ಹುಣಸೂರು: ಮರಣ ಹೊಂದಿದ್ದ ಸಹೋದರನ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕನ ಹುದ್ದೆಗಿಟ್ಟಿಸಿ, ಕಳೆದ 26 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ನಕಲಿ ಶಿಕ್ಷಕನನ್ನು ಮೈಸೂರು ಡಿಡಿಪಿಐ ಸೇವೆಯಿಂದ ವಜಾಗೊಳಿಸಿ ಆದೇಶಿಸಿದ್ದಾರೆ.
ಹುಣಸೂರು ತಾಲೂಕು ಹಿರಿಕ್ಯಾತನಹಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿದ್ದ ವಜಾಗೊಂಡ ನಕಲಿ ಶಿಕ್ಷಕ ಲೋಕೇಶ್. ಈತನ ನೈಜ ಹೆಸರು ಲಕ್ಷ್ಮಣೇಗೌಡ ಆಗಿದ್ದು, ಸಹೋದರ ಲೋಕೇಶ್ ಮರಣದ ನಂತರ ತಾನೇ ಲೋಕೇಶ್ ಎಂದು ನಕಲಿ ದಾಖಲೆ ಸೃಷ್ಟಿಸಿ ಕೆಲಸ ಗಿಟ್ಟಿಸಿಕೊಂಡಿದ್ದ.
ಮೂಲತಃ ಕೆ.ಆರ್.ನಗರ ತಾಲೂಕಿನ ಡಿ.ಕೆ.ಕೊಪ್ಪಲು ಗ್ರಾಮದ ರಾಮೇಗೌಡರಿಗೆ ಇಬ್ಬರು ಪುತ್ರರಿದ್ದು, ಲೋಕೇಶ್ ಶಿಕ್ಷಕ ತರಬೇತಿ ಪಡೆದುಕೊಂಡಿದ್ದರು. ಇವರು 1992ರಲ್ಲಿ ಮರಣಹೊಂದಿದ್ದರು. ನಿರುದ್ಯೋಗಿಯಾಗಿದ್ದ ಲಕ್ಷ್ಮಣೇಗೌಡ 1998ರಲ್ಲಿ ಅಣ್ಣನ ಹೆಸರಿನ ದಾಖಲಾತಿ ನೀಡಿ, ಶಿಕ್ಷಕ ಹುದ್ದೆಗಿಟ್ಟಿಸಿಕೊಂಡು, ಕೆ.ಆರ್.ನಗರ, ಪಿರಿಯಾಪಟ್ಟಣ, ಹುಣಸೂರು ತಾಲೂಕುಗಳಲ್ಲಿ ಕೆಲಸ ನಿರ್ವಹಿಸಿದ್ದ.
ಈ ನಡುವೆ ಅಣ್ಣ ಲೋಕೇಶ್ ಪತ್ನಿ ಗಲಾಟೆ ಮಾಡಿದ್ದರು. ಪತಿ ಸಾವನ್ನಪ್ಪಿರುವ ಬಗ್ಗೆ ಇಲಾಖೆಗೆ ದಾಖಲೆ ಸಲ್ಲಿಸಿದ್ದರು. ಅಲ್ಲದೆ ಹುಣಸೂರಿನ ಇಂಟಕ್ ರಾಜು ಎಂಬವರು ಶಿಕ್ಷಣ ಇಲಾಖೆ ಹಾಗೂ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಹಿರಿಯ ಅಧಿಕಾರಿಗಳ ಆದೇಶದನ್ವಯ ಕೆ.ಆರ್.ನಗರ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಜಂಟೀಯಾಗಿ ಗ್ರಾಮದಲ್ಲಿ ವಿಚಾರಣೆ ನಡೆಸಿದ ವೇಳೆ ವಿಷಯ ಹೊರಬಂದಿತ್ತು.
ಈ ಬಗ್ಗೆ ಸುದೀರ್ಘ ಕಾಲದ ವಿಚಾರಣೆ ನಡೆದು ಈತ ಮೃತ ಸಹೋದರನ ಹೆಸರಿನಲ್ಲಿದ್ದ ಶಿಕ್ಷಕ ತರಬೇತಿಯ ದಾಖಲಾತಿಗಳನ್ನು ಸಲ್ಲಿಸಿ ಕೆಲಸ ಗಿಟ್ಟಿಸಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಸೇವೆಯಿಂದ ವಜಾಗೊಳಿಸಿದ್ದು, ನಕಲಿ ಹೆಸರಿನಲ್ಲಿ ಇಲಾಖೆಗೆ ವಂಚಿಸಿ, ಪಡೆದಿರುವ ಎಲ್ಲಾ ಆರ್ಥಿಕ ಸೌಲಭ್ಯದ ಮೊತ್ತವನ್ನು ಲೆಕ್ಕಾಚಾರ ಮಾಡಿ ವಸೂಲಿ ಮಾಡಲು ಆದೇಶಿಸಿದ್ದು, ಆರ್ಥಿಕ ಸೌಲಭ್ಯವನ್ನು ಹಿಂತಿರುಗಿಸದಿದ್ದಲ್ಲಿ ನ್ಯಾಯಾಯಲದಲ್ಲಿ ಸಿವಿಲ್ ಪ್ರಕರಣ ದಾಖಲಿಸಿ ಅಗತ್ಯ ಕ್ರಮವಹಿಸಲು ಹುಣಸೂರು ಬಿಇಓ ಎಸ್.ರೇವಣ್ಣರಿಗೆ ಆದೇಶಿಸಲಾಗಿದೆ ಎಂದು ಡಿಡಿಪಿಐ ಎಚ್.ಕೆ.ಪಾಂಡುರವರು ತಿಳಿಸಿದ್ದಾರೆ.
ತಾವು ದೂರು ಸಲ್ಲಿಸಿದ್ದರಿಂದ ನಕಲಿ ಶಿಕ್ಷಕನೊಬ್ಬ ಸೇವೆಯಿಂದ ವಜಾಗೊಳಿಸಿದ ಇಲಾಖೆ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿರುವ ಇಂಟಕ್ ರಾಜು ಲಕ್ಷ್ಮಣೇಗೌಡನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳವಂತೆ ಮನವಿ ಮಾಡಿದ್ದಾರೆ.