ತುಮಕೂರು, ಜೂನ್ 08: ಪಾಕಿಸ್ತಾನ ಮೂಲದ ಶಂಕಿತ ಉಗ್ರನೊಂದಿಗೆ ಸಂಪರ್ಕ ಹೊಂದಿದ್ದ ಆರೋಪದಡಿ ತುಮಕೂರು ಮತ್ತು ದಾವಣಗೆರೆ ಮೂಲದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ದೇಶವಿರೋಧಿ ಸಂಚು ರೂಪಿಸಿದ್ದ ವಿಚಾರ ಬೆಳಕಿಗೆ ಬಂದಿದೆ.
ಇನ್‌ಸ್ಟಾಗ್ರಾಮ್ ಮೂಲಕ ಯುವಕರನ್ನು ಸಂಪರ್ಕಿಸಿ, ಅವರನ್ನು ಬ್ರೈನ್‌ವಾಶ್ ಮಾಡಿ ದೇಶದಲ್ಲಿ ಕುಕೃತ್ಯ ಎಸಗಲು ಪಾಕ್ ಮೂಲದ ರಾಣಾ ಎಂಬಾತ ಯೋಜನೆ ರೂಪಿಸಿದ್ದಾನೆ ಎಂಬ ಮಾಹಿತಿ ತನಿಖೆಯಲ್ಲಿ ಪತ್ತೆಯಾಗಿದೆ. ಸುಮಾರು ಒಂದು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿದ್ದ ರಾಣಾ, ಆರಂಭದಲ್ಲಿ ಧಾರ್ಮಿಕ ಆಚರಣೆಗಳು ಹಾಗೂ ಧರ್ಮಗುರುಗಳ ಪ್ರವಚನಗಳನ್ನು ಹಂಚಿಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ.

ನಂತರ ಧರ್ಮಕ್ಕಾಗಿ ಕೆಲಸ ಮಾಡಬೇಕು ಎಂದು ಹೇಳಿ ಬಂಧಿತ ಅಲ್ಲಾಬಕ್ಷುವಿನ ಮನಸ್ಸಿನಲ್ಲಿ ಪ್ರಚೋದನಾತ್ಮಕ ವಿಚಾರಗಳನ್ನು ತುಂಬಿ ಬ್ರೈನ್‌ವಾಶ್ ಮಾಡಿದ್ದಾನೆ ಎನ್ನಲಾಗಿದೆ. ಅಲ್ಲಾಬಕ್ಷುವಿನ ಮೊಬೈಲ್‌ನಲ್ಲಿ ಪಾಕಿಸ್ತಾನದ ಕೋಡ್ ಹೊಂದಿರುವ ದೂರವಾಣಿ ಸಂಖ್ಯೆ ಪತ್ತೆಯಾಗಿದ್ದು, ಅದನ್ನು “Rana bhi bhi” ಎಂಬ ಹೆಸರಿನಲ್ಲಿ ಸೇವ್ ಮಾಡಿಕೊಂಡಿದ್ದಾನೆ ಎಂಬುದು ವಿಚಾರಣೆಯಲ್ಲಿ ಗೊತ್ತಾಗಿದೆ.
ಆರೋಪಿಗಳ ಚಾಟ್ ಮಾಹಿತಿ ಬಹಿರಂಗ
ಪಾಕ್ ಉಗ್ರ ರಾಣಾ ಸಂಪರ್ಕಕ್ಕೆ ಬಂದ ಬಳಿಕ ಅಲ್ಲಾಬಕ್ಷು ಹಿಂದಿ ಭಾಷೆಯಲ್ಲಿ ನಡೆಸಿದ್ದ ಚಾಟಿಂಗ್ ಮಾಹಿತಿ ತನಿಖಾ ತಂಡಕ್ಕೆ ಲಭ್ಯವಾಗಿದೆ. ರಾಣಾ ಮಾತುಗಳಿಗೆ ಮಾರುಹೋಗಿದ್ದ ಅಲ್ಲಾಬಕ್ಷು, “ಇನ್ಷಾ ಅಲ್ಲಾ, ಯಾವುದೇ ಕೆಲಸ ಇರಲಿ, ಯಾವ ರೀತಿಯ ಕೆಲಸವಾದರೂ ಇರಲಿ, ನಿನ್ನ ತಮ್ಮನನ್ನು ನೆನಪಿಸಿಕೊ. ನಾನು ಖಂಡಿತವಾಗಿ ಮಾಡುತ್ತೇನೆ” ಎಂದು ಸಂದೇಶ ಕಳುಹಿಸಿದ್ದಾನೆ ಎಂದು ತಿಳಿದುಬಂದಿದೆ.
ಅಲ್ಲದೆ, “ಇನ್ಷಾ ಅಲ್ಲಾ, ಈಗ ನಾವಿಬ್ಬರೂ ಜೊತೆಯಾಗಿದ್ದೇವೆ. ನಮ್ಮ ಸಮುದಾಯಕ್ಕಾಗಿ ಒಟ್ಟಾಗಿ ಕೆಲಸ ಮಾಡೋಣ” ಎಂದು ಹೇಳಿರುವುದೂ ತನಿಖೆಯಲ್ಲಿ ಪತ್ತೆಯಾಗಿದೆ.
50 ರಿಂದ 60 ಮಂದಿಯನ್ನು ಸಿದ್ಧಪಡಿಸುವಂತೆ ಸೂಚನೆ
“ದೇವರ ಕೆಲಸವನ್ನು ನಾವೆಲ್ಲರೂ ಸೇರಿ ಮಾಡೋಣ” ಎಂದು ಹೇಳುತ್ತಿದ್ದ ರಾಣಾ, ಅಲ್ಲಾಬಕ್ಷುವಿಗೆ ದ್ವೇಷದ ವಿಚಾರಗಳನ್ನು ಬೋಧಿಸುತ್ತಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ. “ನಮ್ಮ ಧರ್ಮದವರನ್ನು ದ್ವೇಷಿಸುವವರನ್ನು ಹಂತ ಹಂತವಾಗಿ ನಾಶ ಮಾಡಬೇಕು. ಅದಕ್ಕಾಗಿ 50 ರಿಂದ 60 ಮಂದಿಯನ್ನು ಸಿದ್ಧಪಡಿಸು. ನಾನು ಹೇಳಿದ ರೀತಿಯಲ್ಲಿ ಅವರಿಗೆ ತರಬೇತಿ ನೀಡು. ನಿನಗೆ ಎಷ್ಟು ಹಣ ಬೇಕೋ ಅಷ್ಟು ಕೊಡುತ್ತೇನೆ” ಎಂದು ಆಮಿಷ ಒಡ್ಡಿದ್ದಾನೆ ಎನ್ನಲಾಗಿದೆ.

ಇದೇ ವೇಳೆ ಅಲ್ಲಾಬಕ್ಷು, “ನೀನು ಭಾರತದಲ್ಲಿ ಬೇರೆ ಯಾರನ್ನಾದರೂ ಸಂಪರ್ಕಿಸಿದ್ದೀಯಾ?” ಎಂದು ಪ್ರಶ್ನಿಸಿದ್ದಾನೆ. ಆಗ ರಾಣಾ, ಜಮೀರ್ ಖಾನ್ ಎಂಬ ಮತ್ತೊಬ್ಬನನ್ನು ಆತನಿಗೆ ಪರಿಚಯಿಸಿದ್ದಾನೆ ಎಂಬ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ. ಈ ಇಬ್ಬರು ಸೇರಿ ದೇಶವಿರೋಧಿ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಸಂದರ್ಭದಲ್ಲಿ ಕೇಂದ್ರ ಗುಪ್ತಚರ ಇಲಾಖೆಗೆ ಮಹತ್ವದ ಸುಳಿವು ಲಭ್ಯವಾಗಿದೆ.
ಕೂಡಲೇ ಎಚ್ಚೆತ್ತ ಗುಪ್ತಚರ ಇಲಾಖೆ ನೀಡಿದ ನಿಖರ ಮಾಹಿತಿಯ ಆಧಾರದಲ್ಲಿ ತುಮಕೂರು ನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇಬ್ಬರು ಶಂಕಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ಪೊಲೀಸರು, ಈ ಭಯೋತ್ಪಾದನಾ ಸಂಚಿನ ಹಿಂದೆ ಇನ್ನಾರಾದರೂ ಇದ್ದಾರೆಯೇ ಎಂಬ ದಿಕ್ಕಿನಲ್ಲಿ ತನಿಖೆ ಮುಂದುವರಿಸಿದ್ದಾರೆ.













