ಮನೆ ಕಾನೂನು ಸಲಿಂಗ ವಿವಾಹಕ್ಕೆ ಮಾನ್ಯತೆ ಕೋರಿದ್ದ ಪ್ರಕರಣ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠಕ್ಕೆ ವರ್ಗ

ಸಲಿಂಗ ವಿವಾಹಕ್ಕೆ ಮಾನ್ಯತೆ ಕೋರಿದ್ದ ಪ್ರಕರಣ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠಕ್ಕೆ ವರ್ಗ

0

ಸಲಿಂಗ ವಿವಾಹಕ್ಕೆ ಮಾನ್ಯತೆ ಕೋರಿರುವ ಅರ್ಜಿಗಳನ್ನು ಸಾಂವಿಧಾನಿಕ ಪೀಠ ವಿಚಾರಣೆ ನಡೆಸಲಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

ಸಾಂವಿಧಾನಿಕ ಸ್ವರೂಪದ ಹಕ್ಕುಗಳಿಗೆ ಸಂಬಂಧಿಸಿದ ಪ್ರಶ್ನೆಗೆ ಮನವಿ ಸಂಬಂಧಿಸಿರುವುದರಿಂದ ಐವರು ನ್ಯಾಯಮೂರ್ತಿಗಳ ಸಂವಿಧಾನಿಕ ಪೀಠ ವಿಚಾರಣೆ ನಡೆಸಬೇಕಾಗುತ್ತದೆ ಎಂದು ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಹಾಗೂ ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ತಿಳಿಸಿತು.

“ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಸಾಕಷ್ಟು ಅರ್ಜಿಗಳು ತೃತೀಯ ಲಿಂಗಿ ವ್ಯಕ್ತಿಗಳು ಸ್ವಾಭಾವಿಕ ಸಾಂವಿಧಾನಿಕ ಅರ್ಹತೆಯ ಪ್ರಕಾರ ಮದುವೆಯಾಗುವ ಹಕ್ಕಿಗೆ ಸಂಬಂಧಿಸಿವೆ. ಸಂವಿಧಾನದ 145(3)ನೇ ವಿಧಿಯಡಿ ಈ ನ್ಯಾಯಾಲಯದ ಐವರು ಸದಸ್ಯರ ಪೀಠ ಸಮಸ್ಯೆಗಳನ್ನು ಪರಿಹರಿಸಲಿದೆ ಎಂದು ಭಾವಿಸುತ್ತೇವೆ. ಪ್ರಕರಣವನ್ನು ಸಾಂವಿಧಾನಿಕ ಪೀಠದ ಮುಂದಿಡತಕ್ಕದ್ದು” ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ. ಆ ಮೂಲಕ ಪೀಠ ಪ್ರಕರಣವನ್ನು ಏಪ್ರಿಲ್ 18ಕ್ಕೆ ಮುಂದೂಡಿತು.

ಕಾನೂನಿನ ಗಣನೀಯ ಪ್ರಶ್ನೆಗಳನ್ನು ಒಳಗೊಂಡಿರುವ ಯಾವುದೇ ಪ್ರಕರಣವನ್ನು ನಿರ್ಧರಿಸಬೇಕಾದರೆ ಅಲ್ಲಿ ಕನಿಷ್ಠ ಐವರು ನ್ಯಾಯಮೂರ್ತಿಗಳು ಇರಬೇಕು ಎಂದು ಹೇಳುತ್ತದೆ ಸಂವಿಧಾನದ 145(3)ನೇ ವಿಧಿ.

ತಮ್ಮ ಇಚ್ಛೆಯ ವ್ಯಕ್ತಿಯ ಜೊತೆ ವಿವಾಹ ಮಾಡಿಕೊಳ್ಳುವ ಹಕ್ಕನ್ನು ಸಲಿಂಗಿ, ದ್ವಿಲಿಂಗಿ, ಮಂಗಳಮುಖಿ, ಲಿಂಗಪರಿವರ್ತಿತ, ಅಸಮ, ಅಂತರ್ಲಿಂಗಿ, ಅಲೈಂಗಿಕ ಮತ್ತಿತರ (ಎಲ್’ಜಿಬಿಟಿಕ್ಯು) ಪ್ರಜೆಗಳಿಗೂ ವಿಸ್ತರಿಸಬೇಕು ಎಂದು ಅರ್ಜಿಗಳು ವಿನಂತಿಸಿವೆ.

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲಿಂಗ ಮನೋಧರ್ಮದ ಜೋಡಿ ಸುಪ್ರೀಂ ಕೋರ್ಟ್’ಗೆ ಸಲ್ಲಿಸಿರುವ ಅರ್ಜಿಗೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿ ನಿನ್ನೆ(ಭಾನುವಾರ) ಅಫಿಡವಿಟ್ ಸಲ್ಲಿಸಿತ್ತು.