“ಪ್ರಕರಣ ತನಿಖಾ ಹಂತದಲ್ಲಿದೆ’- ಹೀಗೊಂದು ವಿಭಿನ್ನ ಟೈಟಲ್‌ನ ಸಿನಿಮಾ ಇಂದು ತೆರೆಕಂಡಿದೆ. ಕರದಾಯಾಮ ಸ್ಟುಡಿಯೋಸ್ ಸಂಸ್ಥೆಯಡಿ ಚಿಂತನ್ ಕಂಬಣ್ಣ ಈ ಚಿತ್ರವನ್ನು ನಿರ್ಮಿಸಿದರೆ, ಸುಂದರ್ ಎಸ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹೆಸರೇ ಹೇಳುವಂತೆ ಇದೊಂದು ಕ್ರೈಮ್ ಜಾನರ್ ಕುರಿತಾದ ಚಿತ್ರ. ತನಿಖೆಯೊಂದರ ಸುತ್ತ ಸಾಗುವ ಚಿತ್ರ.
ಡ್ರಗ್ಸ್ ಮಾಫಿಯಾ ಹಿನ್ನೆಲೆಯಲ್ಲಿ ಸಾಗುವ ಕಥೆ ಸಾಕಷ್ಟು ತಿರುವುಗಳನ್ನು ಪಡೆಯುತ್ತಾ ಹೋಗುತ್ತವೆ. ಮುಂದೆ ಏನೆಲ್ಲಾ ಆಗುತ್ತದೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು ಎನ್ನುವುದು ತಂಡದ ಮಾತು.
ಒಂದಿಷ್ಟು ರಂಗ ಭೂಮಿ ಸಮಾನ ಮನಸ್ಕರು ಸೇರಿ ಮಾಡಿದ ಚಿತ್ರವಿದು. ಮಹಿನ್ ಕುಬೇರ್, ಮುತ್ತುರಾಜ್ ಟಿ, ನಟ ಗಗನ್, ಚಿಂತನ್ ಕಂಬಣ್ಣ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬೆಂಗಳೂರು ಮತ್ತು ಕನಕಪುರದಲ್ಲಿ ಚಿತ್ರೀಕರಣವಾಗಿದೆ.
“ಪ್ರಕರಣ ತನಿಖಾ ಹಂತದಲ್ಲಿದೆ’ ಚಿತ್ರಕ್ಕೆ ಮೋಹನ್ ಎಂ.ಎಸ್ ಮತ್ತು ಜಗದೀಶ್ ಆರ್ ಛಾಯಾಗ್ರಹಣ, ನಾನಿ ಕೃಷ್ಣ ಸಂಕಲನ ಮತ್ತು ಶಿವೋಂ ಸಂಗೀತವಿದೆ.














