ಮೈಸೂರು: ವಿಶ್ವದಾದ್ಯಂತ ಮಹಿಳೆಯರು ತಮ್ಮ ಸಮಾನ ಹಕ್ಕುಗಳಿಗೋಸ್ಕರ ಹೋರಾಟ ಮಾಡಿದರು. ಅದರ ಪ್ರತಿಫಲವಾಗಿ ಮಹಿಳೆಯರು ತಮ್ಮ ಸ್ವಾತಂತ್ರ್ಯದ ಹಕ್ಕುಗಳನ್ನು ಪಡೆಯುವಲ್ಲಿ ಯಶಸ್ವಿಯಾದರು.
ಆದರೆ ಭಾರತದಲ್ಲಿ ಸಂಪ್ರದಾಯದ ಕಟ್ಟಳೆಗಳು ಮಹಿಳೆಯರನ್ನು ನಾಲ್ಕು ಗೋಡೆಗಳ ಮಧ್ಯೆ ಬಂದಿಸಿತ್ತು. ಸಂವಿಧಾನವು ಇಂತಹ ಮಹಿಳೆಯರನ್ನು ಬಿಡುಗಡೆಗೊಳಿಸಿತು ಎಂದು ಚಿಂತಕ ಡಾ. ಕೃಷ್ಣಮೂರ್ತಿ ಚಮರಂ ಪ್ರತಿಪಾದಿಸಿದರು. ಲಯನ್ಸ್ ಕ್ಲಬ್ ಆಫ್ ಮೈಸೂರು ಪರಿವರ್ತನಾ, ಬೆಟರ್ ಲೈಫ್ ಚಾರಿಟೇಬಲ್ ಟ್ರಸ್ಟ, ಕರುನಾಡ ರಕ್ಷಣಾ ವೇದಿಕೆ ಮತ್ತು ಪರಿವರ್ತನ ಫೌಂಡೇಶನ್ ಮೈಸೂರು ಸಹಯೋಗದೊಂದಿಗೆ ಮಹಿಳಾ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಮಹಿಳೆಯರ ಬಿಡುಗಡೆಯಲ್ಲಿ ಸಂವಿಧಾನದ ಮಹತ್ವ ಎಂಬ ವಿಷಯ ಕುರಿತು ಮಾತನಾಡಿದರು.
ಭಾರತದಲ್ಲಿ ಮಹಿಳೆಯರಿಗೆ ಹಕ್ಕು ಅಧಿಕಾರಗಳು ದೊರೆಯಲು ಸಂವಿಧಾನವು ಕಾರಣವಾಗಿದೆ. ಡಾ. ಅಂಬೇಡ್ಕರ್ ಅವರ ದೂರ ದೃಷ್ಟಿಯಿಂದಾಗಿ ಮಹಿಳೆಯರಿಗೆ ಶಿಕ್ಷಣ, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಸಮಾನತೆ ದೊರೆಯಿತು. ಆದರೆ, ಭಾರತದ ಮಹಿಳಾ ಹೋರಾಟಗಳಿಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ಇಂದಿಗೂ ಪ್ರೇರಣೆಯಾಗದೆ ಇರುವುದು ವಿಷಾದನೀಯ ಸಂಗತಿ ಎಂದು ತಿಳಿಸಿದರು. ಭಾರತದ ಮಹಿಳೆಯರಲ್ಲಿ ಇಂದಿಗೂ ಬಡವರ್ಗದ ಮಹಿಳೆಯರು ಸಿರಿವಂತ ಮಹಿಳೆಯರು, ಅಕ್ಷರಸ್ತ ಮಹಿಳೆಯರು ಅನಕ್ಷರಸ್ತ ಮಹಿಳೆಯರು ಎಂದು ಒಡೆದು ಹೋಗಿದ್ದಾರೆ. ಅದಕ್ಕೂ ಮಿಗಿಲಾಗಿ ಧರ್ಮ ಮತ್ತು ಜಾತಿಯ ಹೆಸರಲ್ಲಿ ಸಹ ಮಹಿಳೆಯರು ಒಡೆದು ಹೋಗಿರುವುದು ವಿಷಾದನೀಯ ಸಂಗತಿ ಎಂದು ತಿಳಿಸಿದರು.
ಮಹಿಳೆಯರ ವಿವಿಧ ಹಕ್ಕುಗಳನ್ನು ಕುರಿತು ಅಂಬೇಡ್ಕರ್ ರವರು ಮಂಡಿಸಿದ ಹಿಂದೂ ಕೋಡ್ ಬಿಲ್ ಅನ್ನು ಅಂದು ಅನೇಕ ಮೇಲ್ವರ್ಗದ ಮಹಿಳೆಯರೇ ವಿರೋಧಿಸುವಂತೆ ಪಿತೂರಿ ನಡೆಸಲಾಯಿತು. ಯಾರು ಅಂದು ಬಾಬಾಹೇಬ್ ಅಂಬೇಡ್ಕರ್ ಅವರ ಮಹಿಳಾ ಹಕ್ಕುಗಳ ವಿರುದ್ಧ ಪಿತೂರಿ ನಡೆಸಿದರೋ ಅವರೇ ಇಂದು ಅಂಬೇಡ್ಕರ್ ಅವರ ಸವಲತ್ತುಗಳನ್ನು ಅನುಭವಿಸುತ್ತಾ ವಿರಾಜಮಾನರಾಗಿದ್ದಾರೆ ಎಂದರು.
ಮಾನಸ ಸಿಕ್ರಂ ಜಿಲ್ಲಾ ಸಂಪನ್ಮೂಲ ಕೇಂದ್ರ ಮೈಸೂರು ಸಂಸ್ಥೆಯ ದೇವರಾಜು ಎಸ್.ಎಸ್., ಮಹಿಳೆಯರಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕ್ಲಬ್ ಅಧ್ಯಕ್ಷ ಲಯನ್ ಸತೀಶ್ ಅಧ್ಯಕ್ಷತೆ ವಹಿಸಿದ್ದರು. ಲಯನ್ ಉಮಾದೇವೇಗೌಡ ಸಮಾರಂಭ ಉದ್ಘಾಟಿಸಿದರು. ವಿಶೇಷ ಅತಿಥಿಗಳಾಗಿ ಲಯನ್ ಹೇಮಾವತಿ ಕೃಷ್ಣೇಗೌಡ, ಲಯನ್ ಪ್ರತಿಮಾ ರಮೇಶ್ ಭಾಗವಹಿಸಿದ್ದರು.