ಮೈಸೂರು : ಸರ್ಕಾರ ಮಹಿಳೆಯರಿಗೆ ೨ ಸಾವಿರ ಕೊಟ್ಟು ಅವರಿಂದ ವಿವಿಧ ರೂಪದಲ್ಲಿ ೫ ಸಾವಿರ ಕಿತ್ತುಕೊಳ್ಳುತ್ತಿದೆ ಎಂದು ಕೆ.ಆರ್.ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಕಿಡಿ ಕಾರಿದರು.
ಕೆಆರ್ ಕ್ಷೇತ್ರದ ೬೫ನೇ ವಾರ್ಡ್‌ನ ಶಿವಪುರ ಬಡಾವಣೆಯಲ್ಲಿ ಫ್ಲೋರ್ ಮಿಲ್‌ನಿಂದ ಶಂಕರ್ ಅವರ ಮನೆಯವರೆಗೆ, ಸಿ.ಸಿ.ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತು ಎಲ್ಲಾ ಅಡ್ಡರಸ್ತೆಗಳಲ್ಲಿ ಯುಜಿಡಿ, ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ಹಾಗೂ ಶಿವಪುರದ ಹೆಬ್ಬಾಗಿಲಿನಿಂದ ಶ್ರೀರಾಮನ ದೇವಸ್ಥಾನದವರೆಗೆ ಸಿ.ಸಿ.ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಹಾಲು, ಮೊಸರು ಮತ್ತು ವಿದ್ಯುತ್ ಶುಲ್ಕವನ್ನು ಏರಿಕೆ ಮಾಡಿರುವುದು ಸರಿಯಲ್ಲ. ಇದನ್ನು ನಾವು ನಿರೀಕ್ಷಿಸಿದ್ದೆವು. ಸರ್ಕಾರ ಯಾವುದೇ ಮುಂದಾಲೋಚನೆ ಇಲ್ಲದೆ ಜನರನ್ನು ಮೆಚ್ಚಿಸಲು ವಿವಿಧ ಯೋಜನೆಗಳನ್ನು ಘೋಷಿಸಿತ್ತು. ಅದಕ್ಕೆ ಹಣ ಹೊಂದಿಸಲು ಸಾಧ್ಯವಾಗದೆ ಬೆಲೆ ಏರಿಕೆ ಮಾಡಿದೆ. ಇನ್ನು ಮುಂದೆಯೂ ಎಲ್ಲ ವಸ್ತುಗಳ ಬೆಲೆಗಳು ಏರುತ್ತಲೇ ಇರುತ್ತವೆ.
ಯುಗಾದಿಯ ನಂತರ ಇದರ ವಿರುದ್ಧ ನಾವು ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು ಕ್ಷೇತ್ರದ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಯ ಮಂತ್ರಿಗಳು ಮತ್ತು ಅಧಿಕಾರಿಗಳ ಮುಂದೆ ಸಮರ್ಥವಾಗಿ ಪ್ರಸ್ತುತ ಪಡಿಸಿದರೆ ಅನುದಾನ ಪಡೆಯುವುದು ಸುಲಭ. ರಾಜ್ಯ ಸರ್ಕಾರದ ಮಂತ್ರಿಗಳು ಮತ್ತು ಅಧಿಕಾರಿಗಳು ನನ್ನ ಕ್ಷೇತ್ರದ ಅಭಿವೃದ್ಧಿಗೆ ಸ್ಪಂದಿಸಿದ್ದಾರೆ. ಕೆ.ಆರ್ ಕ್ಷೇತ್ರದಲ್ಲಿ ಪೌರಕಾರ್ಮಿಕರ ವಸತಿ ಸಮುಚ್ಛಯವನ್ನು ನೆಲಸಮ ಮಾಡಿ ಹೊಸ ವಸತಿ ಸಮುಚ್ಛಯ ಕಟ್ಟಲು ವಸತಿ ಸಚಿವರು ಮತ್ತು ನಗರಾಭಿವೃದ್ಧಿ ಸಚಿವರು ೩೦ ಕೋಟಿ ಅನುದಾನ ನೀಡಲು ಒಪ್ಪಿದ್ದಾರೆ.
ಈಗ ಅಲ್ಲಿರುವ ಪೌರಕಾರ್ಮಿಕರನ್ನು ಬೇರೆಡೆ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಿ ಒಂದೂವರೆ ವರ್ಷದಲ್ಲಿ ಎರಡೂವರೆ ಎಕರೆ ಭೂಮಿಯಲ್ಲಿ ಹೊಸ ವಸತಿ ಸಮುಚ್ಛಯ ನಿರ್ಮಿಸಲಾಗುವುದು ಎಂದರು.
ಕೆಎಸ್‌ಓಯು ಹಗರಣಗಳ ತನಿಖೆ ಕುರಿತು ಮಾತನಾಡಿದ ಶ್ರೀವತ್ಸ ಅವರು, ವಿಧಾನಸಭೆ ಕಲಾಪದ ಶೂನ್ಯ ವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದೆ, ಉನ್ನತ ಶಿಕ್ಷಣ ಸಚಿವರು ನನ್ನ ಮನವಿಗೆ ಸ್ಪಂದಿಸಿ ಕೆಎಸ್‌ಓಯು ಹಗರಣಗಳ ತನಿಖೆಗೆ ತನಿಖಾಧಿಕಾರಿ ನೇಮಕ ಮಾಡುತ್ತಿದ್ದಾರೆ. ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು ಎಂದು ಹೇಳಿದರು. ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ ಕುರಿತು ಮಾತನಾಡಿದ ಶ್ರೀವತ್ಸ ಅವರು, ಬಿಜೆಪಿಯಿಂದ ಒಬ್ಬ ಕಾರ್ಯಕರ್ತ ಹೊರಹೋದರೂ ಪಕ್ಷಕ್ಕೆ ನಷ್ಟ ಹೌದು. ಆದರೇ, ಪಕ್ಷದಲ್ಲಿ ಶಿಸ್ತು ಕಾಪಾಡಲು ಇಂತಹ ಕಠಿಣ ನಿರ್ಧಾರ ಅಗತ್ಯವಾಗಿದೆ. ಮುಂದಿನ ದಿನಗಳಲ್ಲಿ ಪಕ್ಷದ ಹಿರಿಯ ಮುಖಂಡರು ಇದಕ್ಕೆ ಸೂಕ್ತ ಪರಿಹಾರ ಒದಗಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಈ ಸಂದರ್ಭದಲ್ಲಿ ಮೈಸೂರು ಮಹಾನಗರಪಾಲಿಕೆ ಮಾಜಿ ಸದಸ್ಯರಾದ ಗೀತಶ್ರೀ ಯೋಗಾನಂದ್, ಬಿಜೆಪಿ ಮುಖಂಡರಾದ ಜಯರಾಮ್, ಪ್ರದೀಪ್,ಗಿರೀಶ್, ಮನೋಜ್, ಬಿ.ಕೆ.ಮಂಜುನಾಥ್ ಮತ್ತಿತರರು ಇದ್ದರು.