ಬೆಂಗಳೂರು: ರೈಲಿನಲ್ಲಿ ಪ್ರಯಾಣಿಕರ ಲ್ಯಾಪ್ ಟಾಪ್ ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬೆಳಗಾವಿ ಮೂಲದ ಭೀಮಪ್ಪ ದುಂಡಪ್ಪ ಬೀರಾಜ (19) ಎಂದು ಗುರುತಿಸಲಾಗಿದೆ.
ಆರೋಪಿಯು ಫೆಬ್ರವರಿ 1ರಂದು ಘಟಪ್ರಭಾದಿಂದ ಬೆಂಗಳೂರಿಗೆ ಬರುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಮಲಗಿದ್ದಾಗ ಅವರ ಲ್ಯಾಪ್ ಟಾಪ್ ಮತ್ತಿತರ ವಸ್ತುಗಳನ್ನು ಕಳ್ಳತನ ಮಾಡಿದ್ದ. ಈ ಕುರಿತು ಅರಸಿಕೆರೆ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಫೆಬ್ರವರಿ 6ರಂದು ಬೆಳಗಿನ ಜಾವ ಬೀರೂರು ರೈಲ್ವೆ ನಿಲ್ದಾಣದಲ್ಲಿ ವೇಟಿಂಗ್ ಹಾಲ್ ನಲ್ಲಿ ಕುಳಿತಿದ್ದ ಆರೋಪಿಯನ್ನು ಗಮನಿಸಿದ್ದ ರೈಲ್ವೆ ಪೊಲೀಸರು ಅನುಮಾನಗೊಂಡು ವಶಕ್ಕೆ ಪಡೆದಿದ್ದರು. ವಿಚಾರಿಸಿದಾಗ ಕಳ್ಳತನ ಪ್ರಕರಣಗಳು ಬಯಲಾಗಿವೆ.
ಆರೋಪಿಯಿಂದ ಡೆಲ್ ಕಂಪನಿಯ 4, ಹೆಚ್.ಪಿ.ಕಂಪನಿಯ 3, ಲೆನೊವೋ ಕಂಪನಿಯ 2 ಸೇರಿದಂತೆ ವಿವಿಧ ಕಂಪನಿಯ ಒಟ್ಟು 10 ಲ್ಯಾಪ್ ಟಾಪ್ ಗಳು ಸೇರಿದಂತೆ 6.56 ಲಕ್ಷ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.














