ಮನೆ ರಾಜ್ಯ ವ್ಯಾಘ್ರಗಳನ್ನು ಹಿಡಿಯಲಾಗದೆ ತಲೆ ಮೇಲೆ ಕೈ ಹೊತ್ತು ಕುಳಿತ ಇಲಾಖೆ

ವ್ಯಾಘ್ರಗಳನ್ನು ಹಿಡಿಯಲಾಗದೆ ತಲೆ ಮೇಲೆ ಕೈ ಹೊತ್ತು ಕುಳಿತ ಇಲಾಖೆ

0

ಚಾಮರಾಜನಗರ : ಹಲವು ದಿನಗಳಿಂದ ಚಾಮರಾಜನಗರದಲ್ಲಿ ಹುಲಿಗಳ ಹಾವಳಿ ಹೆಚ್ಚಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಹುಲಿ ಸೆರೆಗಾಗಿ ಅರಣ್ಯ ಇಲಾಖೆ ಮುಂದೆ ಎಷ್ಟೇ ಗೋಗರೆದರೂ ಕೊನೆಗೆ ಪ್ರಯೋಜನವಾದಾಗ 5 ಹುಲಿಗಳಿಗೆ ವಿಷ ಹಾಕಿ ಕೊಲ್ಲಲಾಗಿತ್ತು. ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆ ಮತ್ತು ಗ್ರಾಮಸ್ಥರ ನಡುವೆ ಸಂಘರ್ಷ ಏರ್ಪಟ್ಟಿತ್ತು.

ಇದೀಗ ಮತ್ತೊಮ್ಮೆ ನಂಜೆದೇವಪುರ ಬಳಿ 5 ಹುಲಿಗಳು ಕಾಣಿಸಿಕೊಂಡಿದ್ದು, ಹುಲಿಗಳ ಕಾಟಕ್ಕೆ ಬ್ರೇಕ್ ಬೀಳದಾಗಿದೆ. ಈ ಹಿನ್ನೆಲೆ ವ್ಯಾಘ್ರಗಳಿಗೆ ಬಲೆ ಬೀಸಲು ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್ ಸಿಬ್ಬಂದಿ ಮುಂದಾಗಿದ್ದರೂ ಪಶು ವೈದ್ಯರ ಕೊರತೆಯಿಂದಾಗಿ ಕಾರ್ಯಾಚರಣೆ ಸ್ಥಗಿತಗೊಂಡಿದೆ.

ಚಾಮರಾಜನಗರ ಜಿಲ್ಲೆಯ ನಂಜೆದೇವಪುರ ಗ್ರಾಮದ ಬಳಿ ಐದು ಹುಲಿಗಳು ಒಂದೇ ಸ್ಥಳದಲ್ಲಿ ಪ್ರತ್ಯಕ್ಷವಾಗಿರುವುದು ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ. ಬಿಳಿಗಿರಿ ಟೈಗರ್ ರಿಸರ್ವ್ ವ್ಯಾಪ್ತಿಯ ಈ ಪ್ರದೇಶದಲ್ಲಿ ಹುಲಿಗಳ ಚಲನವಲನವನ್ನು ಅರಣ್ಯ ಇಲಾಖೆ ಈಗಾಗಲೇ ಲೋಕೇಷನ್ ಟ್ರ್ಯಾಕಿಂಗ್ ಮೂಲಕ ಗಮನಿಸುತ್ತಿದೆ. ಆದರೆ ಹುಲಿಗಳನ್ನು ಸೆರೆ ಹಿಡಿಯುವ ಕಾರ್ಯದಲ್ಲಿ ಅರಣ್ಯ ಸಿಬ್ಬಂದಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಕೇವಲ ಇಬ್ಬರು ಪಶುವೈದ್ಯರು ಮಾತ್ರ ಲಭ್ಯವಿರುವುದರಿಂದ ಐದು ಹುಲಿಗಳಿಗೆ ಒಂದೇ ವೇಳೆ ಅರವಳಿಕೆ ಮದ್ದು ನೀಡುವುದು ಅಸಾಧ್ಯ ಎನ್ನಲಾಗುತ್ತಿದೆ. ಇಬ್ಬರು ವೈದ್ಯರು ಎರಡು ಹುಲಿಗಳಿಗೆ ಮಾತ್ರ ಅರವಳಿಕೆ ನೀಡಿದರೆ, ಗುಂಪಿನಲ್ಲಿ ಉಳಿದ ಹುಲಿಗಳು ಪ್ರತಿದಾಳಿ ಮಾಡುವ ಅಪಾಯ ಹೆಚ್ಚಿದ್ದು, ಅರಣ್ಯ ಸಿಬ್ಬಂದಿ ಹಾಗೂ ಗ್ರಾಮಸ್ಥರ ಜೀವಕ್ಕೆ ಭೀತಿ ಉಂಟಾಗುವ ಸಾಧ್ಯತೆ ಇದೆ.

ಈ ಕಾರಣದಿಂದ ಹುಲಿಗಳನ್ನು ಸೆರೆ ಹಿಡಿಯದೆ ಪಟಾಕಿ ಸದ್ದು ಮಾಡಿ ಹಾಗೂ ಎರಡು ಆನೆಗಳ ಸಹಾಯದಿಂದ ಕಾಡಿಗೆ ಓಡಿಸುವ ಯೋಜನೆಯನ್ನು ಅರಣ್ಯ ಇಲಾಖೆ ರೂಪಿಸಿದೆ. ಆದರೆ ಗ್ರಾಮಸ್ಥರು ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ಹುಲಿಗಳನ್ನು ಕಾಡಿಗೆ ಓಡಿಸದೇ ಸೆರೆ ಹಿಡಿಯಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಬೇರೆ ಜಿಲ್ಲೆಗಳಿಂದ ಹೆಚ್ಚುವರಿ ಪಶುವೈದ್ಯರು ಮತ್ತು ಕನಿಷ್ಠ ಐದು ಆನೆಗಳನ್ನು ಕರೆಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ನಡುವೆ ಬಿಳಿಗಿರಿ ಟೈಗರ್ ರಿಸರ್ವ್‌ನ ಡಿಸಿಎಫ್ ಶ್ರೀಪತಿ ಕೇಂದ್ರ ಅರಣ್ಯ ಇಲಾಖೆಯೊಂದಿಗೆ ನಿರಂತರ ಸಭೆ ನಡೆಸುತ್ತಿದ್ದು, ಗ್ರಾಮಸ್ಥರಿಗೆ ತಮ್ಮ ಅಸಹಾಯಕತೆಯನ್ನು ವಿವರಿಸಿ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಐದು ಹುಲಿಗಳು ಒಟ್ಟಾಗಿ ಇರುವುದರಿಂದ ಕೂಂಬಿಂಗ್ ಕಾರ್ಯವೂ ಕಗ್ಗಂಟಾಗಿ ಪರಿಣಮಿಸಿದ್ದು, ಸೆರೆ ಕಾರ್ಯ ಹೇಗೆ ನಡೆಸುವುದು ಎಂಬುದರ ಬಗ್ಗೆ ಅರಣ್ಯ ಸಿಬ್ಬಂದಿ ತಲೆಕೆಡಿಸಿಕೊಂಡಿದ್ದಾರೆ.