ಸುಧೀರ್ ಅತ್ತಾವರ್ ನಿರ್ದೇಶನದ ಕೊರಗಜ್ಜ ಸಿನಿಮಾದ ಆಡಿಯೋ ಹಕ್ಕುಗಳನ್ನು ಜೀ ಮ್ಯೂಸಿಕ್ ತನ್ನದಾಗಿಸಿಕೊಳ್ಳುವ ಮುಖಾಂತರ, ತ್ರಿವಿಕ್ರಮ ಸಾಪಲ್ಯ ನಿರ್ಮಾಣದ ಸಕ್ಸಸ್ ಫಿಲ್ಮ್ಸ್ ಮತ್ತು ತ್ರಿವಿಕ್ರಮ ಸಿನಿಮಾಸ್ ಬ್ಯಾನರ್ ಅಡಿಯಲ್ಲಿನ ಕೊರಗಜ್ಜ ಸಿನಿಮಾ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಯಾವುದೇ ಕನ್ನಡ ಸಿನಿಮಾಗಳ ಆಡಿಯೋ ರೈಟ್ಸ್ ಗಳನ್ನು ಕೊಂಡುಕೊಳ್ಳುವಲ್ಲಿ ಹಿಂದೇಟು ಹಾಕುತ್ತಿದ್ದ ಜೀ ಮ್ಯೂಸಿಕ್ ಸಂಸ್ಥೆ ಕೊರಗಜ್ಜ ಸಿನಿಮಾದ ಎಲ್ಲಾ ಭಾಷೆಗಳ ಒಟ್ಟು 31 ಹಾಡುಗಳ ರೈಟ್ಸ್ ಗಳನ್ನು ಪಡೆದುಕೊಂಡಿದೆ. ಇದುವರೆಗೂ ತಾವು ಯಾರಿಗೆ ಆಡಿಯೋ ಹಕ್ಕುಗಳನ್ನು ನೀಡಿದ್ದೇವೆ ಎನ್ನುವ ವಿಚಾರವನ್ನು ಗೌಪ್ಯವಾಗಿರಿಸಿದೆ.
ಚಿತ್ರತಂಡ, ಜೀ ಮ್ಯೂಸಿಕ್‌ನ ಎರಡು ಕಟೌಟ್‌ಗಳನ್ನನ್ನು ವೇದಿಕೆಯಲ್ಲಿ ದೇಶಾದ್ಯಂತದಿಂದ ಸೇರಿದ್ದ ಸುಮಾರು 160 ಕ್ಕೂ ಹೆಚ್ಚಿನ ಪತ್ರಕರ್ತರ ಸಮ್ಮುಖದಲ್ಲಿ ನಿನ್ನೆ ಮಂಗಳೂರಿನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿಅನಾವರಣಗೊಳಿಸಿ ಎಲ್ಲರಿಗೂ ಸರ್ಪ್ರೈಸ್ ನೀಡಿದರು. ದೊಡ್ಡ ಮೊತ್ತಕ್ಕೆ ಆಡಿಯೋ ರೈಟ್ಸ್ ಸೇಲ್ ಆಗಿದೆ ಎಂದು ಹೇಳಲಾಗುತ್ತಿದೆ.
ಯಕ್ಷಗಾನದ ಥೀಮ್ ನಿಂದ ಇಡೀ ಕಾರ್ಯಕ್ರಮವನ್ನು ಪೋಣಿಸಲಾಗಿತ್ತು. ಕಲಾವಿದರಾದ ಭವ್ಯ ಮತ್ತು ಶ್ರುತಿ ಗ್ರಾಮಾಫೋನ್ ನಲ್ಲಿ ಹಳೆಯ ಹಾಡು ಕೇಳುತ್ತಿದ್ದಂತೆಯೇ ಬಣ್ಣ ಬಣ್ಣದ ಬೆಳಕಿನ ಹಿನ್ನೆಲೆಯಲ್ಲಿ ಕೊರಗಜ್ಜಚಿತ್ರದ ಗಾಳಿ ಗಂಧ ಹಾಡು ನೆರೆದಿರುವವರನ್ನು ಸೂಜಿಗಲ್ಲಿನಂತೆ ಸೆಳೆಯಿತು.

ಜೊತೆಗೇ ಸಾಗಿ ಬಂದ ಗುಳಿಗಾ ಗುಳಿಗಾ ಗುಳಿಗಾ.. ಗುಳಿಗಾ… ಘೋರ ಗುಳಿಗಾ.. ಹಾಡು ಮತ್ತು ಅದರ ರಿಚ್ ವಿಷ್ಯುವಲ್ಸ್ ಎಲ್ಲರನ್ನು ರೋಮಾಂಚನ ಗೊಳಿಸಿತು. ದಕ್ಷಿಣ ಭಾರತದ ಖ್ಯಾತ ಗೋಪಿ ಸುಂದರ್ ಸಂಗೀತಕ್ಕೆ ಸುಧೀರ್ ಅತ್ತಾವರ್ ಸಾಹಿತ್ಯ ಒದಗಿಸಿದ್ದಾರೆ.
ಉಗ್ರ ಸ್ವರೂಪದ ಗುಳಿಗ ಪಾತ್ರ ನಿರ್ವಹಿಸಿದ್ದ ಹಾಲಿವುಡ್-ಬಾಲಿವುಡ್- ಫ್ರೆಂಚ್ ಸಿನಿಮಾಗಳ ನಟ ಮತ್ತು ಬಾಲ್ ರೂಮ್ ಡಾನ್ಸರ್ ಆಗಿರುವ ಸಂದೀಪ್ ಸೋಪಾರ್ಕರ್ ರವರು ಮಾತನಾಡುತ್ತಾ, ಶೂಟಿಂಗ್ ಸಮಯದಲ್ಲಿ ತನ್ನ ಮೇಲೆ ಆವೇಶ ಬಂದಂತಹ ಆಗಿರುವ ಅನುಭವವನ್ನು ಬಿಚ್ಚಿಟ್ಟರು.
ದೆಹಲಿ, ಮುಂಬಾಯಿ, ಚಂಡೀಗಡ್, ಹೈದರಾಬಾದ್, ಕೊಚ್ಚಿ, ಬೆಂಗಳೂರು, ಮಂಗಳೂರಿನ ಸುಮಾರು ನೂರರವತ್ತಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಪತ್ರಕರ್ತರ ಪ್ರಶ್ನೆಗಳನ್ನು ಸವಾಲುಗಳನ್ನು ವಿವಾದವಾಗದ ರೀತಿಯಲ್ಲಿ ನಿರ್ದೇಶಕ ಸುಧೀರ್ ಅತ್ತಾವರ್ ಹೆಚ್ಚು ಕಡಿಮೆ ಎರಡು ತಾಸುಗಳ ಕಾಲ ನಿಭಾಯಿಸಿದರು. ದೈವಾರಾಧನೆಯ ಮೂಲ ಷಮನಿಸಂ ಎನ್ನುವುದನ್ನು ಪ್ರತಿಪಾದಿಸುತ್ತಾದೆ.
ಸೈಬೀರಿಯಾ ದೇಶದಿಂದ ಆರಂಭವಾಗಿರುವ ಷಮನಿಸಂ, ಕರಾವಳಿಯ ನಲಿಕೆ ಜನಾಂಗದ ರೀತಿಯಲ್ಲೇ ಸೆಮಿ ಭಾಷೆ ಮಾತನಾಡುವ ಸೆಮಿನೋಯ್ಡ್ಸ್ ಜನಾಂಗದವರು ಆವೇಶಗೊಂಡು, ಮಖಕ್ಕೆ ಹಳದಿ ಬಣ್ಣ, ಬೆನ್ನಿಗೆ ಅಣಿ, ಧರಿಸಿ ಟ್ರಾನ್ಸ್ ಸ್ಥಿತಿಯಲ್ಲಿ ಭೂತ-ಭವಿಷ್ಯಗಳ ವಿಚಾರ ತಿಳಿಸುವ ಮಾದರಿಯಲ್ಲೇ ಭೂತಕೋಲ ಮತ್ತು ಕೇರಳದ ತೈಯಂ ವಿಕಸನಹೊಂದಿರುವುದಾಗಿ ತಿಳಿಸಿದರು.
ನಿರ್ಮಾಪಕ ತ್ರಿವಿಕ್ರಮ ಮಾತನಾಡುತ್ತಾ, ಇತ್ತೀಚೆಗೆ ಬಿಡುಗಡೆ ಗೊಳಿಸಿರುವ 3ಡಿ ಮೋಷನ್ ಪೋಸ್ಟರ್ ಲಕ್ಷಾಂತರ ವ್ಯೂಸ್ ಪಡೆದುಕೊಳ್ಳತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಕಾರ್ಯಕಾರಿ ನಿರ್ಮಾಪಕನ ಕೆಲಸವೆಂದರೆ ವಾಹನದ “ಶೋಕ್ ಅಬ್ಸೋರ್ಬರ್” ತರಹ ಎಂದು ಹೇಳುತ್ತಾ, ಎಲ್ಲರನ್ನು ನಗೆ ಗಡಲಲ್ಲಿ ತೇಲಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಜೈ ಜಗದೀಶ್ ಮತ್ತು ವಿಜಯಲಕ್ಷ್ಮಿ ದಂಪತಿಯನ್ನು ಗೌರವಿಸಲಾಯ್ತು.














