ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಕಾಂಗ್ರೆಸ್ ಪಕ್ಷದ ನಾಸೀರ್ ಹುಸೇನ್ ಬೆಂಬಲಿಗನೊಬ್ಬ ವಿಧಾನಸೌಧದಲ್ಲೇ ಪಾಕ್ ಪರ ಘೋಷಣೆ ಕೂಗಿದ ಆರೋಪ ಕೇಳಿಬಂದಿದೆ.
ಇಡೀ ಸಚಿವ ಸಂಪುಟ ಪಾಕ್ ಪರ ಘೋಷಣೆ ಕೂಗಿದವರ ಪರವಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಆರೋಪಿಸಿದ್ದಾರೆ.
ಬೆಂಗಳೂರಿನ ಬಿಜೆಪಿ ಪ್ರಧಾನ ಕಚೇರಿ ಜಗನ್ನಾಥ ಭವನದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಟ ಶ್ರೀನಿವಾಸ್ ಪೂಜಾರಿ, ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ ವಿಚಾರವಾಗಿ ಮಾತನಾಡಿದ ಅವರು, ಅಲ್ಲೂ ಇಲ್ಲೋ ಇಂತಹ ನಡೆಯುತ್ತಿತ್ತು. ನೋವಿನ ಸಂಗತಿ ಅಂದರೆ, ಕೆಂಗಲ್ ಹನುಮಂತಯ್ಯ ಕಟ್ಟಿದ ವಿಧಾನಸೌಧದಲ್ಲಿ ಘೋಷಣೆ ಮೊಳಗಿದೆ ಎಂದರು.
ಪ್ರಕರಣ ನಡೆದ 60 ಗಂಟೆಗಳು ಕಳೆದಿವೆ. ಈವರೆಗೂ ಯಾರನ್ನು ಬಂಧಿಸಿಲ್ಲ. ಇಡೀ ಸಚಿವ ಸಂಪುಟ ಘೋಷಣೆ ಪರ ಕೂಗಿದವರ ಪರವಿದ್ದಾರೆ ಎಂದು ಹೇಳಿದ ಶ್ರೀನಿವಾಸ್ ಪೂಜಾರಿ, ನೀವು (ಕಾಂಗ್ರೆಸ್) ಶತ್ರು ರಾಷ್ಟ್ರ ಅನ್ನುವುದನ್ನು ಒಪ್ಪಿಕೊಳ್ಳಿ ಎಂದರೆ, ಅದು ನಮ್ಮ ನೆರೆ ರಾಷ್ಟ್ರ ಎನ್ನುತ್ತಾರೆ ಎಂದರು. ಬಿಜೆಪಿಗೆ ಪಾಕಿಸ್ತಾನ ಶತ್ರು ರಾಷ್ಟ್ರ ಇರಬಹುದು. ಆದರೆ, ನಮಗಲ್ಲ. ಪಾಕ್ ನಮ್ಮ ನೆರೆಯ ರಾಷ್ಟ್ರ ಎಂದು ಕಾಂಗ್ರೆಸ್ ಎಂಎಲ್ಸಿ ಬಿಕೆ ಹರಿಪ್ರಸಾದ್ ಅವರು ಪರಿಷತ್ನಲ್ಲಿ ಹೇಳಿಕೆ ನೀಡಿದ್ದರು.
ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ನಾಸೀರ್ ಹುಸೇನ್ ಎಂಬುವವರು ಘಟನೆಯನ್ನು ಖಂಡಿಸುವ ಕೆಲಸ ಮಾಡಿಲ್ಲ ಎಂದು ಆಕ್ರೋಶ ಹೊರಹಾಕಿದ ಶ್ರೀನಿವಾಸ್ ಪೂಜಾರಿ, ನಿನ್ನೆ ನಾವು ರಾಜ್ಯಪಾಲರನ್ನು ಭೇಟಿಯಾಗಿದ್ದೇವೆ. ಅವರು ನ್ಯಾಯ ಕೊಡಿಸುವ ಭರವಸೆ ಕೊಡಿಸುತ್ತೇನೆ ಎಂದಿದ್ದಾರೆ. ಅದು ನಮಗೆ ತೃಪ್ತಿ ತಂದಿದೆ ಎಂದರು.
ನಿನ್ನೆ ನಡೆದ ಅನ್ನಭಾಗ್ಯ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಕೋಟ ಶ್ರೀನಿವಾಸ್ ಪೂಜಾರಿ, ಕೇಂದ್ರ ಸರ್ಕಾರ ಪ್ರತಿ ತಿಂಗಳು 22 ಲಕ್ಷ ಕ್ವಿಂಟಾಲ್ ಅಕ್ಕಿ ಕಳುಹಿಸುತ್ತಿದೆ. ಆದರೆ, ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ಜನರಿಗೆ ಸುಳ್ಳು ಹೇಳಿದ್ದಾರೆ. ಕೇಂದ್ರ ಸರ್ಕಾರ ಕೊಡುವ ಅಕ್ಕಿಯಿಂದಲೇ ಕಾಂಗ್ರೆಸ್ ಅನ್ನಭಾಗ್ಯ ಕಾರ್ಯಕ್ರಮ ಮಾಡಿದೆ ಎಂದರು.
ಬಿಜೆಪಿ ಸಂವಿಧಾನ ವಿರೋಧಿ ಅಂತಾರೆ. ಮೊನ್ನೆ ಸುಮಾರು 20 ಕೋಟಿ ರೂಪಾಯಿ ವೆಚ್ಚದಲ್ಲಿ ಸಂವಿಧಾನದ ಸಭೆ ನಡೆಸಿದ್ದಾರೆ. ನಿತಾಶ ಕೌಲ್ ಎಂಬವರನ್ನು ವಿದೇಶದಿಂದ ಕರೆಸಿ ಭಾಷಣ ಮಾಡಿಸಲು ಮುಂದಾಗಿದ್ದರು. ಸಂವಿಧಾನಕ್ಕೆ ಮೋಸ ಮಾಡಿದವರು ಯಾರಾದರೂ ಇದ್ದರೇ, ಅದು ಕಾಂಗ್ರೆಸ್‌ನವರು ಮಾತ್ರ ಎಂದರು.
ಬ್ರಿಟಿಷ್ ಬರಹಗಾರ್ತಿಯಾಗಿರುವ ನಿತಾಶಾ ಕೌಲ್ ಭಾರತದ ವಿರುದ್ಧ ಅಜೆಂಡಾ ಹೊಂದಿದ್ದಾರೆ ಎನ್ನುವ ಆರೋಪವಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಂವಿಧಾನ ಸಭೆಗೆ ಭಾಷಣ ಮಾಡಲು ಕಾಂಗ್ರೆಸ್ ಸರ್ಕಾರ ನಿತಾಶ ಕೌಲ್ ಅವರಿಗೆ ಆಹ್ವಾನ ನೀಡಿತ್ತು. ಇದನ್ನು ವಿಹೆಚ್ಪಿ ವಿರೋದಿಸಿತ್ತು. ಅಲ್ಲದೆ, ಸಂಘಟನೆಯ ನಾಯಕ ಗಿರೀಶ್ ಭಾರದ್ವಾಜ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಒಸಿಐ ಕಾರ್ಡ್ ರದ್ದುಗೊಳಿಸುವಂತೆ ಮನವಿ ಮಾಡಿದ್ದರು.