ಬಳ್ಳಾರಿ(Ballari): ವಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಚಿಕಿತ್ಸೆ ಪಡೆಯುತ್ತಿದ್ದ 8 ವರ್ಷದ ಬಾಲಕ ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಮೃತಪಟ್ಟಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸಿರುಗುಪ್ಪದ ಕೆ.ಮಹೇಶ್ ಹಾಗೂ ಈರಮ್ಮ ದಂಪತಿಯ ಪುತ್ರ ನಿಖಿಲ್ (8) ಮೃತ ಬಾಲಕ.
ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಈತನನ್ನು ಸೆ.11ರಂದು ವಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ಬುಧವಾರ ಸರಣಿ ಸಾವು ಪ್ರಕರಣ ಹೊರ ಬೀಳುತ್ತಿದ್ದಂತೆಯೇ ಈ ವಿಚಾರ ಗುರುವಾರ ಸಂಜೆಯ ವೇಳೆಗೆ ಬಹಿರಂಗಗೊಂಡಿದೆ.
ತಾಯಿ ಈರಮ್ಮ ಈ ಕುರಿತು ಮಾತನಾಡಿ, ನನ್ನ ಮಗನನ್ನು ಐಸಿಯುದಲ್ಲಿ ದಾಖಲಿಸಿದ್ದೆವು. ವೆಂಟಿಲೇಟರ್ ನಲ್ಲಿದ್ದ. ಆದರೆ ನಿನ್ನೆ ಬೆಳಿಗ್ಗೆ ಕರೆಂಟ್ ಹೋದಾಗ ಮಶೀನ್ ಬಂದ್ ಆದವು. ಯಾಕೆ ಹೀಗೆ ಎಂದು ಅಲ್ಲಿದ್ದ ಸಿಬ್ಬಂದಿಯನ್ನು ಕೇಳಿದೆವು. ಕರೆಂಟ್ ಹೋಗಿದೆ ಎಂದರು. ಕೆಲವೇ ಕ್ಷಣಗಳಲ್ಲಿ ನನ್ನ ಮಗ ಸತ್ತು ಹೋದ” ಎಂದು ಅಲವತ್ತುಕೊಂಡರು.
ಮಿಮ್ಸ್ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಸಾವುಗಳ ಕುರಿತು ಈಗಾಗಲೇ ಸರ್ಕಾರ ತನಿಖಾ ಸಮಿತಿ ರಚಿಸಿದ್ದು, ಸತ್ಯಾಸತ್ಯತೆ ಹೊರಬರಬೇಕಿದೆ.
ಇದಕ್ಕೂ ಮುನ್ನ ಗಣಿನಾಡು ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚೆಟ್ಟಮ್ಮ (30) ಹಾಗೂ ಮೌಲಾಹುಸೇನ್ (38) ಚಂದ್ರಮ್ಮ (65) ಮೂವರು ಏಕಾಏಕಿ ಮೃತಪಟ್ಟಿದ್ದರು ಎಂದು ವರದಿಯಾಗಿತ್ತು.
ಆಸ್ಪತ್ರೆಯ ಐಸಿಯುಗೆ ಪೂರೈಕೆ ಆಗುತ್ತಿದ್ದ ವಿದ್ಯುತ್ ಕಡಿತವೇ ಈ ಸಾವುಗಳಿಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.