ನವದೆಹಲಿ : ದೇಶಾದ್ಯಂತ ಸೀಮೆ ಎಣ್ಣೆ ವಿತರಣೆ ಮಾಡುವ ನಿಯಮವನ್ನ ಕೇಂದ್ರ ಸರ್ಕಾರ ಸಡಿಲಗೊಳಿಸಿದೆ. ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ತೈಲ ಬಿಕ್ಕಟ್ಟು ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ, ಮನೆಗಳಿಗೆ (ಅಡುಗೆ ಮತ್ತು ದೀಪಗಳ ಬಳಕೆಗೆ) ಅಗತ್ಯವಾದ ಇಂಧನ ತಲುಪಿಸಲು ಈ ನಿರ್ಧಾರ ತೆಗೆದುಕೊಂಡಿದೆ.
ಮಾರ್ಚ್ 29 ರಂದು ಹೊರಡಿಸಲಾದ ಗೆಜೆಟ್ ಅಧಿಸೂಚನೆಯ ಪ್ರಕಾರ, ದೆಹಲಿ, ಹರಿಯಾಣ, ಉತ್ತರ ಪ್ರದೇಶ ಮತ್ತು ಗುಜರಾತ್ ಸೇರಿದಂತೆ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೀಮೆ ಎಣ್ಣೆ ವಿತರಿಸಲು ಅನುಮತಿ ನೀಡಿದೆ. ಮುಂದಿನ 60 ದಿನಗಳ ವರೆಗೆ ಪೆಟ್ರೋಲ್ ಪಂಪ್ಗಳು ಸೇರಿದಂತೆ ಚಿಲ್ಲರೆ ಮಾರ್ಗಗಳ ಮೂಲಕ ಸೀಮೆ ಎಣ್ಣೆ ವಿತರಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಅನುಮತಿ ನೀಡಿದೆ.
ಮನೆಯ ಅಡುಗೆ ಉದ್ದೇಶಗಳಿಗಾಗಿ ಸೀಮೆಎಣ್ಣೆಯನ್ನು ಪೂರೈಸಲು ವ್ಯವಸ್ಥೆ ಮಾಡಲಾಗಿದ್ದು, ಈ ಸಡಿಲಿಕೆಗಳು ತಕ್ಷಣದಿಂದ ಜಾರಿಗೆ ಬಂದಿದೆ. 60 ದಿನಗಳವರೆಗೆ ಅಥವಾ ಮುಂದಿನ ಆದೇಶದವರೆಗೆ ಮಾನ್ಯವಾಗಿರುತ್ತವೆ. 1934 ಮತ್ತು 2002 ರ ಪೆಟ್ರೋಲಿಯಂ ಕಾಯ್ದೆಯ ಅಡಿಯಲ್ಲಿ ಸರ್ಕಾರವು ಕೆಲವು ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಮಾನ್ಯ ಸುರಕ್ಷತೆ ಮತ್ತು ಪರವಾನಗಿ ನಿಯಮಗಳಿಂದ ತಾತ್ಕಾಲಿಕವಾಗಿ ವಿನಾಯಿತಿ ನೀಡಬಹುದಾಗಿದೆ.
ಹಾಗಾಗಿ ಕಠಿಣ ಸಂದರ್ಭಗಳಲ್ಲಿ ಕಾಯ್ದೆಯ ಯಾವುದೇ ನಿಬಂಧನೆಗಳಿಂದ ಅಥವಾ ಅದರ ಉಪ – ವಿಭಾಗಗಳಿಂದ ಪೆಟ್ರೋಲಿಯಂ ಸರಕುಗಳ ವರ್ಗಕ್ಕೆ ವಿನಾಯ್ತಿ ನೀಡಲು ಕೇಂದ್ರ ಸರ್ಕಾರ ಅಧಿಕಾರ ಹೊಂದಿದೆ. ಜೊತೆಗೆ ಷರತ್ತುಗಳನ್ನೂ ವಿಧಿಸಬಹುದಾಗಿದೆ ಎಂದು ಸಚಿವಾಲಯ ಹೇಳಿದೆ. ಪರಿಷ್ಕೃತ ಮಾನದಂಡಗಳ ಅಡಿಯಲ್ಲಿ, ಗೊತ್ತುಪಡಿಸಿದ ಪೆಟ್ರೋಲ್ ಪಂಪ್ಗಳು ಅಡುಗೆ ಮತ್ತು ಬೆಳಕಿನ ಉದ್ದೇಶಗಳಿಗಾಗಿ ಮನೆಗಳಿಗೆ ಸೀಮೆಎಣ್ಣೆ ಸಂಗ್ರಹಿಸಿ ವಿತರಿಸಲು ಅನುಮತಿಸಲಾಗುತ್ತದೆ.
ಪ್ರತಿ ಘಟಕವು 5,000 ಲೀಟರ್ಗಳವರೆಗೆ ಸಂಗ್ರಹಿಸಬಹುದಾಗಿದೆ. ಅದಕ್ಕಾಗಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳು ಪ್ರತಿ ಜಿಲ್ಲೆಗಳಲ್ಲಿ 2 ಸೇವಾ ಕೇಂದ್ರಗಳನ್ನು ಗುರುತಿಸಲಿವೆ ಎಂದು ಕೇಂದ್ರ ಸಚಿವಾಲಯ ಹೇಳಿದೆ. ಅಲ್ಲದೇ 2002 ರ ಕಾಯ್ದೆಯ ಪ್ರಕಾರ, ಸೀಮೆಎಣ್ಣೆಯನ್ನು ನಿರ್ವಹಿಸುವ ಡೀಲರ್ಗಳು ಮತ್ತು ಸಾರಿಗೆ ವಾಹನಗಳಿಗೆ ಪರವಾನಗಿ ಅವಶ್ಯಕತೆಗಳನ್ನೂ ಸಡಿಲಗೊಳಿಸುತ್ತದೆ.















