ಐಎಂಎ ಸಮೂಹದ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರೋಷನ್ ಬೇಗ್ ಅವರಿಗೆ ಸೇರಿದ 20 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ ಮಾಡಲು ಕೋರಿ ಸಕ್ಷಮ ಪ್ರಾಧಿಕಾರವು ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಈಚೆಗೆ ವಜಾಗೊಳಿಸಿದೆ.
ರೋಷನ್ ಬೇಗ್ ಅವರು ಐಎಂಎ ಸಮೂಹದ ಪ್ರಚಾರಕರಾಗಿದ್ದು, ಅವರಿಗೆ ಸೇರಿದ ಆಸ್ತಿ ಜಪ್ತಿ ಮಾಡಲು ಅನುಮತಿ ನೀಡುವಂತೆ ಕೋರಿ ಸಕ್ಷಮ ಪ್ರಾಧಿಕಾರದ ಅಧಿಕಾರಿಯು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು 91ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ (ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ಹೂಡಿಕೆದಾರರ ಹಿತಾಸಕ್ತಿ ರಕ್ಷಣಾ ಕಾಯಿದೆ ಅಡಿ ಸ್ಥಾಪನೆಗೊಂಡಿರುವ ವಿಶೇಷ ನ್ಯಾಯಾಲಯ) ನ್ಯಾಯಾಧೀಶರಾದ ಶ್ರೀಧರ ಗೋಪಾಲಕೃಷ್ಣ ಭಟ್ ಅವರು ನಡೆಸಿದರು.
ಐಎಂಎ ಸಂಸ್ಥೆಯ ವಾರ್ಷಿಕ ರಿಟರ್ನ್ಸ್ನಲ್ಲಿ ರೋಷನ್ ಬೇಗ್ ಅವರನ್ನ ಸಂಸ್ಥೆಯ ಪ್ರಚಾರಕರು ಎಂದು ಗುರುತಿಸಿಲ್ಲ. ಷೇರು ಪಾಲುದಾರರಾಗಿ ಅಥವಾ ನಿರ್ದೇಶಕರಾಗಿ ಸಂಸ್ಥೆಯ ವ್ಯವಹಾರಗಳ ಮೇಲೆ ಬೇಗ್, ನೇರ ಅಥವಾ ಪರೋಕ್ಷವಾಗಿ ಯಾವುದೇ ನಿಯಂತ್ರಣ ಹೊಂದಿರಲಿಲ್ಲ. ಅವರ ಸಲಹೆ, ನಿರ್ದೇಶನ ಅಥವಾ ಸೂಚನೆಯಂತೆ ಐಎಂಎ ಸಮೂಹ ಕಾರ್ಯನಿರ್ವಹಿಸಿಲ್ಲ. ಆದ್ದರಿಂದ ಬೇಗ್ ಅವರನ್ನು ಸಂಸ್ಥೆಯ ಪ್ರಚಾರಕರಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಆದರೆ, ಐಎಂಎ ಸಮೂಹದ ವ್ಯಾಪಾರ ವಹಿವಾಟಿನಲ್ಲಿ ಬೇಗ್ ಅವರು ಪಾತ್ರ ವಹಿಸಿರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಾಲಯವು ಸಂಸ್ಥೆಯೊಂದಿಗೆ ಬೇಗ್ ವ್ಯಾಪಾರದ ಸಂಬಂಧ ಹೊಂದಿದ್ದರು. ಶಿವಾಜಿನಗರದ ಶಾಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂಸ್ಥೆಯಿಂದ ಬೇಗ್ ಅವರು ಪತ್ರ ಕಳುಹಿಸಿದ್ದರು. ಬೇಗ್ ಅವರು ಐಎಂಎ ಜೊತೆಗೆ ಹೊಂದಿದ್ದ ಸಂಬಂಧವು ಆ ಸಂಸ್ಥೆ ಬಗ್ಗೆ ಜನರಲ್ಲಿ ವಿಶ್ವಾಸ ಹೆಚ್ಚಿಸಿರಬಹುದು. ಆದ ಮಾತ್ರಕ್ಕೆ ಬೇಗ್ ಸಂಸ್ಥೆಯ ಪ್ರಚಾರಕರಾಗಿದ್ದರು ಎಂಬ ತೀರ್ಮಾನಕ್ಕೆ ಬರಲಾಗದು ಎಂದು ನ್ಯಾಯಾಲಯ ತಿಳಿಸಿದೆ.
ಬೇಗ್ ಅವರ ಆಸ್ತಿ ಜಪ್ತಿಗೆ ಸರ್ಕಾರ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಇದೇ ವೇಳೆ ನ್ಯಾಯಾಲಯವು ರದ್ದುಪಡಿಸಿದೆ. ಐಎಂಎ ಸಮೂಹವು ಹೂಡಿಕೆದಾರರಿಗೆ ಸುಮಾರು 500 ಕೋಟಿ ರೂಪಾಯಿ ವಂಚನೆ ಮಾಡಿದ ಪ್ರಕರಣದಲ್ಲಿ ರೋಷನ್ ಬೇಗ್ ಸಹ ಆರೋಪಿಯಾಗಿದ್ದಾರೆ. ಪ್ರಕರಣದ ಸಂಬಂಧ ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.