ಲಂಡನ್: ಮೊದಲ ಟೆಸ್ಟ್ ನಲ್ಲಿ ರೋಚಕ ಜಯ ಸಾಧಿಸಿದ ಆಸ್ಟ್ರೇಲಿಯಾ ಎರಡನೇ ಟೆಸ್ಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿದೆ.
ಕಾಂಗರೂಗಳು ದಿನದಂತ್ಯ ಆಟಕ್ಕೆ ಓವರ್ ಗಳಲ್ಲಿ ಕೇವಲ 5 ವಿಕೆಟ್ ಕಳೆದುಕೊಂಡು 339 ರನ್ ಗಳಿಸಿದೆ.
ಇಂಗ್ಲೆಂಡ್ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿರುವ ಸ್ಟೀವ್ ಸ್ಮಿತ್ 85 ರನ್ ಕಲೆಹಾಕಿ ಶತಕದ ಹಾದಿಯಲ್ಲಿದ್ದಾರೆ. 77 ರನ್ ಕಲೆ ಹಾಕಿದ್ದ ಟ್ರಾವಿಸ್ ಹೆಡ್ ಉತ್ತಮವಾಗಿಯೇ ಪ್ರದರ್ಶನ ತೋರಿ ಪೆವಿಲಿಯನ್ ಹಾದಿ ಹಿಡಿದರು.
ಇಂಗ್ಲೆಂಡ್ ಬೌಲರ್ ಗಳ ಬೇವರಿಳಿಸಿದ ಡೇವಿಡ್ ವಾರ್ನರ್ 66 ರನ್ ಗಳಿಸಿ ಔಟಾದರು. ಮಾರ್ನಸ್ ಲ್ಯಾಬುಸ್ಚಾಗ್ನೆ ಅವರು 47 ರನ್ ಗಳಿಸಿ ಔಟಾಗುವ ಮೂಲಕ ಅರ್ಧ ಶತಕದಿಂದ ವಂಚಿತರಾದರು. 70 ಎಸೆತಗಳನ್ನು ಎದುರಿಸಿರುವ ಉಸ್ಮಾನ್ ಖವಾಜಾ ಕೇವಲ 17 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು.
ಆಟದ ಅಂತ್ಯದಲ್ಲಿ ಅಲೆಕ್ಸ್ ಕ್ಯಾರಿ 11 ರನ್ ಗಳಿಸಿ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ.
ಇಂಗ್ಲೆಂಡ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ವಾರ್ನರ್ ಆಂಗ್ಲ ಬೌಲರ್ಗಳ ಬೇವರಿಳಿಸಿದರು. ಆದರೆ ಖವಾಜಾ ಮಾತ್ರ ನಿಧಾನವಾಗಿಯೇ ಬ್ಯಾಟ್ ಬೀಸುತ್ತಿದ್ದರು. ಕೇವಲ 66 ಎಸೆತಗಳಲ್ಲಿ 6 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಅರ್ಧಶತಕ ಪೂರೈಸಿದರು. ಆಂಡರ್ಸನ್ ಮತ್ತು ಬ್ರಾಡ್ ಜೊತೆಗೆ ಓಲಿ ರಾಬಿನ್ಸನ್ ಆರಂಭಿಕರ ವಿಕೆಟ್ ತೆಗೆಯುವಲ್ಲಿ ವಿಫಲಗೊಂಡರು.
ಆದರೆ, ಯುವ ವೇಗಿ ಜೋಶ್ ಟಂಗ್ ಇಂಗ್ಲೆಂಡ್‌ಗೆ ರಿಲೀಫ್ ನೀಡಿದರು.ಹೌದು, ಜೋಶ್ ಟಂಗ್ ಅವರು ಊಟದ ಮೊದಲು ಖವಾಜಾ ಮತ್ತು ವಿರಾಮದ ನಂತರ ವಾರ್ನರ್ ಅವರನ್ನು ಬೌಲ್ಡ್ ಮಾಡಿದರು. ಅದರಲ್ಲೂ ವಾರ್ನರ್ ಬೌಲ್ಡ್ ಮಾಡಿದ ಇನ್ಸ್ವಿಂಗರ್ ಮೊದಲ ದಿನದಾಟದ ಹೈಲೈಟ್ ಆಗಿದೆ. ಆದರೆ ಆ ಬಳಿಕ ಆಂಗ್ಲ ತಂಡ ಸಂಕಷ್ಟದ ಸನ್ನಿವೇಶಗಳನ್ನು ಎದುರಿಸಿತು. ಮೊದಲ ಟೆಸ್ಟ್ ನಲ್ಲಿ ವಿಫಲರಾಗಿದ್ದ ಸ್ಟೀವ್ ಸ್ಮಿತ್ ಈ ಬಾರಿ ಕ್ರೀಸ್ ನಲ್ಲಿ ಬೇರೂರಿದ್ದಾರೆ. ಲ್ಯಾಬುಸ್ಚಾಗ್ನೆ ಕೂಡ ಗಟ್ಟಿಯಾಗಿ ನಿಂತರು. ಈ ಜೋಡಿ ಮೂರನೇ ವಿಕೆಟ್ ಗೆ 102 ರನ್ ಕಲೆ ಹಾಕಿತು.
ಟೀ ವಿರಾಮದ ನಂತರ ರಾಬಿನ್ಸನ್ ಬೌಲಿಂಗ್ ಗೆ ಲ್ಯಾಬುಸ್ಚಾಗ್ನೆ ಔಟಾದರು. ಲ್ಯಾಬುಸ್ಚಾಗ್ನೆ ಔಟಾದ ಬಳಿಕ ಬಂದ ಹೆಡ್ ಏಕದಿನ ಪಂದ್ಯದಂತೆ ಆಡಿ ರನ್‌ಗಳ ಮಹಾಪೂರವನ್ನೇ ಹರಿಸಿದರು. 48 ಎಸೆತಗಳಲ್ಲಿ 9 ಬೌಂಡರಿಗಳ ನೆರವಿನಿಂದ ಅರ್ಧಶತಕ ಗಳಿಸಿದರು.
ಸ್ಮಿತ್ ಮತ್ತು ಹೆಡ್ ಮತ್ತೊಂದು ಶತಕದ ಜೊತೆಯಾಟವಾಡಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು. ಅವರು ಒಂದೇ ಓವರ್ ನಲ್ಲಿ ಹೆಡ್ ಮತ್ತು ಗ್ರೀನ್ (0) ಅವರನ್ನು ಔಟ್ ಮಾಡಿದರು. ಆ ಬಳಿಕ ಸ್ಮಿತ್ ಕ್ಯಾರಿ ಜತೆಗೂಡಿ ಮತ್ತೊಂದು ವಿಕೆಟ್ ಪಡೆಯದಂತೆ ಎಚ್ಚರಿಕೆ ವಹಿಸಿದರು.
ದಿನದಂತ್ಯ ಆಟಕ್ಕೆ ಆಸ್ಟ್ರೇಲಿಯಾ ತಂಡ ತನ್ನ ಐದು ವಿಕೆಟ್ ಗಳನ್ನು ಕಳೆದುಕೊಂಡು 339 ರನ್ಗಳನ್ನು ಕಲೆ ಹಾಕಿದೆ. ಇನ್ನು ಇಂಗ್ಲೆಂಡ್ ಪರ ಜೋಶ್ ಟಂಗ್ ಮತ್ತು ಜೋ ರೂಟ್ ತಲಾ ಎರಡೆರಡು ವಿಕೆಟ್ ಪಡೆದು ಮಿಂಚಿದರು.