ಬೆಂಗಳೂರು(Bengaluru): ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ 21 ಟ್ರಸ್ಟ್ ಹಾಗೂ ಪ್ರತಿಷ್ಠಾನಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸಿ ಬುಧವಾರ ಹೊರಡಿಸಿದ್ದ ಆದೇಶವನ್ನು ಸರ್ಕಾರ ಗುರುವಾರ ಹಿಂಪಡೆದಿದೆ.ಚಿಕ್ಕಮಗಳೂರಿನ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೆ , ಕಳೆದ ವರ್ಷ ಮೃತಪಟ್ಟಿರುವ ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿ ಅವರನ್ನು ಸದಸ್ಯರನ್ನಾಗಿ ನೇಮಿಸಿರುವುದಾಗಿ ಆದೇಶದಲ್ಲಿ ಉಲ್ಲೇಖಿಸಲಾಗಿತ್ತು. ಈ ಕುರಿತು ಸಾಮಾಜಿಕ ಜಾಲತಾಣಗಳಗಳಲ್ಲಿ ಆಕ್ಷೇಪ ವ್ಯಕ್ತವಾಗಿದ್ದವು.
ಇದೇ ಪ್ರತಿಷ್ಠಾನಕ್ಕೆ ಅಧ್ಯಕ್ಷರನ್ನಾಗಿ ಸಾಹಿತಿ ನರೇಂದ್ರ ರೈ ದೇರ್ಲ ಅವರನ್ನು ನೇಮಿಸಲಾಗಿತ್ತು. ಆದರೆ, ಅವರು ‘ವೈಯಕ್ತಿಕ ಕಾರಣಗಳಿಂದಾಗಿ ಸಂಬಂಧಿಸಿದ ಜವಾಬ್ದಾರಿಯನ್ನು ನಾನು ಸ್ವೀಕರಿಸುವುದಿಲ್ಲ‘ ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದರು.
ತೇಜಸ್ವಿ ಅವರ ಒಡನಾಟ ಮತ್ತು ಅವರ ಕುರಿತು ಒಂದಷ್ಟು ಬರವಣಿಗೆ ಅವರ ಪತ್ರಗಳ ಸಂಪಾದನೆಯನ್ನು ನಾನು ಮಾಡಿರುವುದು ನಿಜ. ಈ ಕಾರಣಕ್ಕಾಗಿಯೇ ಸರ್ಕಾರ ನನ್ನನ್ನು ಆಯ್ಕೆ ಮಾಡಿದೆ ಎಂದು ಅನೇಕ ಸ್ನೇಹಿತರು, ಬಂಧುಗಳು, ತೇಜಸ್ವಿ ಓದುಗರು ಅಭಿನಂದಿಸಿ ನನಗೆ ಸಂದೇಶ ಕಳಿಸಿದ್ದರು. ಈ ಕುರಿತು ಘನ ಸರ್ಕಾರಕ್ಕೂ ನನ್ನ ಧನ್ಯವಾದಗಳು‘ ಎಂದು ಉಲ್ಲೇಖಿಸಿದ್ದರು.
ಇದೇ ರೀತಿ, ಹಾವೇರಿಯ ಗಳಗನಾಥ ಹಾಗೂ ನಾ.ಶ್ರೀ. ರಾಜಪುರೋಹಿತ ಟ್ರಸ್ಟ್ಗೆ ಚಕ್ರವರ್ತಿ ಸೂಲಿಬೆಲೆ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ, ಗಳಗನಾಥರ ಕುರಿತಂತೆ ಅಪಾರ ಗೌರವ ಹೊಂದಿರುವ ನನ್ನನ್ನು ಪ್ರತಿಷ್ಠಾನಕ್ಕೆ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದು ಅಚ್ಚರಿ ಮತ್ತು ಸಂತಸವೂ ಆಯ್ತು.ಅದಕ್ಕೆ ಸಮಯ ಕೊಡುವಷ್ಟು ಪುರಸೊತ್ತಿಲ್ಲದಿರುವುದರಿಂದ ಅತ್ಯಂತ ವಿನೀತನಾಗಿ ಗೌರವವನ್ನು ಮರಳಿಸುತ್ತಿದ್ದೇನೆ ಎಂದು ಸೂಲಿಬೆಲೆ ತಮ್ಮ ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿದ್ದರು.