ಜ್ಯೋತಿಷ್ಯ ಶಾಸ್ತ್ರದಲ್ಲಿ ಸ್ವಪ್ನ ಫಲ ಶಾಸ್ತ್ರವೂ ಒಂದು ಮಹತ್ವದ ಭಾಗವಾಗಿದೆ. ಸ್ವಪ್ನ ಫಲವು ನಮಗೆ ಮುಂದೆ ಸಂಭವಿಸಬಹುದಾದ ಸುಖ-ದುಃಖಗಳನ್ನು ಖಂಡಿತ. ತಿಳಿಸುತ್ತದೆ ಯೆಂಬುದು ಅನುಭವಿಕರ ಸಿದ್ಧಾಂತವೂ ಆಗಿದೆ ಅದು ಹೇಗೆಂದರೆ, ರಾಮಾಯಣ ಕಾಲದಲ್ಲಿ ಭರತನಿಗೂ, ಕೌಶಲ್ಕಳಿಗೂ, ದಶರಥನಿಗೂ, ಶ್ರೀರಾಮಚಂದ್ರನ ಪತ್ನಿಯಾದ ಸೀತೆಗೂ ಸ್ವಪ್ನಫಲ ವಿಚಾರದಲ್ಲಿ ಬಹಳೇ ನಂಬಿಕೆ-ವಿಶ್ವಾಸವಿತ್ತೆಂಬುದು ನಮಗೆ ತಿಳಿದು ಬಂದ ವಿಷಯವಾಗಿದೆ.
ಇದಲ್ಲದೆ, ಪೂರ್ವ ಕಾಲದಿಂದಲೂ ಪರಮಾತ್ಮನು ತನ್ನ ಅನೇಕ ಭಕ್ತಜನ ಉದ್ದಾರಕ್ಕಾಗಿ, ಅವರ ಮನವರಿಕೆಗಳನ್ನು ಪೂರ್ತಿಗೊಳಿಸಲು ಆಗಾಗ್ಗೆ ಸ್ವಪ್ನದಲ್ಲಿ ಕಾಣಿಸಿ ಕೊಂಡು ಅನೇಕ ಮಹತ್ವದ ವಿಷಯಗಳನ್ನು ಹೇಳಿರುವದನ್ನು ನಾವು ಅನೇಕ ಕಥೆ-ಪುರಾಣ ಪುಣ್ಯಕಥೆಗಳಲ್ಲಿ ಕೇಳಿದ ವಿಷಯವನ್ನು ನಾವು ಮರೆಯುವಂತಿಲ್ಲ. ಸ್ವಪ್ನದಲ್ಲಿ ನಮ್ಮ ಆರಾಧ ದೇವರು, ಗುರುಗಳು, ಜಂಗಮಮೂರ್ತಿಗಳು, ಮುತ್ತೈದೆಯರು, ಬಿಳೇ ಗಿಡಗಳನ್ನು, ಹತ್ತಿ ಹೂ ಹಣ್ಣುಗಳನ್ನು ಕೊಯ್ಯುವದು, ಬಿಳೇ ಎತ್ತು, ಆಕಳು, ಕುದುರೆ, ಆನೆ, ಮಂಗಳ ದ್ರವ್ಯ, ಹಾಲು, ಬೆಳೇ ಅಲಂಕಾರ, ರಕ್ತ ಹರಿಯುವದು, ಸತ್ತಂತೆ ಆಗುವದು, ನದಿಗಳು ಪುಣ್ಯಕ್ಷೇತ್ರ- ತೀರ್ಥಗಳು, ಬಿಳೇ ಹಾಸಿಗೆ, ದೀಪಗಳ ಗುಂಪು, ರುದ್ರಾಕ್ಷಿ, ಬಿಲ್ವಪತ್ರಿ, ವಿಭೂತಿ ತುಳಸೀಗಿಡ ಇವುಗಳನ್ನು ಸ್ವಪ್ನದಲ್ಲಿ ಕಂಡರೆ-ಅದರಲ್ಲೂ ಬೆಳಗಿನ ಕಾಲದಲ್ಲಿ ಕಂಡ ಸ್ವಪ್ನಗಳಾದರೆ ಬಂದ ಕಷ್ಟಗಳು, ಬರುವ ಅನಿಷ್ಟಗಳು ದೂರವಾಗಿ ಒಳ್ಳೇ ಫಲಗಳುಂಟಾ ಗುತ್ತವೆಂದು ಸ್ವಪ್ನಫಲ ಶಾಸ್ತ್ರವು ಸ್ಪಷ್ಟಪಡಿಸುತ್ತದೆ.
ಕನಸಿನಲ್ಲಿ ಬೆಂಕಿಯ ಜ್ವಾಲೆಯನ್ನು ಕಂಡರೆ ಭೋಗಸಂಪತ್ತು ಲಭಿಸುತ್ತದೆ. ಬೆಳಗಿನ ಸಮಯದ ಸ್ವಪ್ನದಲ್ಲಿ ದೇವತೆಗಳನ್ನು ಕಂಡರೆ ತನ್ನ ತನ್ನ ಮನೆತನದ ಕೀರ್ತಿಯು ಹೆಚ್ಚುವದು. ವಾಹನ ರಥವನ್ನು ಕಂಡರೆ ಕಂಟಕ ಪರಿಹಾರವು ಅನ್ನವನ್ನು ಕಂಡರೆ ಕೈಕೊಂಡ ಕಾರ್ಯವು ಖಂಡಿತ ನೆರವೇರುವದು. ಸತ್ತವರು ಬದುಕಿ ಬಂದಂತೆಯಾದರೆ ಮರಣಭಯವು, ಗುರುಗಳು, ಪೂಜ್ಯರು, ಹಿರಿಯರು, ತನ್ನ ತಂದೆ- ತಾಯಿಗಳಾದರೆ ಅತ್ಯಂತ ಶುಭವು, ಬೆಕ್ಕು, ನಾಯಿ, ಮಂಗ, ಹಂದಿ, ನರಿ, ಕಾಗೆ, ಕತ್ತೆ, ಗೂಗೆ, ಕೋಣ, ಸೇವಕ, ಅಂತ್ಯಜ, ಹಾವು ಇತ್ಯಾದಿಗಳನ್ನು ಕಂಡರೆ ಅಪಮೃತ್ಯು ಭಯವು. ಸ್ವಪ್ನದಲ್ಲಿ ಮಾರಕಾಸ್ತ್ರಗಳನ್ನು ಹಿಡಿದವರನ್ನು ಕಂಡರೆ ಅಶುಭವು. ಸ್ವಪ್ನದಲ್ಲಿ ಪೂರ್ವ ದಿಕ್ಕಿನತ್ತ ಗಮನ ಮಾಡಿದರೆ ಕ್ಷೇಮ, ದಕ್ಷಿಣದತ್ತ ಗಮನಿಸಿದರೆ ಹಾನಿಯು. ಭೋಜನ ಮಾಡಿದಂತೆಯಾದರೆ ರೋಗಭಯವು ಹಣ್ಣು-ಹಂಪಲಗಳನ್ನು ಕಂಡರೆ ಕಾರ್ಯಸಿದ್ದಿಯು, ಬಾಳೆಹಣ್ಣು, ಮಾವು ತೆಂಗು, ಸವತಿಕಾಯಿ, ಲಿಂಬೆಹಣ್ಣುಗಳನ್ನು ಕಂಡರೆ ಸಂತಾನಪ್ರಾಪ್ತಿಯಾಗುವದು. ಇಲ್ಲವೆ ಕೈಗೊಂಡಿದ್ದ ಕಾರ್ಯವು ನೆರವೇರುವದು. ಕೆಂಪು ಇಲ್ಲವೆ ಕಪ್ಪು ವರ್ಣದ ವಸ್ತುಗಳನ್ನು ಕಂಡರೆ ಕೇಡು, ಅಮೇಧ್ಯ (ಮಲ) ಕಂಡರೆ ಧನಪ್ರಾಪ್ತಿ, ಮಳೆ ಬಂದಂತೆ ಆದರೆ ಪ್ರಯಾಣ.
ಅಂತರಿಕ್ಷೆಯಲ್ಲಿ ಪ್ರಯಾಣ ಮಾಡುವಂತೆ ತಿರುಗಾಡಿದರೆ ಸ್ಥಾನ ಪಲ್ಲಟ. ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಿದರೆ ರೋಗ ಭಯವುಂಟಾಗುವದು. ಕನಸಿನಲ್ಲಿ ಸೀತ-ನೆಗಡಿಯಾದರೆ ಮನೆಗೆ ಇನ್ನು ಬಂಧುಗಳು ಆಗಮಿಸುವರು. ಸಂಗೀತ ಕೇಳಿದರೆ ಸಾಲಮಾಡುವಿಕೆ, ಆಟಗಳನ್ನಾಡಿದಂತೆಯಾದರೆ ಕೈಕೊಂಡ ಕಾರ್ಯಗಳು ಸಾವಕಾಶವಾಗಿ ನೆರವೇರುವವು ಕಲಹ ನಡೆದಂತೆ ಯಾದರೆ ಹಾನಿಯು, ಬೆಳೆಯನ್ನು ಕಂಡರೆ ಶುಭವು. ಧಾನ್ಯ ಕಂಡರೆ ಭಯದ ಸೂಚನೆಯು ಕನ್ನಡಿ, ಬಂಗಾರ, ಧನ ಸಂಪತ್ತು ಕಂಡರೆ ಲಾಭವು ತಾನು ಸುಟ್ಟುಕೊಂಡಂತೆಯಾದರೆ ಆಯುಷ್ಯ ವೃದ್ಧಿಯು, ಗುಡ್ಡ-ಬೆಟ್ಟಗಳನ್ನು ಹತ್ತಿದಂತಾದರೆ ಕಳ್ಳರ ಭಯವು ನೀರಿನಲ್ಲಿ ಮುಳುಗಿದಂತಾದರೆ ದೇಹಕ್ಕೆ ಅಪಘಾತವು, ನೀರಿನಲ್ಲಿ ಮುಳುಗಿ ಮತ್ತೆ ಎದ್ದಂತಾಗಿ ಹೊರಬಂದರೆ ರೋಗದಿಂದ ಮುಕ್ತವಾಗುವಿಕೆ. ವಿದ್ಯೆ ಕಲಿತಂತೆ ಸ್ವಪ್ನವಾದರೆ ಆಶ್ಚರ್ಯದ ಸುದ್ದಿ ಕೇಳಿದಂತಾಗುವದು. ತಾನು ನಿದ್ರೆ ಮಾಡುತ್ತಿರುವಂತೆ ಕಂಡರೆ ಅಲ್ಪಲಾಭವು. ತಾನು ಉಪವಾಸವಿದ್ದಂತೆ ಆದರೆ ಪುಣ್ಯ ಕ್ಷೇತ್ರದರ್ಶನ, ಪವಿತ್ರ ತೀರ್ಥಸ್ನಾನ ಕೈಕೊಳ್ಳುವಿಕೆ, ದೇವರ ಪೂಜೆ ಮಾಡಿದಂತೆ ಸ್ವಪ್ನ ಕಂಡಂತಾದರೆ ಮಾಡಿದ್ದ ಸಾಲವು ಪರಿಹಾರವಾಗುವಿಕೆ, ವಿಧವಾಸಸ್ತ್ರೀ, ಸನ್ಯಾಸಿ, ಭಿಕ್ಷುಕ, ಬೆತ್ತಲೆ ಇದ್ದವರನ್ನು ಕಂಡರೆ ದುಖಕರವು, ಮದ್ಯ-ಹೆಂಡ-ಸಾರಾಯಿಗಳನ್ನು ಕಂಡರೆ ಶುಭ ಸೂಚನೆ. ಕಪ್ಪು ಬಣ್ಣದ ವಾಹನವನ್ನು ಹತ್ತಿಕೊಂಡು, ತಲೆ ಕೂದಲುಗಳನ್ನು ಹರವಿಕೊಂಡು, ಎಣ್ಣೆಯನ್ನು ಬಳಿದುಕೊಂಡು ಕಪ್ಪು ಬಟ್ಟೆಗಳನ್ನು ಧರಿಸಿಕೊಂಡು, ಕೆಂಪು ಪುಷ್ಪಗಳನ್ನು ಧರಿಸಿಕೊಂಡು ದಕ್ಷಿಣ ದಿಕ್ಕಿನತ್ತ ಪ್ರಯಾಣ ಮಾಡುತ್ತಿರುವವರನ್ನು ಕನಸಿನಲ್ಲಿ ಕಂಡಂತಾದರೆ ಅಥವಾ ತಾನೇ ಈ ಪ್ರಕಾರ ಪ್ರಯಾಣ ಮಾಡುತ್ತಿದ್ದರೆ ಬೇಗನೆ ಮರಣ ಸದೃಶ ಅಪಘಾತವು. ಹಲ್ಲು ಬಿದ್ದಂತೆಯಾದರೆ ವ್ಯಸನವು, ಸ್ವಪ್ನದಲ್ಲಿ ನಕ್ಷತ್ರಗಳು ಉದುರಿ ಬೀಳೋಣ, ಬೆಂಕಿಯಲ್ಲಿ ಜಾರಿ ಬೀಳೋಣ, ತಲೆ ಕತ್ತರಿಸಿದಂತಾಗೋಣ, ಕಣಗಿಲು ಹೂಗಳನ್ನು ಧರಿಸೋಣ ಇವೆಲ್ಲವುಗಳೂ ಮರಣ ಮುನ್ಸೂಚನೆಗಳಾಗಿವೆ ಕೆಸರು ಮಣ್ಣು, ತೊಯ್ದ ಬೂದಿಗಳಲ್ಲಿ ಬಿದ್ದು ಹೊರಳಾಡಿದಂತೆಯಾದರೆ ಮನೋವ್ಯಥೆಯು, ಕರೆ ನಾಯಿ, ಮುಂಗಲಿ, ಚೇಳು, ಕಡಿ ಜೀರಿಗೆ ಹುಳು, ಹೆಚ್ಚೇನುಗಳನ್ನು ಕಂಡರೆ ಕೇಡು, ದ್ರವ್ಯ, ಆಯುಧ ಕಂಡರೆ ಧನಹಾನಿ, ಪದಾರ್ಥಗಳನ್ನು ಕದ್ದಂತಾದರೆ ದರಿದ್ರವು, ಮದುವೆ ಮುಂತಾದ ಮಂಗಳ ಕಾರ್ಯಗಳಲ್ಲಿ ಅತ್ತಂತೆಯಾಗಲು, ಕೂದಲು ಉದುರಿದಂತೆಯಾದರೆ ಬಂಧು ಬಾಂಧವರಲ್ಲಿ ಕೇಡುಂಟಾಗುವದು. ಕ್ಷೌರಮಾಡಿಸಿ ಕೊಂಡಂತಾದರೆ, ಬೆಲ್ಲ ತಿನ್ನುವದು, ಗ್ರಹಣ ಕಾಣುವದು. ಚಕ್ಕಡಿ, ತೇರು ಶವವಾಹನ ಕಾಣುವದು ಇವುಗಳಿಂದ ಮರಣವಾರ್ತೆ ಕೇಳುವಿಕೆ, ಇತ್ಯಾದಿ ಅಶುಭ ಫಲಗಳು ಸಂಭವಿಸುವವು.
ವಿಶೇಷ ವಿಚಾರ : ಸ್ವಪ್ನಗಳು ರೋಗ ವಿಕಾರದಿಂದಲೂ, ವಾತ, ಪಿತ್ತ, ಕಫಾದಿ ಧಾತು
ವಿಕಾರದಿಂದಲೂ ಹಗಲಿನಲ್ಲಿ ಮಲಗುವ ಸಮಯಕ್ಕೆ ಮುಂಚೆ ಮಾಡಿದ ಆಲೋಚನೆ ಗಳಿಂದಲೂ ಸ್ವಪ್ನಗಳು ಬೀಳುತ್ತವೆ. ಅಜೀರ್ಣವಾಗಿರುವ ಸಮಯದಲ್ಲಿಯೂ ದುಃಸ್ವಪ್ನಗಳು ಬೀಳುವದು ಖಂಡಿತ. ಇಂಥ ಸ್ವಪ್ನಗಳಿಗೆ ಫಲವಿಲ್ಲವೆಂದೇ ತಿಳಿಯಬೇಕು. ರಾತ್ರಿ ೯ ಗಂಟೆಯಿಂದ ೧೨ ಗಂಟೆಯೊಳಗೆ ಬಿದ್ದ ಸ್ವಪ್ನಕ್ಕೆ ಒಂದು ತಿಂಗಳೊಳಗಾಗಿ ಫಲವು ಕಂಡು ಬರುತ್ತದೆ. ರಾತ್ರಿ ೧೨ ಗಂಟೆಯಿಂದ ೩ ಗಂಟೆಯೊಳಗಾಗಿ ಬಿದ್ದ ಸ್ವಪ್ನಕ್ಕೆ ಒಂದು ವಾರದೊಳ ಗಾಗಿ ಫಲವು ಕಂಡು ಬರುವದು. ಬೆಳಗಿನ ೩ ಗಂಟೆಯಿಂದ ೬ ಗಂಟೆಯ ಒಳಗಾಗಿ ಬಿದ್ದ ಸ್ವಪ್ನಕ್ಕೆ ೩ ದಿವಸದೊಳಗೆ ಫಲವು ತೋರುವದು. ಸೂರ್ಯೋದಯದ ವೇಳೆಯಲ್ಲಿ ಬಿದ್ದ ಕನಸುಗಳ ಫಲವು ಅದೇ ದಿನದಲ್ಲಿ ಫಲವು ಕಂಡು ಬರುವದು. ಅಂತಲೇ, ಸೂರ್ಯೋದಯಕ್ಕೆ ಮುಂಚಿತವಾಗಿ ಹಾಸಿಗೆಯಿಂದ ಎದ್ದು ಪರಮಾತ್ಮನನ್ನು ಪೂಜಿಸಬೇಕೆಂಬುದನ್ನು ಹಿರಿಯರು ಹೇಳಿದ್ದು ಸುಳ್ಳಲ್ಲ. ಕೆಟ್ಟ ಕನಸುಗಳು ಸೂರ್ಯೋದಯ ಸಮಯದಲ್ಲಿ ಬೀಳುತ್ತವೆ ಯೆಂಬುವನ್ನೂ ಅವು ನಿಜವಾಗುತ್ತವೆಂಬುದನ್ನೂ ಮರೆಯಬಾರದು, ಸೂರ್ಯೋದಯರ ನಂತರ ಏಳುವವರು ನಿತ್ಯ ದರಿದ್ರರೇ ಹೌದು !
ಆಕಸ್ಮಾತ್ತಾಗಿ ಕೆಟ್ಟ ಕನಸುಗಳು ಬಿದ್ದ ದಿನವೇ ರಾತ್ರಿ ಆ ಕೂಡಲೇ ಬಲ ಮಗ್ಗುಲವನ್ನು ಮಾಡಿಕೊಂಡು ಹಾಸಿಗೆಯಿಂದ ಎದ್ದು ದೇವರನ್ನು ಧ್ಯಾನಿಸುತ್ತ ಮುಖ ಕೈಕಾಲುಗಳನ್ನು ತೊಳೆದುಕೊಂಡು, ದೇವರ ಮುಂದಿದ್ದ ದೀಪದರ್ಶನ ಮಾಡಿಕೊಂಡು, ಯಾರಿಗೂ ಈ ದುಸ್ವಪ್ನದ ವಿಷಯವನ್ನು ಹೇಳದೆ. ಆ ರಾತ್ರಿ ಆ ಸ್ವಪ್ನದ ವಿಷಯವನ್ನೇ ಮರೆತು, ನಿದ್ದೆ ಮಾಡಬೇಕು. ಒಳ್ಳೇ ಸ್ವಪ್ನವಾದರೆ ಬೆಳಿಗ್ಗೆ ಎದ್ದು ಸ್ನಾನ ಶಿವಪೂಜಾದಿಗಳನ್ನು ತೀರಿಸಿಕೊಂಡು ಗುರುಹಿರಿಯರಿಗೆ ನಮಸ್ಕರಿಸಿ ತಮ್ಮ ಕಾಯಕಕ್ಕೆ ತೊಡಗಬೇಕು. ಸ್ವಪ್ನ ಫಲಗಳು ಸದಾಚಾರ ಅನುಭವಕ್ಕೆ ಬರುತ್ತವೆ.ಕನಸು ಮನಸ್ಸಿನಲ್ಲಿ ಯಾವಾಗಲೂ ಕೆಟ್ಟ ವಿಚಾರಗಳನ್ನು ಸದಾ ಚಿಂತಿಸುತ್ತಿರುವವರಿಗೆ ಸ್ವಪ್ನ ಫಲಗಳು ಕಾಣಲಾರವು. ಅಲ್ಲದೆ ಸದಾ ರೋಗರುಜಿನುಗಳಿಂದ ಬಳಲುವವರಿಗೆ ಕೆಟ್ಟ ಸ್ವಪ್ನಗಳೇ ಬೀಳುತ್ತವೆ. ಸದಾ ಮಲಬದ್ಧತೆಯಾಗುವವರಿಗೆ ದುಃಸ್ವಪ್ನಗಳೇ ಬೀಳುವವು ಆದ್ದರಿಂದ ಮನುಷ್ಯನು ಆರೋಗ್ಯದಿಂದ ಇರಬೇಕು. ದೇಹವು ಆರೋಗ್ಯದಿಂದ ಇದ್ದರೆ ಮನಸ್ಸು ಆರೋಗ್ಯದಿಂದ ಇರುತ್ತದೆ. ಆರೋಗ್ಯವಂತ ಮನುಷ್ಯನು ಸರ್ವಸುಖ ಭೋಗಭಾಗ್ಯಗಳನ್ನು ಪಡೆದು ಸುಖವಾಗಿರುವನು.














