ಬೆಂಗಳೂರು(Bengaluru): ಸರ್ಕಾರಿ ಅಧಿಕಾರಿಗಳು ಮತ್ತು ನಮ್ಮ ವ್ಯವಸ್ಥೆ ಸಾರ್ವಜನಿಕರೊಂದಿಗೆ ನಡೆದುಕೊಳ್ಳುತ್ತಿರುವ ಪರಿ ಯಾವಾಗ ಸ್ಫೋಟಗೊಳ್ಳುತ್ತದೆಯೋ ಗೊತ್ತಿಲ್ಲ ಎಂದು ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಬೆಂಗಳೂರು ದಕ್ಷಿಣ ವ್ಯಾಪ್ತಿಯ 130 ಎಕರೆ ಪ್ರದೇಶದಲ್ಲಿ ಏರ್ ಕ್ರಾಫ್ಟ್ ಎಂಪ್ಲಾಯೀಸ್ ಕೋ–ಆಪ್ ಸೊಸೈಟಿ ನಿರ್ಮಿಸಿರುವ ಲೇ ಔಟ್‌ನಲ್ಲಿ ನಿವೇಶನಕ್ಕಾಗಿ ಹಣ ತುಂಬಿದ್ದರೂ ನಮಗೆ ಇನ್ನೂ ನಿವೇಶನ ನೀಡಿಲ್ಲ ಎಂದು ಆಕ್ಷೇಪಿಸಿ ಬಿ.ಆರ್.ಹೇಮಪ್ರಕಾಶ್ ಸೇರಿದಂತೆ ಐವರು ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಪರ ಹಾಜರಾಗಿದ್ದ ಹಿರಿಯ ವಕೀಲ ನಂಜುಂಡ ರೆಡ್ಡಿ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಹಾಗೂ ರಿಟ್ ಅರ್ಜಿಗಳು ವಿಚಾರಣೆಗೆ ಬಾಕಿ ಇವೆ. ಪರಿಷ್ಕೃತ ನಕ್ಷೆಗೆ ಸರ್ಕಾರ ಹಸಿರು ನಿಶಾನೆ ತೋರಿಲ್ಲ ಎಂದು ವಿವರಣೆ ನೀಡಲು ಮುಂದಾದರು.
ಇದಕ್ಕೆ ಕುಪಿತಗೊಂಡ ನ್ಯಾಯಪೀಠ, ನೀವು (ಬಿಡಿಎ) ಬೇಕಾದವರಿಗೆಲ್ಲಾ ಬೇಕೆಂದ ಕಡೆ ನಿವೇಶನ ನೀಡುತ್ತೀರಿ. ಆದರೆ, ಬಡವರು ದುಡ್ಡು ತುಂಬಿದರೂ ನಿವೇಶನ ನೀಡುವುದಿಲ್ಲ. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿ ಹತ್ತು ವರ್ಷಗಳಾಗಿವೆ. ಫಲಾನುಭವಿಗಳು ನಿವೇಶನಕ್ಕಾಗಿ ಎಷ್ಟು ಪರದಾಡಬೇಕು. ನಿಮ್ಮ ಜೊತೆ ಸಮರ ಮಾಡುತ್ತಾ ಮಾಡುತ್ತಾ ಅವರು ಇದ್ದಲ್ಲಿಯೇ ಸಮಾಧಿ ಕಟ್ಟಿಕೊಳ್ಳಬೇಕಾ ಎಂದು ತರಾಟೆಗೆ ತೆಗೆದುಕೊಂಡಿತು.
ನಮ್ಮ ಜನ ಇನ್ನೂ ಸುಮ್ಮನಿದ್ದಾರೆ. ಯಾಕೆಂದರೆ, ಅವರೆಲ್ಲಾ ಭಾಳಾ ಸಜ್ಜನರಿದ್ದಾರೆ. ಒಂದು ವೇಳೆ ನಮ್ಮಲ್ಲಿರುವಂತಹ ವ್ಯವಸ್ಥೆ ಏನಾದರೂ ಫ್ರಾನ್ಸ್, ಜರ್ಮನಿಯಂತಹ ದೇಶಗಳಲ್ಲಿ ಇದ್ದಿದ್ದರೆ ಅಲ್ಲಿನ ಜನರು ವ್ಯವಸ್ಥೆಯ ಪ್ರಮುಖರನ್ನು ಅವರು ವಾಕಿಂಗ್ ಹೋಗುವಾಗ ಇಲ್ಲವೇ ಕಾರುಗಳಲ್ಲಿ ತೆರಳುವಾಗ ಹೊರಗೆಳೆದು ಅಧಿಕಾರಿಗಳು, ನ್ಯಾಯಮೂರ್ತಿಗಳು, ವಕೀಲರೆನ್ನದೆ ಬಾರಿಸುತ್ತಿದ್ದರು ಎಂದು ಆಕ್ರೋಶ ಹೊರ ಹಾಕಿತು.
ನಮ್ಮ ಜನರು ನಮ್ಮಂತಹವರನ್ನೆಲ್ಲಾ ಬೈದುಕೊಂಡು ಅಡ್ಡಾಡುತ್ತಿದ್ದಾರಷ್ಟೇ. ಅವರ ಕೋಪ ಇನ್ನೂ ರಟ್ಟೆಗೆ ಇಳಿದಿಲ್ಲ. ಇದನ್ನು ನೀವು ನೆನಪಿಟ್ಟುಕೊಳ್ಳಿ. ಬೇಕಾದರೆ ನನ್ನ ಈ ಮಾತುಗಳು ನಿಜ ಹೌದೋ ಅಲ್ಲವೋ ಎಂಬುದನ್ನು ಸಾರ್ವಜನಿಕರ ಮಧ್ಯೆ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಹೋಗಿ ಪರೀಕ್ಷಿಸಿ ಎಂದು ನ್ಯಾಯಪೀಠ ತೀವ್ರ ಅಸಮಾಧಾನ ಹೊರಹಾಕಿತು. ವಿಚಾರಣೆಯನ್ನು ನವೆಂಬರ್ 2ಕ್ಕೆ ಮುಂದೂಡಲಾಗಿದೆ.