ಬೆಂಗಳೂರು : ಪಂಚಮಸಾಲಿ ಪೀಠದ ಶ್ರೀಗಳಾದ ಜಯಮೃತ್ಯುಂಜಯ ಸ್ವಾಮೀಜಿಗಳ ಜೊತೆ ಇಡೀ ಸಮುದಾಯ ಇದೆ. ಸ್ವಾಮೀಜಿಗಳು ಏನೇ ನಿರ್ಧಾರ ಮಾಡಿದ್ರು ನಮ್ಮ ಬೆಂಬಲ ಅವರಿಗೆ ಇದೆ ಎಂದು ಮಾಜಿ ಸಚಿವ ಸಿ.ಸಿ.ಪಾಟೀಲ್ ತಿಳಿಸಿದ್ದಾರೆ.
ಪಂಚಮಸಾಲಿ ಪೀಠದ ಶ್ರೀಗಳ ಉಚ್ಚಾಟನೆ ಮಾಡಿರೋ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಜಯಮೃತ್ಯುಂಜಯ ಸ್ವಾಮೀಜಿಗಳ ಜೊತೆ ನಾವು ಇದ್ದೇವೆ. ನಾನು, ಯತ್ನಾಳ್ ಸೇರಿ ಸಮಾಜದ ಪ್ರಮುಖರು ಸ್ವಾಮೀಜಿಗಳನ್ನ ಭೇಟಿ ಆಗ್ತೀವಿ. ಅವರು ಏನು ನಿರ್ಧಾರ ಮಾಡ್ತಾರೋ ಅವರ ಜೊತೆ ಚರ್ಚೆ ಮಾಡ್ತೀವಿ. ಸ್ವಾಮೀಜಿಗಳ ಜೊತೆ ನಾವು ಇರುತ್ತೇವೆ ಎಂದಿದ್ದಾರೆ.
ಜಯಮೃತ್ಯುಂಜಯ ಸ್ವಾಮೀಜಿಗಳು ಪೀಠಾರೋಹಣ ಮಾಡಿದಾಗಿನಿಂದ ಸಮಾಜ ಕಟ್ಟೋ ಕೆಲಸ ಮಾಡಿದ್ದಾರೆ. ಹಗಲು ಇರುಳು ಸಮಾಜಕ್ಕೆ ದುಡಿದಿದ್ದಾರೆ. ಇದರಲ್ಲಿ ಎರಡು ಮಾತು ಇಲ್ಲ. ಹಣದ ಆಸೆಗೆ ಬಲಿ ಆಗಲಿಲ್ಲ. ಸಮಾಜದ ಏಳಿಗೆಗಾಗಿ, ಒಗ್ಗಟ್ಟಿಗಾಗಿ 750ಕಿ.ಮೀ ಪಾದಯಾತ್ರೆ ಮಾಡಿದರು.
8 ರಿಂದ 10 ಲಕ್ಷ ಜನ ಸೇರಿಸಿ ಅರಮನೆ ಮೈದಾನದಲ್ಲಿ ಸಮಾವೇಶ ಮಾಡಿದ್ರು. ಪಂಚಮಸಾಲಿ ಸಮಾಜದ ಶಕ್ತಿ ಪ್ರದರ್ಶನ ಮಾಡಿದ ಶ್ರೇಯಸ್ಸು ಸ್ವಾಮೀಜಿಗಳಿಗೆ ಸಲ್ಲಬೇಕು. ವಿಜಯಾನಂದ ಕಾಶಪ್ಪನವರ್ ಬಗ್ಗೆ ನಾನೇನು ಮಾತಾಡೋಕೆ ಹೋಗಲ್ಲ. ಅದರ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
ಸ್ವಾಮೀಜಿಗಳು ಯಾವುದಕ್ಕೂ ಆಸೆ ಪಟ್ಟವರು ಅಲ್ಲ. ಉಚ್ಚಾಟನೆ ಮಾಡಿರೋದು ನಿರೀಕ್ಷಿತನೇ. ನಮಗೂ ನಿರೀಕ್ಷೆ ಇತ್ತು. ಕಾಶಪ್ಪನವರಿಗೆ ನಾವೆಲ್ಲ ಕೂತು ಮಾತಾಡಿ ಸಮಸ್ಯೆ ಬಗೆಹರಿಸೋಣ ಅಂತ ಹೇಳಿದ್ದೆ. ಆದರೆ ಅವರು ಅದನ್ನ ಕೇಳಲಿಲ್ಲ. ಇಡೀ ಪಂಚಮಸಾಲಿ ಸಮಾಜ ಜಯಮೃತ್ಯುಂಜಯ ಸ್ವಾಮೀಜಿ ಜೊತೆ ಇದೆ. ಶನಿವಾರ ಸಭೆ ಮಾಡಿ ಮುಂದಿನ ನಡೆಯ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಸ್ವಾಮೀಜಿಗಳ ಜೊತೆ ನಾನು ಫೋನ್‌ನಲ್ಲಿ ಮಾತಾಡಿದ್ದೇನೆ. ಸಮಾಜ, ಸಂಘಟನೆ ಹೋರಾಟ ನಿಲ್ಲೋದಿಲ್ಲ ಅಂತ ಹೇಳಿದ್ದಾರೆ. ಅವರಿಗೆ ನಮ್ಮ ನೈತಿಕತೆ ಬೆಂಬಲ ಇದೆ ಎಂದರು. ಹೊಸ ಪೀಠ ರಚನೆ ಆದ್ರೆ ಬೆಂಬಲ ಇದ್ಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಒಬ್ಬನೇ ಹೇಳಬಾರದು. ನಾವೆಲ್ಲ ಕೂತು ಇದರ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ.














