೧) ಬವ ಕರಣದಲ್ಲಿ ಜನಿಸಿದವನೂ ಕಾಮುಕನಾಗಿದ್ದರೂ, ಭಾಗ್ಯವಂತನಾಗಿದ್ದು, ನಾನಾ ಪ್ರಕಾರದ ಸಂಪತ್ತು ಸುಖ ಭೋಗ ಭಾಗ್ಯಗಳನ್ನು ಹೊಂದಿದವನಾಗುತ್ತಾನೆ. ರಾಜಕಾರಣದಲ್ಲಿ ಪ್ರತಿಷ್ಠೆ ಹೊಂದಿದ ಈತನು ಹಿರಿಯ ಧುರೀಣನೂ ಆಗುವನು. ಚತುರ ಭಾಷಣಕಾರನೂ, ಮಾತಿನ ಮಲ್ಲನೂ ಆಗಿರುವ ಈತನು ವಿಶೇಷ ಸುಖಿಯು. ತನ್ನ ಶೀಲ ಸದಾಚಾರಗಳಿಂದ ಜನಪ್ರೀಯ ವ್ಯಕ್ತಿಯಾಗುವನು. ಅವಸರದ ಸ್ವಭಾವವನ್ನು ಹೊಂದಿದ ಈತನ ಕಾರ್ಯಗಳೆಲ್ಲವೂ ಅವಸರದವೇ ಆಗಬೇಕು.
೨) ಬಾಲವ ಕರಣದಲ್ಲಿ ಜನಿಸಿದವನು ಧೈರ್ಯಶಾಲಿಯೂ, ಪರಾಕ್ರಮಿಯೂ, ಬಲವುಳ್ಳವನೂ, ವಿಶೇಷ ಬುದ್ದಿವಂತನೂ ಆಗುವನು. ಸುಂದರ ಸೌಂದರ್ಯವಂತನಾದ ಈತನು ಸ್ವಲ್ಪು ವಿಲಾಸ ಜೀವನ ಪ್ರೇಮಿಯೂ ಆಗುವನು. ಅನೇಕ ಕಲಾ ನೈಪುಣ್ಯತೆಯನ್ನು ಹೊಂದಿದ ಈತನು ಕವಿತಾ ಸಾಹಿತ್ಯ ಪ್ರೇಮಿಯೂ, ಗುರು ದೇವತಾ ಕಾರ್ಯದಲ್ಲಿ ಭಯ ಭಕ್ತಿಯುಳ್ಳವನೂ, ಬಂಧು ಬಳಗವನ್ನು ರಕ್ಷಣೆ ಮಾಡತಕ್ಕವನೂ ಆಗುತ್ತಾನೆ.
೩) ಕೌಲವ ಕರಣದಲ್ಲಿ ಜನಿಸಿದವನು ವಿಶೇಷ ಸಜ್ಜನ ಸ್ನೇಹಿತರನ್ನು ಹೊಂದಿದವನು. ಬುದ್ದಿವಂತನಾದ ಈತನು ಸರ್ವರಿಗೂ ಪ್ರಿಯಕರನು, ಗಂಭೀರ ನಡೆ ನುಡಿಯುಳ್ಳವನೂ, ಮೃದು ಭಾಷಣ ಕಲೆಯನ್ನು ಬಲ್ಲವನೂ, ಪ್ರತಿಷ್ಠೆಯನ್ನು ಕಾಯ್ದುಕೊಂಡು ನಡೆಯುವವನೂ, ಧೈರ್ಯವಂತನೂ ಆಗಿದ್ದರೂ ಸ್ತ್ರೀ-ಚಪಲವುಳ್ಳವನು.
೪) ತೈತುಲ ಕರಣದಲ್ಲಿ ಜನಿಸಿದವನು ತನ್ನ ಕಾರ್ಯದಲ್ಲಿ ದಕ್ಷತೆಯುಳ್ಳವನೂ, ಸುಂದರ, ಕೋಮಲ ದೇಹದಿಂದ ಶೋಭಿಸತಕ್ಕವನೂ, ವಿಲಾಸದಲ್ಲಿ ಆಗಾಗ್ಗೆ ಮಗ್ನನಾಗಿ ರುವವನೂ ಆಗಿರುತ್ತಾನೆ. ಆದರೆ ಶೀಲವಂತನಾದ ಈತನು ಸಮಾಧಾನ ಮನಸ್ಸಿನವನೂ, ಸತ್ಯ ನಡೆ ನುಡಿಯುಳ್ಳವನೂ, ಶ್ರೇಷ್ಠ ಮಾತಿನಲ್ಲಿ ಚತುರನೂ, ಜ್ಞಾನಿಯೂ, ಸಹನ ಶಕ್ತಿಯು ಳ್ಳವನೂ ಆಗುವನು. ಆದರೆ ಚಂಚಲ ಮನಸ್ಸಿನವನಾದ ಈತನು ಹಾಸ್ಯ ಪ್ರೀಯನೂ ಹೌದು.
೫) ಗರಜ ಕರಣದಲ್ಲಿ ಜನಿಸಿದವನು ಪ್ರತಿಷ್ಠಿತ ವ್ಯಕ್ತಿಯಾಗಿದ್ದು, ಪರೋಪಕಾರ ಮಾಡುವ ಸ್ವಭಾವದವನೂ, ವಿಚಾರ ಶೀಲನೂ, ಧೈರ್ಯವಂತನೂ, ಉದಾರ ಮನಸ್ಸಿನವನೂ, ವಿರೋಧಿಗಳನ್ನು ತನ್ನಂತೆ ಮಾಡಿಕೊಳ್ಳುವ ಸಜ್ಜನ ಸಂಪನ್ನ ವ್ಯಕ್ತಿ ಯಾಗಿರುತ್ತಾನೆ.
೬) ವಣಿಜ ಕರಣದಲ್ಲಿ ಹುಟ್ಟಿದವನು ಸರ್ವ ವಿದ್ಯೆ ಕಲೆಗಳಲ್ಲಿ ನಿಷ್ಣಾತನೂ, ವ್ಯಾಪಾರ ವ್ಯವಹಾರಗಳಿಂದ ಸಾಕಷ್ಟು ದುಡ್ಡು ಗಳಿಸುವವನೂ, ಗುರುದೇವತಾ ಭಕ್ತಿಯುಳ್ಳವನೂ ಆಗುತ್ತಾನೆ. ಮಾತಿನಲ್ಲಿ ಚತುರನೂ, ಹಾಸ್ಯ ಪ್ರವೃತ್ತಿಯವನೂ ಆಗಿರುವದರಿಂದ ಎಲ್ಲ ವರ್ಗಗಳ ಜನರಿಂದ ಮನ್ನಿಸಲ್ಪಡುವನು.
೭) ಭದ್ರ ಕರಣದಲ್ಲಿ ಹುಟ್ಟಿದವನು ಸುಂದರ ಸದೃಢ ದೇಹ ಹೊಂದಿದವ ನಾಗುವನು. ಶಕ್ತಿ ಯುಕ್ತಿಯಲ್ಲಿ ಬಲಿಷ್ಠನೂ, ವಿರೋಧಿಗಳನ್ನು ತನ್ನಂತೆ ಮಾಡಿಕೊಳ್ಳುವ ಜಾಣ್ಣೆಯುಳ್ಳವನೂ, ಜನಪ್ರಿಯನೂ, ಜನ ಸಮೂಹದಿಂದ ಕೂಡಿಕೊಂಡು ಕಾರ್ಯ ಮಾಡುವವನೂ, ಚಪಲಚಿತ್ತನೂ ಆಗಿರುತ್ತಾನೆ. ಆದರೂ ಅಸಹನೆಯ ಸ್ವಭಾದವನೂ, ದುರ್ಬುದ್ದಿ ಕಲಹ ಗುಣ ಹೊಂದಿದವನೂ ಆಗುತ್ತಾನೆ. ಭದ್ರಾ ಕರಣದಲ್ಲಿ ಜನಿಸಿದ್ದರೆ ದೋಷ ತಗಲುವದರಿಂದ ದೋಷ ನಿವಾರಣೆಗಾಗಿ ಅನ್ನ ದಾನ- ವಸ್ತ್ರದಾನ ಸಹಿತವಾಗಿ ಆಕಳು ದಾನ ಮಾಡಿ ಶಾಂತಿ ಮಾಡುವದು ಒಳ್ಳೇದು.
೮) ಶಕುನಿ ಕರಣದಲ್ಲಿ ಜನಿಸಿದವನು ಒಳ್ಳೇ ರೂಪವಂತನೂ, ವಿದ್ಯಾ ಬುದ್ದಿಗಳಲ್ಲಿ ಶ್ರೇಷ್ಠನೂ, ಚತುರ ಗುಣದವನೂ, ಯಾವಾಗಲೂ ಉತ್ತಮ ಗುಣ ಸ್ವಭಾವದ ಸ್ನೇಹಿತರನ್ನು ಹೊಂದಿ ಭೂಮಿ-ಧನ-ಸೇವಕರುಳ್ಳವನೂ ಆಗಿರುತ್ತಾನೆ. ಸಮಾಧಾನ ಮನಸ್ಸನ್ನು ಹೊಂದಿದೆ ಈತನು ಚತುರ ಬುದ್ದಿಯವನೂ ಆಗಿರುತ್ತಾನೆ. ಸೌಭಾಗ್ಯವಂತನಾದ ಈತನು ವೈದ್ಯಶಾಸ್ತ್ರ- ಜ್ಯೋತಿಷ್ಯಶಾಸ್ತ್ರ, ಯಂತ್ರ-ಮಂತ್ರ ಶಾಸ್ತ್ರ ಬಲ್ಲವನೂ ಆಗುವನು. ಆದರೆ ಅನ್ಯರಿಂದ ಕೆಲಕಾಲ ಕಷ್ಟವನ್ನು ಅನುಭವಿಸುವನು. ತನ್ನವರೇ ಈತನನ್ನು ಆಗಾಗ್ಗೆ ವಿರೋಧಿಸುವರು.
೯) ಚತುಷ್ಪಾದ ಕರಣದಲ್ಲಿ ಜನಿಸಿದಾತನು ಆಚಾರ ವಿಚಾರಗಳನ್ನು ತೊರೆದವನೂ, ಪ್ರಪಂಚವನ್ನು ಉದಾಸೀನ ದೃಷ್ಟಿಯಿಂದ ನೋಡುವವನೂ, ವಿರಕ್ತ ಭಾವನೆಯುಳ್ಳವನೂ ಆಗುವನು. ಇದರಿಂದ, ಬಂಧು ವರ್ಗದವರ ಅವಕೃಪೆಗೆ ಪಾತ್ರನಾಗಬಹುದಾಗಿದೆ. ಆದರೆ, ದೀರ್ಘಾಯುಷಿಯೂ, ಕ್ಷೀಣ ಆರೋಗ್ಯ ಭಾಗ್ಯಗಳನ್ನು ಹೊಂದಿದವನೂ, ತನ್ನ ಯುಕ್ತಿ-ಶಕ್ತಿಗಳಿಂದ ಸಾಧಾರಣ ಸೌಖ್ಯ ಅನುಭವಿಸುವವನೂ ಆಗುತ್ತಾನೆ.
೧೦) ನಾಗವಾನ್ ಕರಣದಲ್ಲಿ ಜನಿಸಿದವನು ಕಪಟ ಗುಣದವನೂ, ಹೆಚ್ಚಿನ ದುಷ್ಟ ಸ್ವಭಾವದವನೂ, ಜಗಳಗಂಟನೂ, ವಂಚಕ ಸ್ವಭಾವದವನೂ, ತನ್ನ ಸಿಟ್ಟಿನ ಸ್ವಭಾವದಿಂದಲೇ ತನ್ನ ಕೆಡುಕಿಗೆ ಕಾರಣನೂ ಆಗುವನು. ತನ್ನ ವಂಶಕ್ಕೆ ಅಪಕೀರ್ತಿಯನ್ನು ತಂದುಕೊಳ್ಳುವ ಪರಸ್ತ್ರೀ ಲೋಲನೂ ಆಗುವನು. ಆದರೆ ಈತನು ಸ್ವತಂತ್ರ ಬುದ್ದಿಯನು.
೧೧) ಕಿಂಸ್ತುಘ್ನ ಕರಣದಲ್ಲಿ ಜನಿಸಿದವನು ಧರ್ಮ ಅಧರ್ಮ ಇವೆರಡನ್ನೂ ಮೈಗೂಡಿಸಿಕೊಂಡು ನಡೆಯತಕ್ಕವನು. ನಿರಾಶಾಭಾವನೆಯುಳ್ಳ ಈತನು ಕೈಲಾಗದ ಹೇಡಿ ಸ್ನೇಹಿತರನ್ನು ಹೊಂದಿರುತ್ತಾನೆ. ಯಾರ ವಿರೋಧವನ್ನೂ ಕಟ್ಟಿಕೊಳ್ಳದ ಈತನು ಭಾಗ್ಯವಂತನೂ, ದಾನ ಮಾಡುವ ಶ್ರೇಷ್ಠ ಗುಣದವನೂ, ಕಾರ್ಯದಲ್ಲಿ ಕುಶಲತೆಯನ್ನು ಪ್ರದರ್ಶಿಸುವವನೂ ಆಗುತ್ತಾನೆ.