ಬೆಂಗಳೂರು: ರಾಜ್ಯದ ಕೆಲ ಸಾಹಿತಿಗಳಿಗೆ ಕೊಲೆ ಬೆದರಿಕೆ ಪತ್ರ ಬರೆದಿದ್ದ ಪ್ರಕರಣದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ಮೂಲದ ಶಿವಾಜಿರಾವ್ ಎಂಬಾತನನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಶಿವಾಜಿರಾವ್ ಹಿಂದೂ ಸಂಘಟನೆಯೊಂದರಲ್ಲಿ ಗುರುತಿಸಿಕೊಂಡಿದ್ದು, ಸಿಸಿಬಿ ವಿಚಾರಣೆ ವೇಳೆ ಬೆದರಿಕೆ ಪತ್ರ ಬರೆದಿದ್ದು ಯಾಕೆ ಎಂಬುವುದನ್ನು ಬಾಯಿಬಿಟ್ಟಿದ್ದಾನೆ.
ಕೆಲ ಸಾಹಿತಿಗಳು ಹಿಂದೂ ಧರ್ಮದ ವಿರೋಧಿಗಳು ಹೀಗಾಗಿ ಬೆದರಿಕೆ ಪತ್ರ ಬರೆದೆ ಎಂದು ಶಿವಾಜಿರಾವ್ ಹೇಳಿದ್ದಾನೆ. ಸದ್ಯ ಸಿಸಿಬಿ ಪೊಲೀಸರು ಶಿವಾಜಿರಾವ್ ಅವರ ಹಿನ್ನೆಲೆ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಶಿವಾಜಿರಾವ್ ಇದುವರೆಗೂ ಏಳು ಪತ್ರಗಳನ್ನು ಬರೆದಿದ್ದಾಗಿ ಒಪ್ಪಿಕೊಂಡಿದ್ದಾನೆ. ಸದ್ಯ ಸಿಸಿಬಿ ಪೊಲೀಸರು ಆರೋಪಿಯನ್ನ 10 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ.
ಹಾಗಾದರೆ ಯಾವೆಲ್ಲ ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆದಿದ್ದರು..?
ಕುಂ.ವೀರಭದ್ರಪ್ಪ (ಕೊಟ್ಟೂರು ಪೊಲೀಸ್ ಠಾಣೆ- 2022)
ಬಿ ಎಲ್ ವೇಣು – (ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆ-2022)
ಬಂಜಗೇರಿ ಜಯಪ್ರಕಾಶ್ – (ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಎರಡು ಕೇಸ್ 2022 ಹಾಗೂ 2023)
ಬಿ.ಟಿ ಲಲಿತಾ ನಾಯಕ್ – (ಸಂಜಯನಗರ ಪೊಲೀಸ್ ಠಾಣೆ 2022)
ವಸುಂಧರ ಭೂಪತಿ – (ಬಸವೇಶ್ವರ ನಗರ ಪೊಲೀಸ್ ಠಾಣೆ ಎರಡು ಕೇಸ್ 2022-2023)
ಪೊಲೀಸರು ಈ ಎಲ್ಲಾ ಬೆದರಿಕೆ ಪತ್ರಗಳನ್ನು ಎಫ್ ಎಸ್ ಎಲ್ ಗೆ ರವಾನೆ ಮಾಡಿದ್ದರು. ಎಫ್ ಎಸ್ಎ ಲ್ ವರದಿಯಲ್ಲಿ ಎಲ್ಲಾ ಪತ್ರಗಳನ್ನು ಒಬ್ಬರೇ ಬರೆದಿರುವುದು ದೃಢವಾಗಿತ್ತು. ಹೀಗಾಗಿ 2023 ರ ಆಗಸ್ಟ್ ನಲ್ಲಿ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು.