ಹೊಸದುರ್ಗ (ಚಿತ್ರದುರ್ಗ): ತಾಳಿ ಕಟ್ಟುವ ಕೊನೇ ಘಳಿಗೆಯಲ್ಲಿ ವಧು ಮದುವೆ ಬೇಡ ಎಂದು ನಿರಾಕರಿಸಿದ ಹಿನ್ನೆಲೆ ಮದುವೆ ಮುರಿದು ಬಿದ್ದಿರುವ ಘಟನೆ ಚಿತ್ರದುರ್ಗ ತಾಲ್ಲೂಕಿನ ಚಿಕ್ಕಬ್ಯಾಲದಕೆರೆಯಲ್ಲಿ ಗುರುವಾರ ನಡೆದಿದೆ.
ಶಾಸ್ತ್ರೋಕ್ತವಾಗಿ ಮದುವೆ ನಡೆಸಲು ನಿಶ್ಚಯವಾಗಿತ್ತು. ವಧು-ವರ, ಬಂಧು, ಬಾಂಧವರು ಸೇರಿ ಅದ್ದೂರಿಯಾಗಿ ಮದುವೆ ಆಯೋಜನೆ ಮಾಡಲಾಗಿತ್ತು. ಹಲವು ಶಾಸ್ತ್ರಗಳು ನಡೆದು ಇನ್ನೇನು ತಾಳಿ ಕಟ್ಟುವ ಸಂದರ್ಭದಲ್ಲಿ ವಧು ಮದುವೆ ನಿರಾಕರಿಸಿದ್ದಾರೆ.
ಚಳ್ಳಕೆರೆಯ ಯಮುನಾ ಜಿ.ಎಂ ಹಾಗೂ ಚಿಕ್ಕಬ್ಯಾಲದಕೆರೆ ಮಂಜುನಾಥ್ ಅವರೊಂದಿಗೆ ಗುರುವಾರ ಚಿಕ್ಕಬ್ಯಾಲದಕೆರೆಯಲ್ಲಿ ಮದುವೆ ನಿಶ್ಚಯಿಸಲಾಗಿತ್ತು. ಒಂದು ವರ್ಷದಿಂದ ವಧು ಹಾಗೂ ವರನ ನಡುವೆ ಉತ್ತಮ ಒಡನಾಟವಿತ್ತು. ಯಮುನಾ ಓದುವ ಕಾರಣವೊಡ್ಡಿ ಮದುವೆಯನ್ನು ಒಂದು ವರ್ಷ ಮುಂದೂಡಿದ್ದರು.
ನಂತರ ಎಲ್ಲರ ಒಪ್ಪಿಗೆಯಂತೆ ಬುಧವಾರ ಆರತಕ್ಷತೆ ಅದ್ದೂರಿಯಾಗಿ ನಡೆದಿತ್ತು. ಗುರುವಾರ ಬೆಳ್ಳಿಗ್ಗೆ 9.30 ಕ್ಕೆ ತಾಳಿ ಕಟ್ಟುವ ಸಮಯದಲ್ಲಿ ವಧು ತಾಳಿ ತಳ್ಳಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಹಿರಿಯರು, ಸಂಬಂಧಿಕರು ಎಷ್ಟೇ ಮನವೊಲಿಸಿದರು ವಧು ಮಾತ್ರ ತಾಳಿ ಕಟ್ಟಿಸಿಕೊಳ್ಳಲು ಒಪ್ಪಿಕೊಳ್ಳಲಿಲ್ಲ. ಪ್ರಕರಣ ಶ್ರೀರಾಂಪುರ ಪೊಲೀಸ್ ಠಾಣೆ ಮೆಟ್ಟಿಲೇರಿತು. ಮದುವೆ ವೆಚ್ಚವನ್ನು ವಧುವಿನ ಕಡೆಯವರು ಭರಿಸಬೇಕು ಎಂಬ ರಾಜಿಯೊಂದಿಗೆ ಪ್ರಕರಣ ಇತ್ಯರ್ಥ ಮಾಡಿಕೊಳ್ಳಲಾಯಿತು.