ನಟ ನಾಗಾರ್ಜುನಗೆ ತೆಲಂಗಾಣ ಸರ್ಕಾರ ಶಾಕ್ ಮೇಲೆ ಶಾಕ್ ನೀಡುತ್ತಲೇ ಬರುತ್ತಿದೆ. ಈ ಹಿಂದೆ ನಾಗಾರ್ಜುನಗೆ ಸೇರಿದ ದೊಡ್ಡ ಕಲ್ಯಾಣ ಮಂಟಪವನ್ನು ನೊಟೀಸ್ ನೀಡಿ ನೆಲಸಮಗೊಳಿಸಿತ್ತು. ಸರ್ಕಾರದ ಕ್ರಮವನ್ನು ಪ್ರಶ್ನಿಸಿ ನಾಗಾರ್ಜುನ ನ್ಯಾಯಾಲಯದ ಮೆಟ್ಟಿಲೇರಿದ್ದು, ಪ್ರಕರಣ ಚಾಲ್ತಿಯಲ್ಲಿದೆ.
ಇದು ಹೀಗಿರುವಾಗ ಮತ್ತೊಂದು ಶಾಕ್ ಎದುರಾಗಿದೆ. ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಇದೀಗ ನಾಗಾರ್ಜುನ ಒಡೆತನದ ಅನ್ನಪೂರ್ಣ ಸ್ಟುಡಿಯೋಗೆ ನೊಟೀಸ್ ನೀಡಿದೆ. ಅನ್ನಪೂರ್ಣ ಸ್ಟುಡಿಯೋ ಮಾತ್ರವೇ ಅಲ್ಲದೆ ಜನಪ್ರಿಯ ರಾಮಾನಾಯ್ಡು ಸ್ಟುಡಿಯೋಗೂ ನೊಟೀಸ್ ಜಾರಿ ಮಾಡಲಾಗಿದೆ.
ಅನ್ನಪೂರ್ಣ ಸ್ಟುಡಿಯೋಸ್ ಮತ್ತು ರಾಮಾನಾಯ್ಡು ಸ್ಟುಡಿಯೋಸ್ಗಳು ತೆರಿಗೆ ವಂಚನೆ ಮಾಡಿರುವ ಆರೋಪವನ್ನು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಮಾಡಿದ್ದು, ಈ ಕುರಿತು ಎರಡೂ ಫಿಲಂಸಿಟಿಗಳಿಗೆ ನೊಟೀಸ್ ಜಾರಿ ಮಾಡಿದೆ. ತಪ್ಪು ಲೆಕ್ಕ ತೋರಿಸಿ ತೆರಿಗೆ ವಂಚನೆ ಮಾಡಿರುವ ಆರೋಪವನ್ನು ಮುನ್ಸಿಪಲ್ ಕಾರ್ಪೊರೇಷನ್ ಮಾಡಿದ್ದು, ನೊಟೀಸ್ಗೆ ಉತ್ತರಿಸುವಂತೆ ಸೂಚನೆ ನೀಡಿದೆ.
ನಾಗಾರ್ಜುನ ಒಡೆತನದ ಅನ್ನಪೂರ್ಣ ಸ್ಟುಡಿಯೋ 1.92 ಚದರ ಅಡಿ ವಿಸ್ತೀರ್ಣ ಹೊಂದಿದೆ ಆದರೆ ಕೇವಲ 8100 ಚದರ ಅಡಿಯ ವಿಸ್ತೀರ್ಣವಷ್ಟೆ ಲೆಕ್ಕದಲ್ಲಿ ತೋರಿಸಿ ಅಷ್ಟು ವಿಸ್ತೀರ್ಣಕ್ಕೆ ಮಾತ್ರವೇ ತೆರಿಗೆ ಪಾವತಿ ಮಾಡುತ್ತಿದೆ. ರಾಮಾನಾಯ್ಡು ಸ್ಟುಡಿಯೋ 11.52 ಲಕ್ಷ ಚದರ ಅಡಿಗಳಷ್ಟು ಬೃಹತ್ ವಿಸ್ತೀರ್ಣ ಹೊಂದಿದೆ ಆದರೆ 49 ಸಾವಿರ ಚದರ ಅಡಿಗಳಿಗೆ ಮಾತ್ರವೇ ತೆರಿಗೆ ಪಾವತಿ ಮಾಡುತ್ತಿದೆ ಎಂದು ಮುನ್ಸಿಪಲ್ ಕಾರ್ಪೊರೇಷನ್ ನೊಟೀಸ್ನಲ್ಲಿ ಹೇಳಿದೆ.
ರಾಮಾನಾಯ್ಡು ಸ್ಟುಡಿಯೋ 2.73 ಲಕ್ಷ ರೂಪಾಯಿ ತೆರಿಗೆ ಪಾವತಿ ಮಾಡಬೇಕು ಆದರೆ ಈಗ ಕೇವಲ 7600 ರೂಪಾಯಿಗಳ ತೆರಿಗೆಯನ್ನಷ್ಟೆ ಪಾವತಿ ಮಾಡಿದೆ. ಇದೇ ರೀತಿ ಅನ್ನಪೂರ್ಣ ಸ್ಟುಡಿಯೋ ಸಹ ಕಡಿಮೆ ಮೊತ್ತದ ತೆರಿಗೆ ಪಾವತಿ ಮಾಡುತ್ತಿದೆ ಎಂದು ನೊಟೀಸ್ನಲ್ಲಿ ಆರೋಪಿಸಲಾಗಿದೆ.
ಇವರು ಖ್ಯಾತ ನಟ ರಾಣಾ ದಗ್ಗುಬಾಟಿ ಅವರ ತಂದೆ. ಅನ್ನಪೂರ್ಣ ಸ್ಟುಡಿಯೋಸ್ ನಾಗಾರ್ಜುನ ಅವರ ಒಡೆತನದಲ್ಲಿದ್ದರೆ ರಾಮಾನಾಯ್ಡು ಸ್ಡುಡಿಯೋ ದಗ್ಗುಬಾಟಿ ಕುಟುಂಬದ ಸುರೇಶ್ ಅವರ ಒಡೆತನದಲ್ಲಿದೆ.
ಇದೀಗ ಎರಡೂ ಸ್ಟುಡಿಯೋಗಳಿಗೆ ನೊಟೀಸ್ ನೀಡಿರುವ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್, ಪೂರ್ಣ ವಿಸ್ತೀರ್ಣಕ್ಕೆ ತೆರಿಗೆ ಪಾವತಿಸುವಂತೆ ತಿಳಿಸಿದೆ. ಅಲ್ಲದೆ ಹಿಂದಿನ ವರ್ಷಗಳ ತೆರಿಗೆಯನ್ನು ಸೇರಿಸಿ ದಂಡದ ಸಮೇತ ಪಾವತಿ ಮಾಡುವಂತೆ ಸೂಚನೆ ನೀಡಿದೆ.














