ನವದೆಹಲಿ(New Delhi): ವೀಸಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ ಅವರ ನಿಕಟವರ್ತಿ ಎಸ್.ಭಾಸ್ಕರ್ ರಾಮನ್ ಅವರನ್ನು ಸಿಬಿಐ ಅಧಿಕಾರಿಗಳು ಮಂಗಳವಾರ ತಡರಾತ್ರಿ ವಿಚಾರಣೆ ನಡೆಸಿದ ಬಳಿಕ ಬಂಧಿಸಿದ್ದಾರೆ.
ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ ಅವರಿಗೆ ಸೇರಿದ ಮುಂಬೈ ಮತ್ತು ಚೆನ್ನೈನಲ್ಲಿರುವ ಮನೆ ಹಾಗು ಕಚೇರಿಗಳ ಮೇಲೆ ಮಂಗಳವಾರ ಬೆಳಗ್ಗೆ ಕೇಂದ್ರ ತನಿಖಾ ದಳ ದಾಳಿ ನಡೆಸಿತ್ತು. ನಿಯಮ ಮೀರಿ ನೆಲೆಸಿದ್ದ 260ಕ್ಕೂ ಹೆಚ್ಚು ಚೀನಿ ಪ್ರಜೆಗಳಿಗೆ ವೀಸಾ ಕೊಡಿಸಿ ಅದಕ್ಕೆ ಪ್ರತಿಯಾಗಿ 50 ಲಕ್ಷ ರೂ. ಲಂಚ ಪಡೆದಿರುವ ಗಂಭೀರ ಆರೋಪ ಕೇಳಿಬಂದಿದ್ದು, ಸಿಬಿಐ ಹೊಸ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.
ಸಿಬಿಐ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಕಾರ್ತಿ ಚಿದಂಬರಂ ಅವರ ಸಹವರ್ತಿ ಎಸ್. ಭಾಸ್ಕರ್ ರಾಮನ್ ವಿರುದ್ಧವೂ ಲಂಚದ ಆರೋಪ ಕೇಳಿಬಂದಿತ್ತು. ಈ ಹಿಂದೆ ಐಎನ್‌ಎಕ್ಸ್ ಮೀಡಿಯಾ ಹಾಗೂ ಏರ್‌ಸೆಲ್ ಮ್ಯಾಕ್ಸಿಸ್ ಹಗರಣದಲ್ಲೂ ಸಿಬಿಐ ಕಾರ್ತಿ ಚಿದಂಬರಂ ಅವರನ್ನು ಹಲವು ಬಾರಿ ವಿಚಾರಣೆಗೊಳಪಡಿಸಿತ್ತು.