ಡಾರ್ಲಿಂಗ್ ಕೃಷ್ಣ ನಟನೆಯ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಜುಲೈ 28ರಂದು ಬಿಡುಗಡೆ ಆಗುತ್ತಿದೆ. ಅದಕ್ಕೂ ಮುನ್ನ ಪೇಯ್ಡ್ ಪ್ರೀಮಿಯರ್ ಮಾಡಲಾಗಿದೆ. ಪ್ರೀಮಿಯರ್ ಶೋನಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರು ಸಖತ್ ಇಷ್ಟಪಟ್ಟಿದ್ದಾರೆ. ವಿಶೇಷವಾಗಿ ಫ್ಯಾಮಿಲಿ ಪ್ರೇಕ್ಷಕರು ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾವನ್ನು ಎಂಜಾಯ್ ಮಾಡುತ್ತಿದ್ದಾರೆ.
ಡಾರ್ಲಿಂಗ್ ಕೃಷ್ಣ ಅವರಿಗೆ ಜೋಡಿಯಾಗಿ ಬೃಂದಾ ಆಚಾರ್ಯ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮಿಲನಾ ನಾಗರಾಜ್ ಅವರಿಗೂ ಒಂದು ಪಾತ್ರ ಇದೆ. ಶಶಾಂಕ್ ನಿರ್ದೇಶನದ ಈ ಸಿನಿಮಾ ಬಿಡುಗಡೆಗೂ ಮುನ್ನವೇ ದೊಡ್ಡ ಟಾಕ್ ಕ್ರಿಯೇಟ್ ಮಾಡಿದೆ. ಜನರಿಂದ ಬಾಯಿ ಮಾತಿನ ಪ್ರಚಾರ ಸಿಗುತ್ತಿರುವ ಕಾರಣ ಶುಕ್ರವಾರ (ಜುಲೈ 28) ಕೂಡ ಹೌಸ್ಫುಲ್ ಆಗುವುದು ಖಚಿತವಾಗಿದೆ.
ಇತ್ತೀಚೆಗಷ್ಟೇ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದ ಪೇಯ್ಡ್ ಪ್ರೀಮಿಯರ್ ಶೋನ ಬುಕಿಂಗ್ ಶುರುವಾಗಿತ್ತು. ಕೆಲವೇ ಗಂಟೆಗಳಲ್ಲಿ ಎಲ್ಲ ಟಿಕೆಟ್ ಗಳು ಸೋಲ್ಡ್ ಔಟ್ ಆದವು ಎಂಬುದು ವಿಶೇಷ. ಹಾಡುಗಳು ಕೂಡ ಸೂಪರ್ ಹಿಟ್ ಆಗಿವೆ. ಈ ಎಲ್ಲ ಕಾರಣಗಳಿಂದ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಮೇಲೆ ಜನರು ನಿರೀಕ್ಷೆ ಇಟ್ಟುಕೊಂಡಿದ್ದರು. ಆ ನಿರೀಕ್ಷೆಯ ಮಟ್ಟವನ್ನು ತಲುಪುವಲ್ಲಿ ಈ ಚಿತ್ರ ಯಶಸ್ವಿ ಆಗಿದೆ ಎನ್ನುತ್ತಿದ್ದಾರೆ ಪ್ರೇಕ್ಷಕರು.
‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಅವರ ಪಾತ್ರಕ್ಕೆ ಬೇರೆ ಬೇರೆ ಶೇಡ್ಸ್ ಇವೆ. ‘ಎಲ್ಲ ಪುರುಷರು ತಮ್ಮ ಕುಟುಂಬದವರ ಜೊತೆಯಲ್ಲಿ ಕುಳಿತು ನೋಡಲೇಬೇಕಾದ ಸಿನಿಮಾ ಇದು’ ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ. ಮಿಲನಾ ನಾಗರಾಜ್ ಅವರ ಪಾತ್ರದಲ್ಲಿ ಇರುವ ಸಸ್ಪೆನ್ಸ್ ಮತ್ತು ಟ್ವಿಸ್ಟ್ ಕೂಡ ಜನರಿಗೆ ಇಷ್ಟ ಆಗಿದೆ. ಒಟ್ಟಾರೆಯಾಗಿ ಸಿನಿಮಾ ಮೂಡಿಬಂದಿರುವ ರೀತಿಗೆ ಜನರು ಫಿದಾ ಆಗಿದ್ದಾರೆ. ನಾಗಭೂಷಣ, ಅಚ್ಯುತ್ ಕುಮಾರ್, ರಂಗಾಯಣ ರಘು, ಸುಧಾ ಬೆಳವಾಡಿ ಮುಂತಾದ ಕಲಾವಿದರ ನಟನೆಗೆ ಪ್ರೇಕ್ಷಕರು ಭೇಷ್ ಎನ್ನುತ್ತಿದ್ದಾರೆ.