“ಆರೋಪಿ ಹೀಗೆ ಬಂದರೆ ಹಾಗೆ ಜಾಮೀನು ನೀಡಬೇಕು ಎಂಬ ಹಂತವನ್ನು ನಾವು ತಲುಪಿದ್ದೇವೆ. ಆರೋಪಿಯನ್ನು ಹಿಡಿಯಲೇಬಾರದು ಎಂಬ ದಿನ ದೂರವಿಲ್ಲ. ಹೀಗೆ ಆದರೆ ಬರೀ ಆರೋಪಿಗಳಿಗೆ ಮಾತ್ರ ಸಂವಿಧಾನದ 21ನೇ ವಿಧಿ (ಜೀವಿಸುವ ಹಕ್ಕು) ಅನ್ವಯವಾಗುತ್ತದೆ ಎಂಬ ಹಂತಕ್ಕೆ ನಾವು ಹೋಗಿ ಬಿಡುತ್ತೇವೆ” ಎಂದು ಕರ್ನಾಟಕ ಹೈಕೋರ್ಟ್ ಮೌಖಿಕವಾಗಿ ಕಳವಳ ವ್ಯಕ್ತಪಡಿಸಿತು.
ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಬೆಂಗಳೂರಿನ ಎಸ್ ಎಂ ಬೈರೇಗೌಡ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರು ಮೇಲಿನಂತೆ ಹೇಳಿದರು.
ವಿಚಾರಣೆಯ ಒಂದು ಹಂತದಲ್ಲಿ ಪೀಠವು “ಹೀಗೆ ಬಂದರೆ ಹಾಗೆ ಜಾಮೀನು ನೀಡಬೇಕು ಎಂಬ ಹಂತವನ್ನು ನಾವು ತಲುಪಿದ್ದೇವೆ. ಸಂವಿಧಾನದ 21ನೇ ವಿಧಿ ಅದಕ್ಕೆ ಮಾತ್ರ ಇರೋದು ಎಂಬಂತಾಗಿದೆ. ಆರೋಪಿಯನ್ನು ಹಿಡಿಯಲೇಬಾರದು ಎಂಬ ದಿನ ದೂರವಿಲ್ಲ. ಯಾರನ್ನೂ ಹಿಡಿಯಬಾರದು, ಅವರು ಅಡ್ಡಾಡಿಕೊಂಡು ಇರಲಿ. ಹೇಗಿದ್ದರೂ ಸತ್ತವರಿಗೆ ಸಂವಿಧಾನದ 21ನೇ ವಿಧಿ ಅನ್ವಯಿಸುವುದಿಲ್ಲವಲ್ಲ. ಹೀಗೆ ಆದರೆ ಬರೀ ಆರೋಪಿಗಳಿಗೆ ಮಾತ್ರ 21ನೇ ವಿಧಿ ಅನ್ವಯವಾಗುತ್ತದೆ ಎಂಬ ಹಂತಕ್ಕೆ ನಾವು ಹೋಗಿ ಬಿಡುತ್ತೇವೆ” ಎಂದು ಬೇಸರಿಸಿದರು.
ಅರ್ಜಿದಾರರ ಪರ ವಕೀಲರು “ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದುದರಿಂದ ಸಂಘವೊಂದಕ್ಕೆ ಭೂಮಿ ಮಂಜೂರಾತಿ ಪಡೆಯುವ ಸಂಬಂಧದ ಕಡತ ವಿಲೇವಾರಿ ಮಾಡಲಾಗದು ಎಂದು ಹೇಳಿದ್ದೆ. ಅದಾಗ್ಯೂ, 20 ಸಾವಿರ ರೂಪಾಯಿಯನ್ನು ಹಣವನ್ನು ಜೇಬಿಗೆ ತುರುಕಿದ್ದಾರೆ. ಈ ಸಂದರ್ಭದಲ್ಲಿ ಟ್ರ್ಯಾಪ್ ಮಾಡಿಸಿದ್ದಾರೆ. ಅರ್ಜಿದಾರರ ಟ್ರ್ಯಾಪ್ ಆದ ಕೆಲವೇ ದಿನಗಳಲ್ಲಿ ದೂರುದಾರರ ಕೆಲಸವಾಗಿದೆ. ತನ್ನ ಕೆಲಸ ಮಾಡಿಕೊಳ್ಳಲು ನನ್ನನ್ನು ಬಲಿಪಶು ಮಾಡಲಾಗಿದೆ” ಎಂದು ಆಕ್ಷೇಪಿಸಿದರು.
ಆಗ ಪೀಠವು “ನೀವು ಹಣವನ್ನು ಮುಟ್ಟಿರದಿದ್ದರೆ ಕಲರ್ ಪರೀಕ್ಷೆಯಲ್ಲಿ ಅದು ಪಾಸಿಟಿವ್ ಬರುತ್ತಿರಲಿಲ್ಲ. ಹಣವನ್ನು ಜೇಬಿಗೆ ತುರುಕಿದ್ದರೆ ಅದನ್ನು ನೀವು ಮುಟ್ಟಬಾರದಿತ್ತಲ್ಲವೇ” ಎಂದು ಪ್ರಶ್ನಿಸಿತು.
ಅಂತಿವಾಗಿ ಭ್ರಷ್ಟಾಚಾರ ನಿಷೇಧ ಕಾಯಿದೆ ಸೆಕ್ಷನ್ 7ರ ಅಡಿ ಅಪರಾಧಕ್ಕೆ ಒಂದು ವರ್ಷ ಶಿಕ್ಷೆ ವಿಧಿಸಲಾಗಿದೆ. ಸೆಕ್ಷನ್ 13(1)(d)ರ ಅಡಿ ಅಪರಾಧಕ್ಕೆ ಒಂದೂವರೆ ವರ್ಷ ಶಿಕ್ಷೆ ವಿಧಿಸಲಾಗಿದೆ. ಲೋಕಾಯುಕ್ತ ನ್ಯಾಯಾಲಯವು ಕಡಿಮೆ ಶಿಕ್ಷೆ ವಿಧಿಸಿದೆ. ಅರ್ಜಿದಾರರಿಗೆ ವಯಸ್ಸಾಗಿದೆ ಎನ್ನುವುದನ್ನು ಪರಿಗಣಿಸಿ ಪಿಸಿ ಕಾಯಿದೆ ಸೆಕ್ಷನ್ 13(1)(d)ರ ಅಡಿ ಅಪರಾಧಕ್ಕೆ ಒಂದೂವರೆ ವರ್ಷದ ಬದಲಿಗೆ ಒಂದು ವರ್ಷಕ್ಕೆ ಶಿಕ್ಷೆ ಇಳಿಸಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟು, ವಿಚಾರಣೆಯನ್ನು ಮುಂದೂಡಿತು.