ಆಧುನಿಕ ಕಾಲದಲ್ಲಿ ಕೆಲಸವೆಂದರೆ ಸಾಕು ಕಣ್ಣಿಗೆ ಆಯಾಸವಾಗುವಂತದ್ದೇ ಆಗಿರುತ್ತದೆ ಏಕೆಂದರೆ ಹೆಚ್ಚಿನ ಜನರು ಕಂಪ್ಯೂಟರ್ ಇತ್ಯಾದಿಗಳ ಮೂಲಕವೇ ಕೆಲಸ ಮಾಡುವುದರಿಂದ ಕಣ್ಣಿಗೆ ಹೆಚ್ಚು ಒತ್ತಡ ನೀಡುವುದನ್ನು ನೋಡಬಹುದು. ಇಡೀ ದಿನ ಕೆಲಸ ಮಾಡುವುದರಿಂದ ಕಣ್ಣಿಗೆ ಆಯಾಸವಾಗುವುದು ಮತ್ತು ಕಾಲಾನಂತರ ಕಣ್ಣಿನ ಸಮಸ್ಯೆಯಾಗುವುದು ಸಹಜವಾಗಿದೆ.
ಕಣ್ಣಿಲ್ಲದೆ ಏನೂ ಮಾಡಲು ಸಾಧ್ಯವಿಲ್ಲ ಆದ್ದರಿಂದ ಕಣ್ಣಿನ ಆರೈಕೆಯ ಬಗ್ಗೆ ಕಾಳಜಿವಹಿಸುವುದು ಅಷ್ಟೇ ಮುಖ್ಯವಾಗುತ್ತದೆ. ಆದರೆ ನಮ್ಮಲ್ಲಿ ಹೆಚ್ಚಿನವರು ಕಣ್ಣಿನ ಆರೈಕೆಯನ್ನು ಮರೆಯುವುದು ಸಹಜ ಎನ್ನಬಹುದು. ದಿನವಿಡೀ ಕೆಲಸ ಮಾಡುವ ಕಣ್ಣು ಆಯಾಸಗೊಳ್ಳುತ್ತದೆ. ಅದರಲ್ಲೂ ಕಂಪ್ಯೂಟರ್ ನಂತಹ ಸ್ಕ್ರೀನ್ ಗಳಿಗೆ ಒಡ್ಡಿಕೊಳ್ಳುವಾಗ ಕಣ್ಣಿಗೆ ಮತ್ತಷ್ಟು ಆಯಾಸವಾಗುತ್ತದೆ. ಇದರಿಂದಾಗಿ ಕಣ್ಣಿನಲ್ಲಿ ಕೆಂಪಾಗುವಿಕೆ, ಒಣಗುವಿಕೆ, ತುರಿಕೆ ಮತ್ತು ಸ್ವಲ್ಪ ಪ್ರಮಾಣದ ನೋವು ಕಾಣಿಸಿಕೊಳ್ಳಬಹುದು.
ನಿಮ್ಮ ಕಣ್ಣಿನ ಕಾಳಜಿವಹಿಸಲು ನೀವು ಆಗಾಗ್ಗೆ ದೃಷ್ಟಿಯನ್ನು ಸ್ಕ್ರೀನ್ ಗಳಿಂದ ತಪ್ಪಿಸಬೇಕು ಮತ್ತು ಆಗಾಗ್ಗೆ ಮುಚ್ಚಿ ತೆರೆಯುವುದು ಮಾಡುತ್ತಿರಬೇಕು. ಹೆಚ್ಚು ನೀರು ಕುಡಿಯುವುದು ಮತ್ತು ದಣಿದಾಗ ನಿಮ್ಮ ಮುಖ ಮತ್ತು ಕಣ್ಣುಗಳನ್ನು ತೊಳೆಯುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ಇದಲ್ಲದೆ ಕಚೇರಿಯಲ್ಲಿ ಕೆಲಸ ಮಾಡಿದ ನಂತರ ಅಭ್ಯಾಸ ಮಾಡಲು ಕೆಲವು ಯೋಗ ಭಂಗಿಗಳಿವೆ. ಈ ಆಸನಗಳು ಕಣ್ಣಿನ ಆಯಾಸವನ್ನು ಹೇಗೆ ಕಡಿಮೆ ಮಾಡುತ್ತದೆ.
ಪಾಮಿಂಗ್ – ಈ ಯೋಗ ವ್ಯಾಯಾಮವನ್ನು ಪಾಮಿಂಗ್ ಎಂದು ಕರೆಯಲಾಗುತ್ತದೆ. ಇದು ಕಣ್ಣುಗಳಿಗೆ ವಿಶ್ರಾಂತಿ ನೀಡುವ ಸರಳ ತಂತ್ರವಾಗಿದೆ. ಉಷ್ಣತೆಯನ್ನು ಸೃಷ್ಟಿಸಲು ನಿಮ್ಮ ಕೈಗಳನ್ನು ಚುರುಕಾಗಿ ಉಜ್ಜುವ ಮೂಲಕ ಪ್ರಾರಂಭಿಸಿ. ನಂತರ, ಒತ್ತಡವನ್ನು ಅನ್ವಯಿಸದೆ ನಿಮ್ಮ ಮುಚ್ಚಿದ ಕಣ್ಣುಗಳ ಮೇಲೆ ನಿಮ್ಮ ಬೆಚ್ಚಗಿನ ಅಂಗೈಗಳನ್ನು ನಿಧಾನವಾಗಿ ಇರಿಸಿ. ಶಾಖ ಮತ್ತು ಕತ್ತಲೆ ಕಣ್ಣಿನ ಸ್ನಾಯುಗಳನ್ನು ಶಮನಗೊಳಿಸಲು ಮತ್ತು ನರಮಂಡಲವನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.
ಕಣ್ಣುಗಳನ್ನು ತಿರುಗಿಸುವುದು – ಯೋಗ ತಜ್ಞರ ಪ್ರಕಾರ, ಕಣ್ಣುಗಳನ್ನು ಪ್ರದಕ್ಷಿಣಾಕಾರವಾಗಿ ಮತ್ತು ಅಪ್ರದಕ್ಷಿಣಾಕಾರದಿಂದ ನಿಧಾನವಾಗಿ ತಿರುಗಿಸುವುದರಿಂದ ಕಣ್ಣಿನ ಸ್ನಾಯುಗಳು ಸಡಿಲಗೊಳ್ಳುತ್ತವೆ ಮತ್ತು ವಿಶ್ರಾಂತಿ ಪಡೆಯುತ್ತವೆ. ಈ ಸರಳ ಚಲನೆಯು ಕಣ್ಣುಗಳ ಸುತ್ತ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ದೀರ್ಘಕಾಲದ ಸ್ಕ್ರೀನ್ ಗಳ ಬಳಕೆಯಿಂದ ಉಂಟಾಗುವ ಬಿಗಿತವನ್ನು ಕಡಿಮೆ ಮಾಡುತ್ತದೆ. ನಿಮ್ಮ ಕಣ್ಣುಗಳನ್ನು ವೃತ್ತಾಕಾರದ ಚಲನೆಯಲ್ಲಿ ನಿಧಾನವಾಗಿ ತಿರುಗಿಸುವ ಮೂಲಕ ಪ್ರಾರಂಭಿಸಿ. ಮೊದಲು ಒಂದು ದಿಕ್ಕಿನಲ್ಲಿ ಮತ್ತು ನಂತರ ವಿರುದ್ದ ದಿಕ್ಕಿನಲ್ಲಿ ತಿರುಗಿಸಿ. ಹೀಗೆ ಮಾಡುವಾಗ ನಿಮ್ಮ ತಲೆಯನ್ನು ಸ್ಥಿರವಾಗಿರಿಸಿ ಮತ್ತು ಮತ್ತು ನಿಮ್ಮ ಕಣ್ಣುಗಳನ್ನು ಚಲಿಸುವತ್ತ ಮಾತ್ರ ಗಮನಹರಿಸಿ.
ಗಮನವನ್ನು ಬದಲಾಯಿಸುವುದು – ಮೊದಲೇ ಹೇಳಿದಂತೆ, ಸ್ಕ್ರೀನ್ ಮೇಲೆ ನಿರಂತರವಾಗಿ ವೀಕ್ಷಣೆ ಮಾಡುವಾಗ , ಆಗಾಗ್ಗೆ ನೋಟವನ್ನು ಬದಲಾಯಿಸುವುದು ಅಂದರೆ ದೂರಕ್ಕೆ ನೋಡುವುದು ಮತ್ತು ಹತ್ತಿರದ ಮತ್ತು ದೂರದ ವಸ್ತುಗಳ ನಡುವೆ ಗಮನವನ್ನು ಬದಲಾಯಿಸುವುದು ಕಡ್ಡಾಯ ವಾಗಿದೆಈ ಕಣ್ಣಿನ ವ್ಯಾಯಾಮವು ದೀರ್ಘಕಾಲದವರೆಗೆ ಪರದೆಯ ಮೇಲೆ ಒಡ್ಡಿಕೊಳ್ಳುವುದರಿಂದ ಉಂಟಾಗುವ ಡಿಜಿಟಲ್ ಕಣ್ಣಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಗಮನವನ್ನು ನಿಯಮಿತವಾಗಿ ಬದಲಾಯಿಸುವ ಮೂಲಕ, ನಿಮ್ಮ ಕಣ್ಣಿನ ಸ್ನಾಯುಗಳು ವಿಶ್ರಾಂತಿ ಪಡೆಯಲು ಮತ್ತು ನಮ್ಯತೆಯನ್ನು ಮರಳಿ ಪಡೆಯಲು ನೀವು ಅವಕಾಶ ಮಾಡಿ ಕೊಡುತ್ತೀರಿ.
ತ್ರಾಟಕ (ಮೇಣದಬತ್ತಿಯ ನೋಟ) – ಇದು ತ್ರಾಟಕ ಎಂಬ ಪ್ರಬಲವಾದ ಧ್ಯಾನ ತಂತ್ರವಾಗಿದೆ. ಇದರಲ್ಲಿ ನೀವು ನಿಮ್ಮ ನೋಟವನ್ನು ಮೇಣದ ಬತ್ತಿಯ ಜ್ವಾಲೆಯನ್ನು ನೋಡುವಂತೆ ಒಂದೇ ಬಿಂದುವಿನ ಮೇಲೆ ಕೇಂದ್ರೀಕರಿಸುತ್ತೀರಿ. ಇದು ಏಕಾಗ್ರತೆಯನ್ನು ಸುಧಾರಿಸಲು ಮನಸ್ಸನ್ನು ಶಾಂತಗೊ ಳಿಸಲು ಮತ್ತು ಕಣ್ಣಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಕಣ್ಣುಗಳನ್ನು ಸ್ಥಿರವಾಗಿ ಮತ್ತು ಕೇಂದ್ರೀಕರಿಸುವ ಮೂಲಕ ಕಣ್ಣುಗಳ ಸ್ನಾಯುಗಳನ್ನು ನೀವು ಬಲಪಡಿಸುವಿರಿ. ಇದರಿಂದ ಮಾನಸಿಕ ಸ್ಪಷ್ಟತೆ ಹೆಚ್ಚುತ್ತದೆ. ತ್ರಾಟಕವನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ, ವಿಶೇಷವಾಗಿ ರಾತ್ರಿ ಕೆಲಸದ ನಂತರ, ಆಳವಾದ ವಿಶ್ರಾಂತಿ ಮತ್ತು ಪುನರ್ಯೌವನಗೊಳಿಸುವಿಕೆ ಸಿಗುತ್ತದೆ. ಕಾಲಾನಂತರದಲ್ಲಿ, ಇದು ಉತ್ತಮ ದೃಷ್ಟಿ ಮತ್ತು ಆಂತರಿಕ ನಿಶ್ಚಲತೆಯನ್ನು ಸಹ ಬೆಂಬಲಿಸುತ್ತದೆ.
ಕಣ್ಣಿನ ವಿಶ್ರಾಂತಿಯೊಂದಿಗೆ ಶವಾಸನ (ಶವದ ಭಂಗಿ) – ಕಣ್ಣುಗಳಿಗೆ ವಿಶ್ರಾಂತಿ ನೀಡುವ ಮೂಲಕ ಶವದ ಭಂಗಿಯನ್ನು ಅಭ್ಯಾಸ ಮಾಡಿದಾಗ ಕಣ್ಣುಗಳ ಜೊತೆಗೆ ಇಡೀ ದೇಹವು ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತದೆ ಎಂದು ಯೋಗಾಭ್ಯಾಸ ಮಾಡುವವರು ಹೇಳುತ್ತಾರೆ. ಇದರ ಅಭ್ಯಾಸವು ಕೇವಲ ದೇಹದ ಶಾಂತತೆಯನ್ನು ಕಾಪಾಡುವುದು ಮಾತ್ರವಲ್ಲದೆ, ಕಣ್ಣಿಗೂ ವಿಶ್ರಾಂತಿಯನ್ನು ನೀಡುತ್ತದೆ ಅಲ್ಲದೆ ಇಡೀ ದೇಹದ ಜೊತೆಗೆ ಕಣ್ಣಿನ ಒತ್ತಡ ಮತ್ತು ಆಯಾಸವನ್ನು ಕಡಿಮೆ ಮಾಡುವಲ್ಲಿ ಇದು ಸಹಾಯ ಮಾಡುತ್ತದೆ.















