕಳೆದ 2 ತಿಂಗಳಿಂನಿಂದ 2 ಪ್ರತ್ಯೇಕ ಪ್ರಕರಣದಲ್ಲಿ ಹುಣಸೂರು ನಗರದ ಬಜಾರ್ ರಸ್ತೆ, ಜೆಎಲ್.ಬಿ.ರಸ್ತೆ, ಹಳೇ ಸೇತುವೆ ಬಳಿಯ ಮೆಡಿಕಲ್ಸ್ ಸ್ಟೋರ್‌ಗಳ ಬೀಗ ಒಡೆದು ಕ್ಯಾಶಿಯರ್ ನಲ್ಲಿದ್ದ ನಗದು ಲಪಟಾಯಿಸಿ ಪರಾರಿಯಾಗುತ್ತಿದ್ದ.
ಈತನ ಬಂಧನಕ್ಕೆ ಎಸ್.ಪಿ.ವಿಷ್ಣುವರ್ಧನ್, ಅಡಿಷನಲ್ ಎಸ್.ಪಿ.ನಾಗೇಶ್, ಡಿ.ವೈ.ಎಸ್.ಪಿ ಗೋಪಾಲಕೃಷ್ಣರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಸಂತೋಷ್ ಕಶ್ಯಪ್ ನೇತೃತ್ವದ ತಂಡ ರಚಿಸಲಾಗಿತ್ತು.
ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆ ಬಳಿ ಬೈಕ್ ನಲ್ಲಿ ನಿಂತಿದ್ದ ವೇಳೆ ದಾಳಿ ನಡೆಸಿ ಓರ್ವನನ್ನು ಬಂಧಿಸಿದ್ದಾರೆ. ಮತ್ತೊರ್ವ ತಲೆ ಮರೆಸಿಕೊಂಡಿದ್ದಾನೆ.
ಈತನ ಬಂಧನದಿಂದ ಹುಣಸೂರು ನಗರದ 4, ಅಲ್ಲದೆ ಬೆಂಗಳೂರಿನ ರಾಮಮೂರ್ತಿ ಪೊಲೀಸ್ ಠಾಣಾ ವ್ಯಾಪ್ತಿಯ 3, ರಾಮನಗರ ಜಿಲ್ಲೆಯ ಕುದೂರು ಠಾಣಾ ವ್ಯಾಪ್ತಿಯ 5, ಮಂಡ್ಯ ಪೂರ್ವ ಪೊಲೀಸ್ ಠಾಣೆಯ 2, ಮೈಸೂರಿನ ಕೆ.ಆರ್. ಮತ್ತು ದೇವರಾಜ ಪೊಲೀಸ್ ಠಾಣೆ, ಕೆ.ಆರ್.ನಗರ ಠಾಣೆ ಹಾಗೂ ನಂಜನಗೂಡು ಪೊಲೀಸ್ ಠಾಣಾ ವ್ಯಾಪ್ತಿಯ ತಲಾ 1 ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ. ಮತ್ತೊರ್ವ ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ತೆ ಕಾರ್ಯದಲ್ಲಿ ಇನ್ಸ್‌ಪೆಕ್ಟರ್ ಸಂತೋಷ್ ಕಶ್ಯಪ್, ಎಸ್.ಐ.ಗಳಾದ ನಾಗಯ್ಯ, ಜಮೀರ್ ಅಹಮದ್, ಸಿಬ್ಬಂದಿ ಯೋಗೇಶ್, ಅರುಣ್, ರವೀಶ್, ಮಹೇಂದ್ರ, ದಿಲೀಪ್, ರವಿಕುಮಾರ್ ಭಾಗವಹಿಸಿದ್ದರು.