ಮನೆ ರಾಜ್ಯ ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎನ್ನುವ ಸಂವಿಧಾನದ ಮೌಲ್ಯ ಪರಿಣಾಮಕಾರಿಯಾಗಿ ಜಾರಿಯಾಗಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎನ್ನುವ ಸಂವಿಧಾನದ ಮೌಲ್ಯ ಪರಿಣಾಮಕಾರಿಯಾಗಿ ಜಾರಿಯಾಗಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

0

ಬೆಂಗಳೂರು: ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಇದು ಪರಿಣಾಮಕಾರಿಯಾಗಿ ಜಾರಿಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಹಾಗೂ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಸಹಯೋಗದಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣಾ ಅಧಿನಿಯಮ, 2023ರ ಸಭೆಯಲ್ಲಿ ಮಾತನಾಡಿದರು.

ಸರ್ಕಾರಿ ವಕೀಲರಿಗೆ ಸರ್ಕಾರದ ಕೇಸು ಎಂದರೆ ಅಸಡ್ಡೆ ಇರಬಾರದು. ಸರ್ಕಾರದ ಕೇಸುಗಳು ಎಂದರೆ ಜನರ ಕೇಸುಗಳು. ಜನರಿಗೆ ನ್ಯಾಯ ಸಿಗುವ ಪ್ರಮಾಣ ಇನ್ನೂ ಹೆಚ್ಚಾಗಬೇಕು. ಬಡವರಿಗೆ ಮೇಲಿನ ನ್ಯಾಯಾಲಯಗಳಿಗೆ ಹೋಗುವ ಶಕ್ತಿ ಇರುವುದಿಲ್ಲ. ಬಡವರಿಗೆ ನ್ಯಾಯ ಸಿಗದಿದ್ದರೆ ಸರಕಾರಿ ವಕೀಲರನ್ನು ನೇಮಿಸಿಕೊಂಡಿದ್ದು ಸಾರ್ಥಕ ಆಗುವುದಿಲ್ಲ ಎಂದರು.

ಪ್ಲೀಡಿಂಗ್ಸ್ ಸರಿಯಾಗಿ, ಪರಿಣಾಮಕಾರಿಯಾಗಿ ಬರೆಯುವುದು ಬಹಳ ಮುಖ್ಯ. ಈ ಹಂತದಲ್ಲೇ ಅಸಡ್ಡೆ, ಉಡಾಫೆತನ ಪ್ರದರ್ಶಿಸಿದರೆ ನ್ಯಾಯ ಪ್ರಕ್ರಿಯೆಯ ಮುಂದಿನ ಎಲ್ಲಾ ಹಂತಗಳಲ್ಲಿ ವೈಫಲ್ಯ ಆಗುತ್ತದೆ. ಆದ್ದರಿಂದ ಬಹಳ ಜವಾಬ್ದಾರಿಯುತವಾಗಿ ಸರ್ಕಾರಿ ವಕೀಲರು ವರ್ತಿಸಬೇಕು ಎಂದು ಸೂಚಿಸಿದರು.

ಸರ್ಕಾರಿ ವಕೀಲರು ಮತ್ತು ಅಧಿಕಾರಿಗಳ ವೈಫಲ್ಯಕ್ಕೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ವ್ಯಾಜ್ಯ ಸಣ್ಣದಿರಲಿ, ದೊಡ್ಡದಿರಲಿ ಅದನ್ನು ಗಂಭೀರವಾಗಿ ಪರಿಗಣಿಸಿ ಹೋಂ ವರ್ಕ್ ಮಾಡಿ. ನಮಗೆ ಹಣ ಕೊಡುವುದು ಜನರು. ಜನರ ಹಣದಲ್ಲಿ ನಮಗೆ ಸವಲತ್ತುಗಳು ಸಿಗುತ್ತಿವೆ. ಈ ಬಗ್ಗೆ ನಮಗೆ ಪ್ರಜ್ಞೆ ಮತ್ತು ಕರ್ತವ್ಯ ಪ್ರಜ್ಞೆ ಹಾಗೂ ಧನ್ಯತೆ ಇರಬೇಕು ಎಂದರು.

ಕೆಲವು ನ್ಯಾಯಾಧೀಶರು ಮುಖ ನೋಡಿ ಮಣೆ ಹಾಕುತ್ತಾರೆ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿದೆ. ಇದನ್ನು ಎಲ್ಲರೂ ಒಟ್ಟಾಗಿ ಅಳಿಸಬೇಕು. ಪ್ರಕರಣಗಳಲ್ಲಿ ಅನಗತ್ಯವಾಗಿ ದಿನಾಂಕ ಪಡೆಯಬಾರದು. ಕೇಸು ನಡೆಸಬೇಕು. ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡುವುದನ್ನು ಪರಿಣಾಮಕಾರಿಯಾಗಿ ವಿರೋಧಿಸಬೇಕು. ಅಲ್ಲೇ ನಿಮ್ಮಗಳ ಅರ್ಹತೆ ಗೊತ್ತಾಗುತ್ತದೆ ಎಂದು ಸೂಚ್ಯವಾಗಿ ಮುಖ್ಯಮಂತ್ರಿಗಳು ತಿಳಿ ಹೇಳಿದರು.

ನ್ಯಾಯಾಂಗ ನಿಂಧನೆ ಆಗದಂತೆ ವೃತ್ತಿಪರತೆ ಪ್ರದರ್ಶಿಸುವ ಹೊಣೆಗಾರಿಕೆ ನಿಮ್ಮ ಮೇಲಿದೆ. ಸರ್ಕಾರವೇ ನಿಮ್ಮ ಕಕ್ಷಿದಾರ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಕರ್ತವ್ಯ ಪ್ರಜ್ಞೆ ಮೆರೆಯಬೇಕು. ಸರ್ಕಾರ ಮತ್ತು ಜನರ ಹಿತ ಕಾಪಾಡುವ ಮತ್ತು ಸರ್ಕಾರದ ಆಸ್ತಿ ಉಳಿಸುವ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ ಎಂದು ಸರ್ಕಾರಿ ವಕೀಲರಿಗೆ ಸೂಚಿಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾನೂನು ಸಚಿವರಾದ ಎಚ್.ಕೆ.ಪಾಟೀಲ್ ಮತ್ತು ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಸಭೆಯಲ್ಲಿ ಉಪಸ್ಥಿತರಿದ್ದರು.