ಉಡುಪಿ: ಬಳ್ಳಾರಿ ಸರಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವು ಪ್ರಕರಣದ ಕುರಿತಂತೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಯಲಿದೆ. ನಾನು ಮತ್ತು ದಿನೇಶ್ ಗುಂಡೂರಾವ್ ಸತತ ಸಂಪರ್ಕದಲ್ಲಿದ್ದೇವೆ. ಭೇಟಿ ಕೊಟ್ಟಿಲ್ಲ ಎಂದರೆ ಈ ಪ್ರಕರಣವನ್ನು ಹಗುರವಾಗಿ ಪರಿಗಣಿಸಿದ್ದೇವೆ ಎಂದಲ್ಲ. ಸರ್ಕಾರಕ್ಕೆ ಮತ್ತು ಮಂತ್ರಿಗಳಿಗೆ ಬಹಳ ಜವಾಬ್ದಾರಿಯಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಘಟನೆಯ ಬಗ್ಗೆ ಸಿಎಂ ನೇತೃತ್ವದಲ್ಲಿ ಅವರ ಅಧ್ಯಕ್ಷತೆಯಲ್ಲೇ ಸಭೆ ಕರೆಯಲಾಗಿದೆ. ತಪ್ಪಿತಸ್ಥರ ವಿರುದ್ಧ ಸ್ಥಳದಲ್ಲೇ ನಿರ್ಧಾರ ಕ್ರಮವಾಗುತ್ತದೆ ಎಂದರು.
ಬಳ್ಳಾರಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಬಿಮ್ಸ್ ಆಸ್ಪತ್ರೆಯಲ್ಲಿ 15 ದಿನಗಳಲ್ಲಿ ಒಟ್ಟು ಐವರು ಬಾಣಂತಿಯರು ಮೃತಪಟ್ಟಿದ್ದರು.
ಸಚಿವ ಸಂಪುಟ ವಿಸ್ತರಣೆ ಚರ್ಚೆ ವಿಚಾರವಾಗಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಯ ಚರ್ಚೆ ಕಾಂಗ್ರೆಸ್ ನಲ್ಲಿ ಇಲ್ಲ. ಚರ್ಚೆ ಮಾಧ್ಯಮಗಳಲ್ಲಿ ಮಾತ್ರ ಇತ್ತು. ಸಂಪುಟ ವಿಸ್ತರಣೆ ನಿಜಾವೇ ಸುಳ್ಳೇ ಎಂದು ನೀವೇ ಸ್ಪಷ್ಟಪಡಿಸಬೇಕು. ಯಾರನ್ನು ತೆಗೆಯುತ್ತೀರಿ? ಯಾರನ್ನು ಕೂರಿಸುತ್ತೀರಿ? ಹೊಸದಾಗಿ ಪ್ರಮಾಣವಚನ ಎಂದು ಹೇಳುತ್ತೀರಿ. ಈ ಚರ್ಚೆಗೆ ಮಾಧ್ಯಮಗಳೇ ಸ್ಪಷ್ಟನೆ ಕೊಡಬೇಕು ಎಂದರು.
ಹಾಸನದಲ್ಲಿ ಕಾಂಗ್ರೆಸ್ ಭಿನ್ನಮತೀಯರ ಸಮಾವೇಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಹೆಬ್ಬಾಳ್ಕರ್, ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಮತವಿಲ್ಲ. ಭಿನ್ನಮತ ಇರುವುದು ಬಿಜೆಪಿಯಲ್ಲಿ ಮಾತ್ರ. ಬಿಜೆಪಿ ಭಿನ್ನಮತದ ಬಗ್ಗೆ ಮಾಧ್ಯಮಗಳೇ ದಿನವೂ ತೋರಿಸುತ್ತಿವೆ. ನಮ್ಮಲ್ಲಿ ಭಿನ್ನಮತ ಇಲ್ಲ ಎನ್ನುವುದಕ್ಕೆ ಉಪಚುನಾವಣೆಯ ಫಲಿತಾಂಶವೇ ಉತ್ತರ ಎಂದರು.