ಮನೆ ರಾಜ್ಯ ಜೋರಾಯ್ತು ಚಳಿ ಅಬ್ಬರ – ಮಲೆನಾಡಂತಾದ ಬೆಂಗಳೂರು ಸಿಟಿ

ಜೋರಾಯ್ತು ಚಳಿ ಅಬ್ಬರ – ಮಲೆನಾಡಂತಾದ ಬೆಂಗಳೂರು ಸಿಟಿ

0

ಬೆಂಗಳೂರು : ಡಿಸೆಂಬರ್‌ಗೂ ಮುನ್ನವೇ ರಾಜ್ಯದಲ್ಲಿ ಚಳಿ ಅಬ್ಬರ ಜೋರಾಗಿದ್ದು, ಬೆಂಗಳೂರಿನಲ್ಲಿ ಮಂಜು ಆವರಿಸಿ ಮಲೆನಾಡಿನ ವಾತಾವರಣ ನಿರ್ಮಾಣವಾಗಿದೆ. ಜನವರಿ ವೇಳೆಗೆ ರಾಜ್ಯವ್ಯಾಪಿ ಚಳಿ ಅಬ್ಬರ ಹೆಚ್ಚಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ನವೆಂಬರ್ ಅಂತ್ಯದಲ್ಲೇ ಚಳಿ ಹೆಚ್ಚಾಗಿದೆ. ರಸ್ತೆ, ಕಟ್ಟಡಗಳು ಕಾಣದಂತೆ ದಟ್ಟ ಮಂಜು ಆವರಿಸಿದ್ದು, ಆಚೆ ಓಡಾಡುವವರು ಚಳಿಯಲ್ಲಿ ನಡುಗುವಂತೆ ಮಾಡಿದೆ. ಕನಿಷ್ಠ ಉಷ್ಣಾಂಶ ಇಳಿಕೆ ಹಿನ್ನೆಲೆ ದಟ್ಟ ಮಂಜು, ಚಳಿ ಹೆಚ್ಚಾಗಿದೆ. ನಗರದ ಬಹುತೇಕ ಕಡೆ ಇದೇ ವಾತವರಣ ಇದೆ.

ಈ ಬಾರಿ ಕಳೆದ ವರ್ಷಕ್ಕಿಂತಲೂ ಹೆಚ್ಚು ಚಳಿಯ ಕಾಟ ಹೆಚ್ಚಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡು ಜೊತೆಗೆ ಬೆಂಗಳೂರಿಗೂ ಕಳೆದ ಬಾರಿಗಿಂತ ಹೆಚ್ಚು ಚಳಿ ಕಾಡುವ ಸಾಧ್ಯತೆ ಇದೆಯಂತೆ. ರಾಜ್ಯದ ಹಲವೆಡೆ ನವೆಂಬರ್ ಮಧ್ಯದಲ್ಲೇ ಚಳಿ ಕಾಟ ಜೋರಾಗಿದೆ.

ವಾತವರಣ ಬದಲಾದಂತೆ ಮತ್ತು ಈ ಬಾರಿ ಮಳೆ ಕೂಡ ಉತ್ತಮವಾಗಿರುವ ಕಾರಣ ಚಳಿಯ ಹೆಚ್ಚಳವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ ಉತ್ತರ ಒಳನಾಡಿನ ರಾಯಚೂರು, ಬೆಳಗಾವಿ, ಬೀದರ್, ಕಲಬುರಗಿ, ಹಾವೇರಿ, ಯಾದಗಿರಿ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ 6 ಡಿಗ್ರಿವರೆಗೆ ಇಳಿಕೆ ಸಾಧ್ಯತೆ ಇದೆ ಎನ್ನಲಾಗಿದೆ.

ಸಾಮಾನ್ಯವಾಗಿ ಈ ಭಾಗಗಳಲ್ಲಿ ರಾಜ್ಯದ ಉಳಿದ ಭಾಗಕ್ಕಿಂತ ಸ್ವಲ್ಪ ಹೆಚ್ಚೇ ಚಳಿ ಪ್ರತಿವರ್ಷವು ಕಾಡುತ್ತದೆ. ಈ ಬಾರಿ ಅದಕ್ಕೂ ಹೆಚ್ಚಾಗಿ ಕಾಟ ನೀಡಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಶೀತಗಾಳಿಯ ಎಫೆಕ್ಟ್ ಕೂಡ ಇರುವ ಸಾಧ್ಯತೆ ದಟ್ಟವಾಗಿದೆ ಎಂದು ಎಚ್ಚರಿಕೆ ನೀಡಿದೆ.

ಇದು ಕೇವಲ ಉತ್ತರ ಒಳನಾಡಿಗೆ ಮಾತ್ರ ಸೀಮಿತ ಆಗಿಲ್ಲ. ಬೆಂಗಳೂರಿಗೂ ಈ ಬಾರಿ ಚಳಿ ಕಾಟ ಹೆಚ್ಚಾಗುವ ಬಗ್ಗೆಯೂ ಮುನ್ಸೂಚನೆ ನೀಡಿದೆ. ಡಿಸೆಂಬರ್‌ನಿಂದ ಹಂತ ಹಂತವಾಗಿ ಚಳಿ ಹೆಚ್ಚಾಗಲಿದ್ದು, ಜನವರಿಯಲ್ಲಿ ಪೀಕ್ ಮಟ್ಟ ತಲುಪುವ ಸಾಧ್ಯತೆ ಇದೆ. ಕಳೆದ ವರ್ಷ ಬೆಂಗಳೂರಿನಲ್ಲಿ ಕನಿಷ್ಠ ಉಷ್ಣಾಂಶ 14 ಡಿಗ್ರಿ ಸೆಲ್ಸಿಯಸ್ ಇಳಿದಿತ್ತು.

ಈ ಬಾರಿ 12 ಡಿಗ್ರಿವರೆಗೂ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ. ಇದು ಜನವರಿ ತಿಂಗಳಲ್ಲಿ ಹೆಚ್ಚು ಕಾಡುವ ಸಾಧ್ಯತೆ ಇದ್ದು, ಆರೋಗ್ಯದ ಕಡೆ ಹೆಚ್ಚು ಗಮನ ಇರಲಿ ಅಂತಿದ್ದಾರೆ. ಒಟ್ಟಾರೆ ಚಳಿಗಾಲದಲ್ಲಿ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರಲಿದೆ. ಆಹಾರ ಮತ್ತು ಜೀವನ ಶೈಲಿಗಳ ಮೇಲೆ ಹೆಚ್ಚು ಗಮನಕೊಡೋದು. ಅದರಲ್ಲೂ ಮಕ್ಕಳು, ವೃದ್ಧರು, ಗರ್ಭಿಣಿಯರು ಕೊಂಚ ಹೆಚ್ಚು ಎಚ್ಚರಿಕೆ ವಹಿಸಿದರೆ ಸೂಕ್ತವಾಗಿದೆ.