ಮನೆ ಸುದ್ದಿ ಜಾಲ ನಗರಪಾಲಿಕೆಯಿಂದ ಶಿಥಿಲಗೊಂಡಿದ್ದ ಸಮುದಾಯ ಭವನ ನೆಲಸಮ

ನಗರಪಾಲಿಕೆಯಿಂದ ಶಿಥಿಲಗೊಂಡಿದ್ದ ಸಮುದಾಯ ಭವನ ನೆಲಸಮ

0

ಮೈಸೂರು (Mysuru): ಮೈಸೂರು ಮಹಾನಗರ ಪಾಲಿಕೆ ವಾರ್ಡ್‌ ನಂ. 15ರ ಕುರಿಮಂಡಿಯ ಮುಖ್ಯ ರಸ್ತೆಯ ಉದ್ಯಾನದ ನಿವೇಶನದಲ್ಲಿ ಶಿಥಿಲಗೊಂಡು ಕಿಡಿಗೇಡಿಗಳು-ದುಷ್ಕರ್ಮಿಗಳ ಅನೈತಿಕ ಚಟುವಟಿಕೆಗಳ ತಾಣವಾಗಿದ್ದ ಸಮುದಾಯ ಭವನದ ಹಳೇ ಕಟ್ಟಡವನ್ನು ಕೊನೆಗೂ ಕೆಡವಲಾಗಿದೆ.
ಸಮುದಾಯ ಭವನ ಕೆಡವಲಾಗಿದ್ದು, ಆ ಪ್ರದೇಶದ ಅಭಿವೃದ್ಧಿಗೆ ಮುಂದಾಗಿದೆ.
ಎನ್.ಆರ್.ಮೊಹಲ್ಲಾ, ಆರ್.ಎಸ್‌ ನಾಯ್ಡು ನಗರದ ಮಾರ್ಗವಾಗಿ ರಿಂಗ್‌ ರಸ್ತೆಗೆ ಸಂಪರ್ಕ ಕಲ್ಪಿಸುವ ೮೦ ಅಡಿ ರಸ್ತೆಯಲ್ಲಿದ್ದ ಈ ಸಮುದಾಯ ಭವನ ನಗರದ ಅತಿ ದೊಡ್ಡ ಶೌಚಾಲಯ ಹಾಗೂ ಅನೈತಿಕ ತಾಣವಾಗಿ ಈ ಭಾಗದಲ್ಲಿ ಕಪ್ಪು ಚುಕ್ಕಿಯಾಗಿತ್ತು. ಇದರ ಸ್ವಚ್ಚತೆ, ದುರಸ್ಥಿ ಹಾಗೂ ತೆರವಿನ ಬಗ್ಗೆ ಮಾಧ್ಯಮಗಳು ಅನೇಕ ಸಾರಿ ಪಾಲಿಕೆಯ ಗಮಕ್ಕೆ ತಂದಿದ್ದರೂ ಏನೇನು ಪ್ರಯೋಜನ ಆಗಿರಲಿಲ್ಲ.
ಈ ಪ್ರದೇಶವನ್ನು ಅಭಿವೃದ್ಧಿ ಮಾಡಲು ಪಾಲಿಕೆ ಸದಸ್ಯರು, ಅಧಿಕಾರಿಗಳೂ ಮನಸ್ಸು ಮಾಡಿರಲಿಲ್ಲ. ವಾರ್ಡ್‌ಗಳ ಗಡಿ ರಸ್ತೆ ಇದಾಗಿರುವುದರಿಂದ ಯಾವ ವಾರ್ಡಿನ ಚುನಾಯಿತ ಸದಸ್ಯರು ಈ ಬಗ್ಗೆ ಆಸಕ್ತಿ ವಹಿಸಿರಲಿಲ್ಲ. ಕಳೆದ ಸಾಲಿನಲ್ಲಿ ಈ ಪ್ರದೇಶ ವಾರ್ಡ್‌ 15ರ ವ್ಯಾಪ್ತಿಗೆ ಸೇರಿಕೊಂಡ ಹಿನ್ನೆಲೆಯಲ್ಲಿ ಪಾಲಿಕೆ ಸದಸ್ಯ ಪ್ರದೀಪ್‌ ಚಂದ್ರ ಅವರು ಶಿಥಿಲಗೊಂಡ ಕಟ್ಟಡದ ತೆರವು ಹಾಗೂ ಸ್ಥಳ ಅಭಿವೃದ್ಧಿಗೆ ಪ್ರಯತ್ನಿಸುತ್ತಲೇ ಬಂದಿದ್ದರು. ಇದಕ್ಕೆ ಪರವಿರೋಧ ಎದುರಾಗಿದ್ದರೂ ಸಾರ್ವಜನಿಕರ ಹಿತದೃಷ್ಠಿಯಿಂದ ಒತ್ತಡಕ್ಕೆ ಮಣಿದ ಮಹಾನಗರ ಪಾಲಿಕೆ ಶಿಥಿಲಗೊಂಡ ಕಟ್ಟಡವನ್ನು ತೆರವು ಮಾಡಿದೆ.
ಮೈಸೂರು ಮಹಾನಗರ ಪಾಲಿಕೆಗೆ ಸೇರಿದ ಈ ಪ್ರದೇಶ ಮುಖ್ಯ ರಸ್ತೆಯಲ್ಲಿರುವುದರಿಂದ ಇಲ್ಲೊಂದು ಸುಂದರ ಉದ್ಯಾನವನ ನಿರ್ಮಾಣ ಮಾಡುವುದು ಸೂಕ್ತ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ. ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದ ಪಾಲಿಕೆ ಸದಸ್ಯ ಪ್ರದೀಪ್‌ ಚಂದ್ರ ಪತ್ರದ ಮೂಲಕ ಪಾಲಿಕೆಯ ಗಮನಕ್ಕೆ ತಂದಿದ್ದರು. ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ಇದಕ್ಕೆ ಸಮ್ಮತಿಸಿ ಈ ಸ್ಥಳದಲ್ಲಿ ಉದ್ಯಾನವನ ನಿರ್ಮಿಸಲು ಪ್ರಾಥಮಿಕ ಹಂತದಲ್ಲಿ 25 ಲಕ್ಷ ರೂ.ಅನುದಾನ ಬಿಡುಗಡೆ ಮಾಡಿದೆ.