ಬೆಂಗಳೂರು: ಕೇಂದ್ರ ಸರ್ಕಾರ ರಾಜ್ಯಗಳ ಜೊತೆ ಫೈಟ್ ಮಾಡದೇ ಶಿಷ್ಟಾಚಾರ ಪಾಲನೆ ಮಾಡಬೇಕು ಎಂದು ಕೇಂದ್ರದ ವಿರುದ್ಧ ಸಚಿವ ಮಹದೇವಪ್ಪ ವಾಗ್ದಾಳಿ ನಡೆಸಿದರು.
ಸಿಗಂದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದಿಂದ ಶಿಷ್ಟಾಚಾರ ಉಲ್ಲಂಘನೆ ಹಿನ್ನೆಲೆ ಪ್ರಧಾನಿ ಮೋದಿಗೆ ಸಿಎಂ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರ ಶಿಷ್ಟಾಚಾರ ಪಾಲನೆ ಮಾಡಬೇಕು. ಸಿಗಂದೂರು ಸೇತುವೆ ಮಾಡಿರುವುದು ಐತಿಹಾಸಿಕ ಕೆಲಸ. ಇದನ್ನು ಸ್ವಾಗತ ಮಾಡಬೇಕು. 2013-18ವರೆಗೆ ನಾನು ಲೋಕೋಪಯೋಗಿ ಇಲಾಖೆಯ ಸಚಿವನಾಗಿದ್ದೆ. ಆಗ ಯಡಿಯೂರಪ್ಪ ನನಗೆ ಸೇತುವೆ ಮಾಡಿಕೊಡಿ ಅಂತ ಕೇಳಿದ್ದರು. ಕಾಗೋಡು ತಿಮ್ಮಪ್ಪ ಕೂಡ ಮನವಿ ಮಾಡಿದ್ದರು. 2013-18ರ ನಡುವೆ ಕರ್ನಾಟಕ ರೋಡ್ ಡೆವಲಪ್ಮೆಂಟ್ ಕಾರ್ಪೋರೇಷನ್‌ನಿಂದ ಡಿಪಿಆರ್‌ನ್ನು (ಯೋಜನೆಯ ವಿವರವಾದ ವರದಿ) ತಯಾರಿ ಮಾಡಿದ್ದೆವು. ಬಳಿಕ ಗಡ್ಕರಿ ಅವರನ್ನು ಭೇಟಿ ಮಾಡಿ, ನ್ಯಾಷನಲ್ ಹೈವೆ ಅಥವಾ ಸಾಗರಮಾಲ ಯೋಜನೆ ಮಾಡಿ ಕೊಡಿ ಎಂದು ಕೇಳಿದ್ದೆ ಎಂದು ಇತಿಹಾಸ ತಿಳಿಸಿದರು.
ರಾಜ್ಯ ಸರ್ಕಾರವೇ ನಿರ್ಧಾರ ಮಾಡಿ, ಸೇತುವೆ ಆಗಬೇಕು ಎಂದಿದ್ದರು. ನಮ್ಮ ಮನವಿ ಮೇಲೆ ಕೇಂದ್ರ ಕೆಲಸ ಮಾಡಲು ಒಪ್ಪಿಗೆ ನೀಡಿತ್ತು. ಸೇತುವೆ ಆಗಬೇಕು ಅಂತ ನಿರ್ಧಾರ ಮಾಡಿದ್ದೇ ಸಿದ್ದರಾಮಯ್ಯ ಸರ್ಕಾರ. ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ. ಅಭಿವೃದ್ಧಿ ವಿಷಯದಲ್ಲಿ ಫೈಟ್ ಮಾಡೋ ಅವಶ್ಯಕತೆ ಇಲ್ಲ. ನಾವೇ ಕ್ರೆಡಿಟ್ ತಗೋಬೇಕು ಅಂತ ಮಾಡಬಾರದು ಎಂದು ಕಿಡಿಕಾರಿದರು.
ಕಾರ್ಯಕ್ರಮಗಳನ್ನ ಶಿಷ್ಟಾಚಾರದ ಪ್ರಕಾರ ಮಾಡಬೇಕು. ಸಿಎಸ್‌ಗೆ ಪತ್ರ ಬರೆದು ಸಿಎಂ ಸಮಯ ಪಡೆದು ಕಾರ್ಯಕ್ರಮ ಮಾಡಬೇಕಿತ್ತು. ಸಿಎಂ ಬೇಡ ನಾವೇ ಕಾರ್ಯಕ್ರಮ ಮಾಡ್ತೀವಿ ಅಂದ್ರೆ ಅದು ಗಣತಂತ್ರ ವ್ಯವಸ್ಥೆಗೆ ಕಪ್ಪು ಚುಕ್ಕಿ. ಸಿಎಂ ಸಮಯ ನೋಡಿಕೊಂಡು ಸಮನ್ವಯದಿಂದ ಕೆಲಸ ಮಾಡಬೇಕು. ಫೈಟ್ ಮಾಡೋದ್ರಿಂದ ಏನು ಪ್ರಯೋಜನ ಇಲ್ಲ. ಇದು ಪ್ರಜಾಪ್ರಭುತ್ವ ಅಲ್ಲ ಎಂದು ಆಕ್ರೋಶ ಹೊರಹಾಕಿದರು.
ಸಮಾಜ ಕಲ್ಯಾಣ ಇಲಾಖೆಯಲ್ಲಿನ ಬ್ಯಾಗ್ ಲಾಗ್ ಹುದ್ದೆ ಮುಂಬಡ್ತಿ ನೀಡಲು ನಿಯಮಗಳು ಪಾಲನೆ ಆಗ್ತಿಲ್ಲ ಅಂತ ಎಐಸಿಸಿ ಅಧ್ಯಕ್ಷರು ಸಿಎಂಗೆ ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಐಸಿಸಿ ಅಧ್ಯಕ್ಷರು ಸಿಎಂಗೆ ಪತ್ರ ಬರೆದಿರೋದು ನನಗೆ ಗೊತ್ತಿಲ್ಲ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಒಂದು ವಿಜಿಲೆನ್ಸ್ ವಿಂಗ್ ಇದೆ. ಏನೇ ದೂರು ಬಂದರು ಈ ವಿಂಗ್ ಪರಿಶೀಲನೆ ಮಾಡಲಿದೆ. ಅದನ್ನ ಪರಿಶೀಲನೆ ಮಾಡಿ ಕಮೀಷನರ್ ಅವರು ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯುತ್ತಾರೆ ಅಂತ ಸ್ಪಷ್ಟಪಡಿಸಿದರು.
ನಮಗೆ ಪ್ರಾಂಶುಪಾಲರು, ಪೊಲೀಸ್ ಇಲಾಖೆ, ಡಿಹೆಚ್‌ಓಗಳ ಪ್ರಮೋಷನ್ ಸಂಬಂಧ ನನ್ನ ಗಮನಕ್ಕೆ ಬಂದಿತ್ತು. ನಾನು ಸಿಎಂ ಗಮನಕ್ಕೆ ತಂದು. ಸಮಸ್ಯೆ ಪರಿಹಾರಕ್ಕೆ ಸಿಎಂ ಸೂಚನೆ ನೀಡಿದ್ದಾರೆ. ನಾನೂ ಕೂಡಾ ಸಿಎಸ್ ಮತ್ತು ಸಂಬಂಧಪಟ್ಟ ಸಚಿವರಿಗೆ ಪತ್ರ ಬರೆದಿದ್ದೇನೆ ಎಂದರು.














