ಮನೆ ರಾಜ್ಯ ಇಂದಿನಿಂದ ಮೂರು ದಿನ ನೂತನ ಸರ್ಕಾರದ ಮೊದಲ ಅಧಿವೇಶನ

ಇಂದಿನಿಂದ ಮೂರು ದಿನ ನೂತನ ಸರ್ಕಾರದ ಮೊದಲ ಅಧಿವೇಶನ

0

ಬೆಂಗಳೂರು: ಇಂದಿನಿಂದ 24ರವರೆಗೆ ಮೂರು ದಿನ ವಿಧಾನಸಭಾ ಅಧಿವೇಶನ ನಡೆಯಲಿದೆ. ಮೊದಲ ಎರಡು ದಿನ ನೂತನ ಶಾಸಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕೊನೆ ದಿನ ವಿಧಾನಸಭಾ ಸ್ಪೀಕರ್​​​ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

Join Our Whatsapp Group

ಸೋಮವಾರ ಬೆಳಿಗ್ಗೆ 11 ಗಂಟೆಗೆ ಅಧಿವೇಶನ ಆರಂಭವಾಗಲಿದೆ. ನೂತನ ಸದಸ್ಯರಿಗೆ ಹಂಗಾಮಿ ಸ್ಪೀಕರ್​ ಆಗಿ ಆಯ್ಕೆಯಾಗಿರುವ ಆರ್​.ವಿ ದೇಶಪಾಂಡೆಯವರು ಪ್ರಮಾಣ ವಚನ ಬೋಧನೆ ಮಾಡಲಿದ್ದಾರೆ.

ವಿಧಾನಸಭೆಯ ಅವಧಿ ಮೇ 23ಕ್ಕೆ ಅಂತ್ಯವಾಗಿದ್ದು, ಈ ತಿಂಗಳು 23ರ ಅಷ್ಟರೊಳಗೆ ಶಾಸಕರ ಪ್ರಮಾಣವಚನ ಸ್ವೀಕಾರ ಪೂರ್ಣಗೊಳ್ಳಬೇಕು. ಜುಲೈ ತಿಂಗಳಿನಲ್ಲಿ ಬಜೆಟ್ ಮಂಡಿಸಲಾಗುವುದು.‌ ಐದು ಗ್ಯಾರಂಟಿಗಳ ಅನುಷ್ಠಾನ ಸೇರಿದಂತೆ ಸರ್ಕಾರದ ಹೊಸ ಕಾರ್ಯಕ್ರಮಗಳಿಗೆ ಅಗತ್ಯ ಅನುದಾನ ಒದಗಿಸಲಾಗುವುದು.

ಸ್ಪೀಕರ್ ಸ್ಥಾನಕ್ಕೆ ಹಿರಿಯ ನಾಯಕರಾದ ಆರ್​.ವಿ ದೇಶಪಾಂಡೆ, ಹೆಚ್​.ಕೆ ಪಾಟೀಲ್​​ ಹಾಗೂ ಟಿ.ಬಿ ಜಯಚಂದ್ರ ಹೆಸರು ಕೇಳಿ ಬಂದಿದೆ.

ವಿಧಾನಸೌಧ ಸುತ್ತ ನಿಷೇಧಾಜ್ಞೆ ಜಾರಿ

ಮೂರು ದಿನ ವಿಧಾನಸೌಧದಲ್ಲಿ ವಿಶೇಷ ಅಧಿವೇಶನ ನಡೆಯುವ ಹಿನ್ನೆಲೆಯಲ್ಲಿ ಅಧಿವೇಶನದ ಕಾರ್ಯ ಕಲಾಪಗಳಿಗೆ ಅಡಚಣೆಯಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ವಿಧಾನಸೌಧ ಕಟ್ಟಡದ ಸುತ್ತ 2 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಸಿ.ಎಚ್.ಪ್ರತಾಪ್ ರೆಡ್ಡಿ ಆದೇಶಿಸಿದ್ದಾರೆ.

ಸೋಮವಾರ ಬೆಳಗ್ಗೆ 6ರಿಂದ ಬುಧವಾರ ಮಧ್ಯರಾತ್ರಿ 12ರ ವರೆಗೆ ವಿಧಾನಸೌಧದ ಸುತ್ತ 2 ಕಿ.ಮೀ. ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.

ಈ ಆದೇಶದ ಅನ್ವಯ ಈ ನಿಷೇಧ ಪ್ರದೇಶದಲ್ಲಿ ಐದಕ್ಕಿಂತ ಹೆಚ್ಚು ಮಂದಿ ಗುಂಪುಗೂಡುವಂತಿಲ್ಲ. ಮೆರವಣಿಗೆ ಮತ್ತು ಸಭೆ ನಡೆಸುವಂತಿಲ್ಲ. ಶಸ್ತ್ರಗಳು, ದೊಣ್ಣೆಗಳು, ಕತ್ತಿಗಳು, ಈಟಿಗಳು ಮೊದಲಾದ ಮಾರಕಾಸ್ತ್ರ ಒಯ್ಯುವಂತಿಲ್ಲ, ಯಾವುದೋ ಸ್ಫೋಟಕ ವಸ್ತುಗಳನ್ನು ಸಿಡಿಸುವುದು, ಉಪಕರಣ ಸಾಗಾಟ, ಶೇಖರಣೆ ನಿಷೇಧಿಸಲಾಗಿದೆ. ಯಾವುದೇ ವ್ಯಕ್ತಿಗಳ ಪ್ರತಿಕೃತಿ ಪ್ರದರ್ಶನ, ಬಹಿರಂಗ ಘೋಷಣೆ ಕೂಗುವುದನ್ನು ನಿಷೇಧಿಸಲಾಗಿದೆ ಎಂದು ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.