ಮನೆ ಕ್ರೀಡೆ ಚೆಕ್‌ ಹರಿದು ಎಸೆದ ಪಾಕ್‌ ಕ್ಯಾಪ್ಟನ್‌ ದುರಹಂಕಾರ..!

ಚೆಕ್‌ ಹರಿದು ಎಸೆದ ಪಾಕ್‌ ಕ್ಯಾಪ್ಟನ್‌ ದುರಹಂಕಾರ..!

0

ದುಬೈ : ತಿಲಕ್ ವರ್ಮಾ ಅಮೋಘ ಬ್ಯಾಟಿಂಗ್ ನೆರವಿನಿಂದ ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು 5 ವಿಕೆಟ್‌ಗಳ ಅಂತರದಿಂದ ಮಣಿಸಿದ ಭಾರತ ಪಹಲ್ಗಾಮ್ ದಾಳಿಗೆ ಪಿಚ್‌ನಲ್ಲೂ ಪ್ರತೀಕಾರ ತೀರಿಸಿಕೊಂಡಿದೆ. ಆ ಬಳಿಕ ಮೈದಾನದಲ್ಲಿ ದೊಡ್ಡ ಹೈಡ್ರಾಮಾವೇ ನಡೆದಿದೆ.

ಪಾಕಿಸ್ತಾನದ ಸಚಿವ ಹಾಗೂ ಏಷ್ಯಾ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ನಖ್ವಿಯಿಂದ ಕಪ್‌ ಸ್ವೀಕಾರಕ್ಕೆ ಭಾರತ ನಿರಾಕರಿಸಿದೆ. ಕಪ್‌ ಇಲ್ಲದೆಯೂ ಪಿಚ್‌ನಲ್ಲಿ ಟೀಂ ಇಂಡಿಯಾ ಆಟಗಾರರು ಸಂಭ್ರಮಿಸಿದ್ದಾರೆ. ಪಂದ್ಯ ಮುಗಿದ ಒಂದು ಗಂಟೆ ಬಳಿಕ ಪ್ರಶಸ್ತಿ ವಿತರಣೆ ಸಮಾರಂಭ ಆರಂಭವಾಯಿತು. ಮೊದಲಿಗೆ ಪಾಕಿಸ್ತಾನ ಆಟಗಾರರಿಗೆ ರನ್ನರ್ ಆಪ್ ಬಹುಮಾನ ವಿತರಣೆ ಮಾಡಲಾಯಿತು.

ಈ ವೇಳೆ, ಪಾಕ್‌ನ ಪ್ರತಿ ಆಟಗಾರರು ವೇದಿಕೆ ಮೇಲೆ ಬಂದಾಗಲೂ ‘ಮೋದಿ… ಮೋದಿ, ಇಂಡಿಯಾʼ ಎಂದು ಪ್ರೇಕ್ಷಕರು ಘೋಷಣೆ ಕೂಗಿದ್ದಾರೆ. ಇದರಿಂದ ಪಾಕ್ ಆಟಗಾರರು ತೀವ್ರ ಮುಜುಗರಕ್ಕೊಳಗಾದರು. ರನ್ನರ್ ಅಪ್ ಬಹುಮಾನಕ್ಕೆ ಬಂದ ಪಾಕ್ ಕ್ಯಾಪ್ಟನ್ ಸಲ್ಮಾನ್ ಬಾಂಗ್ಲಾ ಕ್ರಿಕೆಟ್‌ ಮುಖ್ಯಸ್ಥರಿಂದ ಚೆಕ್‌ನ್ನು ಪಡೆದು ವೇದಿಕೆ ಮೇಲೆಯೇ ಹರಿದು ಎಸೆದಿದ್ದಾರೆ.

ಭಾರತದ ಆಟಗಾರರಿಗೆ ಕಪ್‌ ನೀಡಲು ನಖ್ವಿ ವೇದಿಕೆಗೆ ಬಂದಾಗ ಟೀಂ ಇಂಡಿಯಾ ಆಟಗಾರರು ವೇದಿಕೆಯಿಂದ 10-15 ಅಡಿ ದೂರ ನಿಂತು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಟ್ರೋಫಿ ಸ್ವೀಕರಿಸದೇ ಮೈದಾನದಲ್ಲಿ ಸಂಭ್ರಮಿಸಿದ್ದಾರೆ. ಪಂದ್ಯ ಶ್ರೇಷ್ಠ ಸೇರಿದಂತೆ ಇನ್ನಿತರ ಪ್ರಶಸ್ತಿಯನ್ನು ಉಳಿದ ಗಣ್ಯರಿಂದ ಭಾರತದ ಆಟಗಾರರು ಪಡೆದಿದ್ದಾರೆ. ಬಳಿಕ ನಿರೂಪಕ ಸೈಮನ್‌ ಡೋಲ್‌ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ಎಸಿಸಿ ಮಾಹಿತಿ ನೀಡಿದೆ ಎಂದು ಕಾರ್ಯಕ್ರಮವನ್ನು ಕೊನೆಗೊಳಿಸಿದ್ದಾರೆ.

ಎರಡೂ ರಾಷ್ಟ್ರಗಳ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ಮತ್ತು ಕ್ರೀಡಾ ಉದ್ವಿಗ್ನತೆಯನ್ನು ಪ್ರತಿಬಿಂಬಿಸುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ನಿರ್ದೇಶನದ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿ ಉಗ್ರರು ದಾಳಿ ನಡೆಸಿದ್ದರು.

ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಸಾವನ್ನಪ್ಪಿದ್ದರು. ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ಭಾರತ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ನಡೆಸಿತು. ಇದು ಉಭಯ ದೇಶಗಳ ನಡುವಿನ ಸಂಘರ್ಷಕ್ಕೆ ಕಾರಣವಾಯಿತು. ಅಲ್ಲಿಂದ ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಏರ್ಪಟ್ಟಿದೆ.