ಮನೆ ರಾಜ್ಯ ಸೋಲಿಗ ಮತ್ತಿತರ ಕಾಡಂಚಿನ ಸಮುದಾಯಗಳ ಸಮಸ್ಯೆ ಆಲಿಸಿದ ಮುಖ್ಯಮಂತ್ರಿಗಳು

ಸೋಲಿಗ ಮತ್ತಿತರ ಕಾಡಂಚಿನ ಸಮುದಾಯಗಳ ಸಮಸ್ಯೆ ಆಲಿಸಿದ ಮುಖ್ಯಮಂತ್ರಿಗಳು

0

ಬೆಂಗಳೂರು : ಕಾಡು/ ಕಾಡಂಚಿನ ಅರಣ್ಯಾಧಾರಿತ ಆದಿವಾಸಿ ಬುಡಕಟ್ಟುಗಳ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕೊಡಗು, ಚಾಮರಾಜನಗರ, ಮೈಸೂರು, ಹಾಸನ, ಚಿಕ್ಕಮಗಳೂರು, ದಕ್ಶಿಣ ಕನ್ನಡ ಜಿಲ್ಲೆಗಳ ಜಿಲ್ಲಾಧಿಕಾರಿ, ಜಿ.ಪಂ ಸಿಇಒ ಹಾಗೂ ಬುಡಕಟ್ಟು ಅಧಿಕಾರಿಗಳೊಂದಿಗೆ ಸಭೆ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕರ್ನಾಟಕ ರಾಜ್ಯದ, ಕಾಡು, ಕಾಡಂಚಿನ ಅರಣ್ಯಾಧಾರಿತ ಆದಿವಾಸಿ ಬುಡಕಟ್ಟುಗಳ ಒಕ್ಕೂಟದ ನಿಯೋಗವು ಇಂದು ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಮಾತನಾಡಿದರು.

ರಾಜ್ಯದಲ್ಲಿ 51 ಆದಿವಾಸಿ ಜನಾಂಗಗಳಿದ್ದು, ಸೋಲಿಗ , ಜೇನುಕುರುಬ ಸೇರಿದಂತೆ 12 ಬುಡಕಟ್ಟು ಜನಾಂಗಗಳು ಸೌಲಭ್ಯ ವಂಚಿತವಾಗಿವೆ. ಅವರಲ್ಲಿ ಹಲವರಿಗೆ ಯೋಜನೆಗಳ ಸೌಲಭ್ಯ ಪಡೆಯಲು ಅಗತ್ಯವಿರುವ ದಾಖಲೆಗಳು ಕೂಡ ಇಲ್ಲದ ಪರಿಸ್ಥಿತಿ ಇದೆ. ಶಿಬಿರಗಳನ್ನು ಆಯೋಜಿಸಿ ಆಧಾರ್ ಮುಂತಾದ ದಾಖಲೆಗಳನ್ನು ನೀಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ನಿಯೋಗವು ಮನವಿ ಮಾಡಿತು.

ಎಎನ್ಎಮ್, ನರ್ಸಿಂಗ್, ಮುಂತಾದ ಶಿಕ್ಷಣ ಪಡೆದಿರುವ ಬುಡಕಟ್ಟು ಜನಾಂಗಗಳ ಮೊದಲ ಪೀಳಿಗೆಗೆ ಆರೋಗ್ಯ ಇಲಾಖೆಯಲ್ಲಿ ಕೆಲಸ ನೀಡುವ ಬಗ್ಗೆ ಹಾಗೂ ಪ್ರಸ್ತುತ ಅರಣ್ಯ ಇಲಾಖೆಯ ಅರಣ್ಯ ಹುದ್ದೆಗಳಿಗೆ ಅರಣ್ಯವಾಸಿಗಳಿಗೆ ನೀಡಲು ಮರುಆದೇಶ ಹೊರಡಿಸುವ ಬಗ್ಗೆ ಮನವಿ ಮಾಡಲಾಯಿತು.

ರಾಜ್ಯದಲ್ಲಿನ 115 ಆಶ್ರಮ ಶಾಲೆಗಳಲ್ಲಿ ಖಾಯಂ ಶಿಕ್ಷಕರಿಲ್ಲ. ಆದಿವಾಸಿ ಸಮುದಾಯಕ್ಕೆ ಸೇರಿದ ಬಿಎಡ್ ಶಿಕ್ಷಣ ಪಡೆದಿರುವವರನ್ನೇ ಈ ಶಾಲೆಗಳಿಗೆ ನೇಮಕ ಮಾಡುವಂತೆ ಮುಖ್ಯಮಂತ್ರಿಗಳನ್ನು ಕೋರಲಾಯಿತು.

ಆದಿವಾಸಿ ಬುಡಕಟ್ಟುಗಳ ಒಕ್ಕೂಟದ ಡಾ: ರತ್ನಮ್ಮ ಮತ್ತು ತಂಡ, ಅರಣ್ಯ ಸಚಿವ ಈಶ್ವರ ಖಂಡ್ರೆ, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಹಾಗೂ ಬುಡಕಟ್ಟು ಜನಾಂಗಗಳ ಪ್ರತಿನಿಧಿಗಳು ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.