ಮಂಡ್ಯ: ಸರ್ಕಾರದ ಸೇವೆಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ಕನಸು ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ ರವಿಕುಮಾರ್ ಅವರು ಅಭಿಪ್ರಾಯಪಟ್ಟರು.
ಇಂದು (ಏ.15)ಕೆರಗೊಡು ಹೋಬಳಿಯ ಹೊಡೆಘಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆ, ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಪಂಚಾಯತ್ ವತಿಯಿಂದ ಆಯೋಜಿಸಲಾಗಿದ್ದ ಜನತಾ ದರ್ಶನ ಕಾರ್ಯಕ್ರಮವನ್ನು ದೀಪಾ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಡಿ.ಸಿ. ಕಚೇರಿ, ತಾಲ್ಲೂಕು ಕಚೇರಿ, ಪೊಲೀಸ್ ಕಚೇರಿ ಮತ್ತು ಶಾಸಕರ ಕಚೇರಿಗಳಲ್ಲಿ ಸಾರ್ವಜನಿಕರು ಅಲೆಯಬಾರದೆಂದು ರೈತರ ಸಮಸ್ಯೆಗಳನ್ನು ರೈತರ ಮನೆಯ ಬಾಗಿಲಿಗೆ ಹೋಗಿ ಆಲಿಸಬೇಕು ಎಂಬ ಸದುದ್ದೇಶದಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನತಾ ದರ್ಶನ ಮಾಡಿ ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸಲಾಗುತ್ತಿದೆ ಎಂದರು.
ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಸಾಧ್ಯವಾದಲ್ಲಿ ಸ್ಥಳದಲ್ಲೇ ಪರಿಹಾರ ನೀಡಲಾಗುವುದು ಅಥವಾ 30 ದಿನಗಳೊಳಗೆ ನಿಮ್ಮ ಕುಂದು ಕೊರತೆಗಳನ್ನು ನಿವಾರಿಸಲಾಗುವುದು ಎಂದು ಭರವಸೆ ನೀಡಿದರು.

ಬಹುದಿನಗಳಿಂದ ಬೇಡಿಕೆ ಇದ್ದ ದಾನಾಯಕನಪುರ ಮತ್ತು ಇಚಗೆರೆ ರಸ್ತೆ ನಿರ್ಮಾಣಕ್ಕೆ 4.5 ಕೋಟಿ ಅನುದಾನ ನೀಡಲಾಗಿದೆ, ಮುಂದಿನ ವಾರದಲ್ಲಿ ಭೂಮಿ ಪೂಜೆ ಸಲ್ಲಿಸಿ ಕಾಮಗಾರಿಗೆ ಪ್ರರಂಭ ಮಾಡಲಾಗುವುದು, ಹೊನ್ನಾನಾಯಕಹಳ್ಳಿ ಮತ್ತು ದೊಡ್ಡಬಾಣಸವಾಡಿ ಚಿಕ್ಕಬಾಣಸವಾಡಿ ರಸ್ತೆಗೆ 2 ಕೋಟಿ ಬಿಡುಗಡೆ ಮಾಡಲಾಗಿದೆ, ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ನಿಮ್ಮ ಆಸೆಯಂತೆ ದೊಡ್ಡಬಾಣಸವಾಡಿ ಬ್ರಿಡ್ಜ್ ಮತ್ತು ಗೆದ್ದೆ ಬಯಲಿನ ರಸ್ತೆ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಚೆಲುವರಾಯಸ್ವಾಮಿ ಅವರು 5 ಕೋಟಿ ಅನುದಾನ ಬಿಡುಗಡೆಗೊಳಿಸಿದ್ದಾರೆ ಶೀಘ್ರವಾಗಿ ಅದರ ಗುದ್ದಲಿ ಪೂಜೆಯನ್ನು ನೆರವೇರಿಸಲಾಗುವುದು ಎಂದು ತಿಳಿಸಿದರು.
ಮಂಡ್ಯ ತಾಲ್ಲೂಕು ತಹಶೀಲ್ದಾರ್ ಶಿವಕುಮಾರ್ ಬಿರಾದರ್ ಮಾತನಾಡಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನತಾ ದರ್ಶನ ಕಾರ್ಯಕ್ರಮವನ್ನು ನಡೆಸುವ ಗುರಿ ಹೊಂದಿದ್ದೇವೆ, ಈಗಾಗಲೇ 3-4 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನತಾ ದರ್ಶನ ಕಾರ್ಯಕ್ರಮವನ್ನು ನೆಡೆಸಿದ್ದೇವೆ, 15 ದಿನಕ್ಕೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನತಾ ದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಅದ್ದರಿಂದ ಸಾರ್ವಜನಿಕರು ಈ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ನಂತರ ವಿಧಾನಸಭಾ ಕ್ಷೇತ್ರದ ಶಾಸಕ ಪಿ ರವಿಕುಮಾರ್ ಅವರು ಹೊಡೆಘಟ್ಟ ಗ್ರಾಮ ಪಂಚಾಯಿತಿಯ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು.
ಇ-ಸ್ವತ್ತು ವಿತರಣೆ
ಅರ್ಹ ಫಲಾನುಭವಿಗಳಿಗೆ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ ರವಿಕುಮಾರ್ ಅವರು ಇ-ಸ್ವತ್ತು ಪತ್ರಗಳನ್ನು ವಿತರಣೆ ಮಾಡಿದರು.
ಉಚಿತ ಆರೋಗ್ಯ ತಪಾಸಣೆ ಶಿಬಿರ
ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಉಚಿತ ಆರೋಗ್ಯ ತಪಾಸಣೆ ಮತ್ತು ಕಣ್ಣಿನ ತಪಾಸಣೆ ಮಾಡಲಾಯಿತು,
ಫಲಾನುಭವಿಗಳಿಗೆ ವೇದಿಕೆಯಲ್ಲಿ ಉಚಿತ ಪರೀಕ್ಷಿತಾ ಕನ್ನಡಕಗಳನ್ನು ವಿತರಿಸಲಾಯಿತು.

ವಿವಿಧ ಇಲಾಖೆಯ ಮಳಿಗೆಗಳು
ಕೃಷಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೇಷ್ಮೆ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಳಿಗೆಗಳನ್ನು ತೆರೆಯಲಾಗಿತ್ತು,
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಂಚ ಗ್ಯಾರಂಟಿ ಯೋಜನೆ ತಲುಪದಿರುವವರು ಈ ಸಹಾಯ ಕೇಂದ್ರಕ್ಕೆ ಅಗತ್ಯ ದಾಖಲೆಗಳೊಂದಿಗೆ ಬಂದು ತಮ್ಮ ಕುಂದು ಕೊರತೆಗಳನ್ನು ನೀವಾರಿಸಿಕೊಂಡು ಗ್ಯಾರಂಟಿ ಯೋಜನೆಗೆ ಅರ್ಜಿ ಸಲ್ಲಿಸಲು ಗ್ಯಾರಂಟಿ ಸಹಾಯ ಮಳಿಗೆಯನ್ನು ಸ್ಥಾಪಿಸಲಾಗಿತ್ತು
ಕಾರ್ಯಕ್ರಮದಲ್ಲಿ ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ , ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕಿ ವೀಣಾ, ಡಿ.ಓ.ಎಸ್.ಪಿ. ಲಕ್ಷ್ಮಿನಾರಾಯಣ ಪ್ರಸಾದ್, ಹೊಡೆಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಬಿ ಆನಂದ್, ಸದಸ್ಯರುಗಳಾದ ಗೌರಮ್ಮ, ಗಣೇಶ್, ನಾರಾಯಣಪ್ಪ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.