ದೊಡ್ಡಬಳ್ಳಾಪುರ: ದನಗಳ ಮೈ ತೊಳೆಯಲು ನೀರಿಗಿಳಿದಿದ್ದ ರೈತನೊಬ್ಬ ನೀರಲ್ಲಿ ಮುಳುಗಿ ಸಾವನಪ್ಪಿರುವ ದುರ್ಘಟನೆ ತಾಲೂಕಿನ ಒಡೇರಹಳ್ಳಿ ಸಮೀಪದ ಜಾಲಿಕಟ್ಟೆಯಲ್ಲಿ ನಡೆದಿದೆ.
ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ರಾಮಪುರ ಗ್ರಾಮದ ಕುಮಾರ್ (44ವರ್ಷ) ಮೃತ ರೈತನಾಗಿದ್ದು, ಒಡೇರಹಳ್ಳಿ ಸಮೀಪದ ಜಾಲಿಕಟ್ಟೆಯಲ್ಲಿ ದನಗಳ ಮೈ ತೊಳೆಯಲು ನೀರಿಗಿಳಿದಿದ್ದ ವೇಳೆ ಕಾಲು ಜಾರಿ ಬಿದ್ದು ಸಾವನಪ್ಪಿದ್ದಾನೆ ಎನ್ನಲಾಗಿದೆ.
ಮಂಗಳವಾರ ಮಧ್ಯಾಹ್ನ 6 ದನಗಳ ಮೈತೊಳೆಯಲು ತೆರಳಿದ್ದ ವೇಳೆ ಘಟನೆ ಸಂಭವಿಸಿದೆ. ದನಗಳು ಮನೆಗೆ ಹಿಂತಿರುಗಿ ಬಂದರು, ಕುಮಾರ್ ಮನೆಗೆ ಬಾರದೆ ಇರುವುದರಿಂದ ಕುಟುಂಬಸ್ಥರು ಆತಂಕಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ದೊಡ್ಡಬೆಳವಂಗಲ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಎಂ.ಆರ್.ಹರೀಶ್ ನೇತೃತ್ವದಲ್ಲಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಯವರು ಸ್ಥಳಕ್ಕೆ ತೆರಳಿ ಹುಡುಕಾಟ ನಡೆಸಿ ಶವವನ್ನು ಹೊರತೆಗಿದ್ದಾರೆ.
ಮೃತನಿಗೆ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದು, ಪತ್ನಿ ಆರು ತಿಂಗಳ ಗರ್ಭಿಣಿ ಎಂದು ತಿಳಿದು ಬಂದಿದೆ. ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.