ಮನೆ ಕಾನೂನು ತಾ.ಪಂ, ಜಿ.ಪಂ ಕ್ಷೇತ್ರಗಳಿಗೆ ಮೀಸಲಾತಿ ನಿಗದಿಗೆ ಮತ್ತೆ ಕಾಲಾವಕಾಶ ಕೋರಿದ ಸರ್ಕಾರ

ತಾ.ಪಂ, ಜಿ.ಪಂ ಕ್ಷೇತ್ರಗಳಿಗೆ ಮೀಸಲಾತಿ ನಿಗದಿಗೆ ಮತ್ತೆ ಕಾಲಾವಕಾಶ ಕೋರಿದ ಸರ್ಕಾರ

0

ಬೆಂಗಳೂರು: ರಾಜ್ಯದ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್​ ಕ್ಷೇತ್ರಗಳಿಗೆ ಮೀಸಲಾತಿ ನಿಗದಿಪಡಿಸಲು ರಾಜ್ಯ ಸರ್ಕಾರ ಮತ್ತೊಮ್ಮೆ ಕಾಲಾವಕಾಶ ಕೇಳಿದೆ.

Join Our Whatsapp Group

ನ್ಯಾಯಾಲಯಕ್ಕೆ ನೀಡಿದ ಭರವಸೆಯಂತೆ ನಿಗದಿತ ಅವಧಿಯಲ್ಲಿ ಜಿ.ಪಂ, ತಾ.ಪಂ ಕ್ಷೇತ್ರ ಪುನರ್‌ವಿಂಗಡಣೆ ಹಾಗೂ ಮೀಸಲಾತಿ ಪ್ರಕಟಿಸಲು ವಿಫಲವಾಗಿರುವ ಸರ್ಕಾರದ ವಿರುದ್ಧ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯ ಜೊತೆಗೆ, ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟಿಸಲು ಏಕಸದಸ್ಯ ನ್ಯಾಯಪೀಠ ನೀಡಿದ ಆದೇಶ ಪಾಲಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು 2023ರಲ್ಲಿ ಸಲ್ಲಿಸಲಾದ ಎರಡು ಪ್ರತ್ಯೇಕ ನ್ಯಾಯಾಂಗ ನಿಂದನೆ ಅರ್ಜಿಗಳ ವಿಚಾರಣೆ ಗುರುವಾರ ನಡೆಯಿತು.

ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಕಾಮೇಶ್ವರ್ ರಾವ್ ಹಾಗೂ ನ್ಯಾಯಮೂರ್ತಿ ಕೆ. ರಾಜೇಶ್ ರೈ ಅವರಿದ್ದ ವಿಭಾಗೀಯ ಪೀಠಕ್ಕೆ ಸರ್ಕಾರ ಮನವಿ ಮಾಡಿದೆ. ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಹಾಜರಾಗಿ, ಎಲ್ಲಾ 31 ಜಿಲ್ಲೆಗಳಲ್ಲಿ ಜಿ.ಪಂ ಹಾಗೂ ತಾ.ಪಂ ಕ್ಷೇತ್ರಗಳ ಪುನರ್‌ವಿಂಗಡಣೆ ಕಾರ್ಯ ಮುಗಿದಿದೆ. ಈಗ ಮೀಸಲಾತಿ ನಿಗದಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಅದಕ್ಕಾಗಿ ಮೂರು ವಾರ ಕಾಲಾವಕಾಶ ಬೇಕು ಎಂದು ಕೋರಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ವಿಚಾರಣೆಯನ್ನು ಸೆಪ್ಟಂಬರ್ 30ಕ್ಕೆ ಮುಂದೂಡಿತು.

ಜಿ.ಪಂ ಹಾಗೂ ತಾ.ಪಂ ಕ್ಷೇತ್ರಗಳಿಗೆ 12 ವಾರಗಳಲ್ಲಿ ಮೀಸಲಾತಿ ಪ್ರಕಟಿಸಲಾಗುವುದು ಎಂದು ರಾಜ್ಯ ಸರ್ಕಾರ 2023ರ ಡಿಸೆಂಬರ್ 19ಕ್ಕೆ ನ್ಯಾಯಾಲಯಕ್ಕೆ ಭರವಸೆ ಕೊಟ್ಟಿತ್ತು. ಅದನ್ನು ಪಾಲಿಸಿಲ್ಲ ಎಂದು ರಾಜ್ಯ ಚುನಾವಣಾ ಆಯೋಗ ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ.