ಧಾರವಾಡ: ಸಿದ್ದರಾಮಯ್ಯ ಅವಧಿಯ ಹಲವು ಭಾಗ್ಯಗಳು ಜನರಿಗೆ ತಲುಪಲಿಲ್ಲ. ಈಗ ಹಲವು ಗ್ಯಾರಂಟಿಗಳನ್ನು ನೀಡುತ್ತೇವೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ್ದು ಚುನಾವಣೆವರೆಗೆ ಮಾತ್ರ ಗ್ಯಾರಂಟಿ ಆ ಬಳಿಕ ಗಳಗಂಟಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.
ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ನಡೆದ ಜಯವಾಹಿನಿ ಯಾತ್ರೆ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಧಾರವಾಡ ಗ್ರಾಮಾಂತರ ಜನತೆ ರಾಜಕೀಯವಾಗಿ ಬಹಳ ಬುದ್ಧಿವಂತರು. ಅಧಿಕಾರದಲ್ಲಿ ಯಾರನ್ನು ಕೂರಿಸಬೇಕು, ಇಳಿಸಬೇಕೆಂಬುದು ಜನರಿಗೆ ಗೊತ್ತಿದೆ. ಪ್ರವಾಹ ಬಂದಾಗ ಬೆಳೆ ನಾಶ, ಮನೆ ಹಾನಿ ಆಗಿತ್ತು. ಸಂಕಷ್ಟದಲ್ಲಿದ್ದ ರೈತರ ನೆರವಿಗೆ ಧಾವಿಸಿ ಬಂದಿದ್ದು ಬಿಜೆಪಿ ಸರ್ಕಾರ. ಹಿಂದಿನ ಸರ್ಕಾರಗಳು ಮನೆ ಬಿದ್ದಾಗ ಸಂತ್ರಸ್ತರಿಗೆ ಯಾವತ್ತಾದರೂ 5 ಲಕ್ಷ ಪರಿಹಾರ ನೀಡಿತ್ತಾ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರ ಇದ್ದಾಗ ಮನೆ ಬಿದ್ದ ಬಹಳ ದಿನಗಳ ಬಳಿಕ 2 ಸಾವಿರ ರೂ. ಕೊಡುತ್ತಿದ್ದರು. ಆದರೆ ಇಡೀ ದೇಶದಲ್ಲಿ ಯಾವುದೇ ರಾಜ್ಯದಲ್ಲಿ ಇಲ್ಲದ ಪರಿಹಾರ ನಾವು ಕೊಟ್ಟಿದ್ದೇವೆ. ಆ ಕಾರ್ಯವನ್ನು ಯಡಿಯೂರಪ್ಪ ಮಾಡಿದ್ದರು. ನಾನು ಮುಖ್ಯಮಂತ್ರಿ ಆಗಿದ್ದಾಗಲೂ ಪ್ರವಾಹ ಬಂದಿತ್ತು. ಆಗ ಸಿದ್ದರಾಮಯ್ಯ ಏನು ಕೊಡುತ್ತೀರಿ ಪರಿಹಾರ ಅಂತಾ ಜಿಗಜಿಗಿದು ಕೇಳಿದ್ದರು. ಆಗ ಕೇಂದ್ರ ಕೊಡುವ ಪರಿಹಾರಕ್ಕೆ ಎರಡು ಪಟ್ಟು ಸೇರಿಸಿ ಕೊಡುತ್ತೇವೆ ಎಂದಿದ್ದೆ. ಅದರಂತೆಯೇ ಪರಿಹಾರ ಕೊಟ್ಟಿದ್ದೇವೆ ಎಂದರು.
ನಾವು ರೈತರ ಪರವಾಗಿ ಇದ್ದವರು ನಾವು, ರೈತ ಸಂಕಷ್ಟದಲ್ಲಿ ಇದ್ದಾಗ ಧಾವಿಸಿ ಕೆಲಸ ಮಾಡಿದ್ದು ಬಿಜೆಪಿ ಸರ್ಕಾರ ಎಂದು ಹೇಳಿದರು.
ಸದ್ಯ ಕಾಂಗ್ರೆಸ್ನವರು ಹೊಸ ಅಡ್ಡ ಸೋಗು ತೆಗೆದಿದ್ದಾರೆ. ನಾಟಕದ ಮಧ್ಯೆ ಅಡ್ಡ ಸೋಗು ಬರುತ್ತದೆ. ಹಾಗೆಯೇ ಕಾಂಗ್ರೆಸ್ ಗ್ಯಾರಂಟಿ ಯೋಜನೆಯ ಅಡ್ಡಸೋಗು ಹಾಕಿದೆ. ಅಡ್ಡ ಸೋಗು ಹಾಕಿಕೊಂಡು ಜನರ ಬಳಿ ಬಂದಿದೆ. ಹತ್ತು ಕೆಜಿ ಅಕ್ಕಿ ಅಂತಾ ಹೇಳುತ್ತಿದ್ದಾರೆ. 10 ಕೆಜಿ ಇದ್ದಿದ್ದನ್ನು 5 ಕೆಜಿಗೆ ಇಳಿಸಿದ್ದೇ ಕಾಂಗ್ರೆಸ್ ಎಂದು ಆರೋಪಿಸಿದರು.