ಮನೆ ರಾಷ್ಟ್ರೀಯ ದೇಶದ ಮೊದಲ ಬುಲೆಟ್‌ ರೈಲು 2027 ರಂದು ಸಂಚಾರ ಆರಂಭ..!

ದೇಶದ ಮೊದಲ ಬುಲೆಟ್‌ ರೈಲು 2027 ರಂದು ಸಂಚಾರ ಆರಂಭ..!

0

ನವದೆಹಲಿ : ದೇಶದ ಮೊದಲ ಬುಲೆಟ್‌ ರೈಲು 2027 ರ ಆಗಸ್ಟ್‌ 15 ರಂದು ಸಂಚಾರ ಆರಂಭಿಸಲಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ ಪ್ರಕಟಿಸಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೊದಲು ಸೂರತ್‌ನಿಂದ ಬಿಲಿಮೋರಾವರೆಗೆ ತೆರೆಯಲಾಗುತ್ತದೆ. ನಂತರ ವಾಪಿಯಿಂದ ಸೂರತ್‌ವರೆಗೆ ತೆರೆಯಲಾಗುವುದು. ನಂತರದ ಹಂತದಲ್ಲಿ ಅಹಮದಾಬಾದ್, ಥಾಣೆ, ಕೊನೆಗೆ ಮುಂಬೈನಿಂದ ಅಹಮದಾಬಾದ್‌ವರೆಗೆ ಸಂಚರಿಸಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಗುವಾಹಟಿ-ಕೋಲ್ಕತ್ತಾ ಮಾರ್ಗದಲ್ಲಿ ಸಂಚರಿಸಲಿದೆ. ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಸೇವೆಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು. ಹೊಸ ಸೇವೆಯು ಪ್ರಯಾಣಿಕರಿಗೆ ಮಾತ್ರವಲ್ಲದೆ ಕುಟುಂಬಗಳು, ವಿದ್ಯಾರ್ಥಿಗಳು ಮತ್ತು ಎರಡು ಪ್ರಮುಖ ನಗರಗಳ ನಡುವೆ ವೇಗವಾಗಿ ಮತ್ತು ಹೆಚ್ಚು ವಿಶ್ವಾಸಾರ್ಹ ರಾತ್ರಿ ಪ್ರಯಾಣವನ್ನು ಬಯಸುವ ಪ್ರವಾಸಿಗರಿಗೆ ಪ್ರಯೋಜನ ಸಿಗಲಿದೆ ಎಂದರು.

ಸ್ಥಳೀಯವಾಗಿ ನಿರ್ಮಿಸಲಾದ ವಂದೇ ಭಾರತ್ ಸ್ಲೀಪರ್ ರೈಲಿನ ಅಂತಿಮ ಹೈಸ್ಪೀಡ್ ಪರೀಕ್ಷಾರ್ಥ ಸಂಚಾರವು ಇತ್ತೀಚೆಗೆ ಕೋಟಾ-ನಾಗ್ಡಾ ವಿಭಾಗದಲ್ಲಿ ಪೂರ್ಣಗೊಂಡಿತು. ಪರೀಕ್ಷಾರ್ಥ ಸಂಚಾರದ ಸಮಯದಲ್ಲಿ ರೈಲು ಗಂಟೆಗೆ 180 ಕಿ.ಮೀ ವೇಗವನ್ನು ತಲುಪಿತು ಎಂದು ಹೇಳಿದರು. ವಂದೇ ಭಾರತ್ ಸ್ಲೀಪರ್ ರೈಲು ಒಟ್ಟು 16 ಬೋಗಿಗಳನ್ನು ಒಳಗೊಂಡಿರುತ್ತದೆ, ಇದರಲ್ಲಿ 11 ಮೂರು ಹಂತದ ಎಸಿ ಕೋಚ್‌ಗಳು, 4 ಎರಡು ಹಂತದ ಎಸಿ ಕೋಚ್‌ಗಳು ಮತ್ತು 1 ಮೊದಲ ಎಸಿ ಕೋಚ್ ಸೇರಿವೆ.

ಈ ರೈಲು ಒಟ್ಟು 823 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿದ್ದು 3 ಟಯರ್‌ ಎಸಿಯಲ್ಲಿ 611, 2 ಟಯರ್‌ ಎಸಿಯಲ್ಲಿ 188 ಮತ್ತು 1 ಟಯರ್‌ ಎಸಿಯಲ್ಲಿ 24 ಸೀಟ್‌ ಇರಲಿದೆ. 3 ಟಯರ್‌ ಎಸಿ ದರವು ಆಹಾರ ಸೇರಿದಂತೆ ಸುಮಾರು 2,300 ರೂ. ಆಗಿರುತ್ತದೆ. 2 ಟಯರ್‌ ಎಸಿ ದರವು ಸುಮಾರು 3,000 ರೂ. ಆಗುವ ನಿರೀಕ್ಷೆಯಿದ್ದರೆ, 1 ಟಯರ್‌ ಎಸಿ ದರ ಸುಮಾರು 3,600 ರೂ. ಆಗುವ ನಿರೀಕ್ಷೆಯಿದೆ. 2017ರ ಸೆಪ್ಟೆಂಬರ್ 14ರಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಭಾರತದ ಹೈ ಸ್ಪೀಡ್ ಬುಲೆಟ್ ರೈಲು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು.

ಗುಜರಾತ್ ನಲ್ಲಿ 9 ಹಾಗೂ ಮಹಾರಾಷ್ಟ್ರದಲ್ಲಿ ಮೂರು ನಿಲ್ದಾಣಗಳನ್ನು ಒಳಗೊಂಡಿದೆ. ಸಬರಮತಿ, ಅಹಮದಾಬಾದ್, ಆನಂದ್, ವಡೋದರ, ಭರೂಚ್, ಸೂರತ್, ಬಿಲಿಮೋರಾ, ವಾಪಿ, ಬೋಯಿಸರ್, ವಿರಾರ್, ಥಾಣೆ ಹಾಗೂ ಮುಂಬೈ, ಈ ಬುಲೆಟ್ ರೈಲು ಯೋಜನೆ ಒಟ್ಟು 12 ನಿಲ್ದಾಣಗಳನ್ನು ಒಳಗೊಂಡಿದೆ. ಆರಂಭದಲ್ಲಿ 2026ರ ವೇಳೆಗೆ ಈ ಯೋಜನೆಯನ್ನು ಪೂರ್ಣಗೊಳಿಸುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಆದರೆ ಕೋವಿಡ್‌, ಮಹಾರಾಷ್ಟ್ರದಲ್ಲಿ ಭೂ ಸ್ವಾಧೀನ ವಿಳಂಬ ಇತ್ಯಾದಿ ಕಾರಣಗಳಿಂದ ಬುಲೆಟ್‌ ರೈಲು ಯೋಜನೆ ಕಾಮಗಾರಿಗೆ ಅಡ್ಡಿಯಾಗಿತ್ತು. ಈಗ ಎಲ್ಲಾ ಅಡ್ಡಿಗಳು ನಿವಾರಣೆಯಾಗಿದ್ದು ಕಾಮಗಾರಿ ಭರದಿಂದ ನಡೆಯುತ್ತಿದೆ.