ಮನೆ ರಾಜ್ಯ ರಾಜ್ಯವನ್ನು “ಕೌಶಲ್ಯ ಅಭಿವೃದ್ಧಿ ಹಬ್‌” ಮಾಡುವುದೇ ಸರ್ಕಾರದ ಗುರಿ

ರಾಜ್ಯವನ್ನು “ಕೌಶಲ್ಯ ಅಭಿವೃದ್ಧಿ ಹಬ್‌” ಮಾಡುವುದೇ ಸರ್ಕಾರದ ಗುರಿ

0

ಜಿಟಿಟಿಸಿ ಕೈಗಾರಿಕೆ-ಶೈಕ್ಷಣಿಕ ಸಮಾವೇಶದಲ್ಲಿ ಶರಣ್‌ ಪ್ರಕಾಶ್‌ ಪಾಟೀಲ್‌ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುವ ಜೊತೆಗೆ ಯುವ ಸಮುದಾಯದವರಲ್ಲಿ ಕೌಶಲ್ಯಾಭಿವೃದ್ಧಿ ಮಾಡಲು ನಮ್ಮ ರಾಜ್ಯ ಸರ್ಕಾರ ವ್ಯವಸ್ಥಿತವಾಗಿ ಯೋಜನೆಗಳನ್ನು ರೂಪಿಸುತ್ತಿದೆ. ಈ ನಿಟ್ಟಿನಲ್ಲಿ ಇಂದು ಹಲವಾರು ಉಪ ಕ್ರಮಗಳಿಗೆ ಚಾಲನೆ ನೀಡುತ್ತಿದ್ದೇವೆ ಎಂದು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

Join Our Whatsapp Group

ಬೆಂಗಳೂರಿ‌ನಲ್ಲಿ ಶುಕ್ರವಾರ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ (ಜಿಟಿಟಿಸಿ) ಕೈಗಾರಿಕೆ-ಶೈಕ್ಷಣಿಕ ಸಮಾವೇಶ ಉದ್ಘಾಟಿಸಿ ಸಚಿವರು ಮಾತನಾಡಿದರು.

ಗ್ರಾಮೀಣ ಭಾಗದ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡುವ ನಿಟ್ಟಿನಲ್ಲಿ ಕೈಗಾರಿಕೆ-ಶೈಕ್ಷಣಿಕ ಸಮಾವೇಶ ಆಯೋಜಿಸಲಾಗಿದ್ದು, ಶೈಕ್ಷಣಿಕ-ವೃತ್ತಿಪರ ಸಂಸ್ಥೆಗಳು ಮತ್ತು ಕೈಗಾರಿಕೆಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಬೃಹತ್‌ ವೇದಿಕೆಯಾಗಿದೆ. ಉದ್ಯೋಗ ಕ್ಷೇತ್ರದಲ್ಲಿನ ಬೇಡಿಕೆಗಳನ್ನು ಪೂರೈಸಲು ಸಹಯೋಗ, ಸಹಭಾಗಿತ್ವ, ನಾವೀನ್ಯತೆ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸಲು ಮುಂದಾಗಿದ್ದೇವೆ. ರಾಜ್ಯವನ್ನು ಕೌಶಲ್ಯ ಅಭಿವೃದ್ಧಿ ಹಬ್‌ ಮಾಡುವುದೇ ನಮ್ಮ ಧ್ಯೇಯ ಎಂದು ಸಚಿವರು ತಿಳಿಸಿದರು.

ಕೌಶಲ್ಯ ಶಕ್ತಿ ಹೆಚ್ಚಳ

ರಾಜ್ಯದಲ್ಲಿ ಕೌಶಲ್ಯ ಶಕ್ತಿ ಹೆಚ್ಚಿಸಲು ಹಲವಾರು  ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಕೈಗಾರಿಕಾ ಮತ್ತು ಉದ್ಯಮ ವಲಯಗಳಲ್ಲಿ ಕೌಶಲ್ಯಪೂರ್ಣ ಉದ್ಯೋಗಿಗಳ ಅಗತ್ಯತೆಯನ್ನು ಪೂರೈಸಲು 300 ಕೋಟಿ ರೂ. ವೆಚ್ಚದಲ್ಲಿ ಬಳ್ಳಾರಿಯ ಸಂಡೂರಿನಲ್ಲಿ ಕೌಶಲ್ಯ ಅಕಾಡೆಮಿ ಸ್ಥಾಪಿಸಲಾಗುವುದು ಎಂದು ಶರಣ್‌ಪ್ರಕಾಶ್‌ ಪಾಟೀಲ್‌ ಮಾಹಿತಿ ನೀಡಿದರು.

ಇದಲ್ಲದೇ, ಜಿಟಿಟಿಸಿ ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ಕಲಬುರಗಿ (ಗುಲ್ಬರ್ಗ ವಿವಿ ಜತೆ ಒಪ್ಪಂದ), ಕೊಪ್ಪಳದ ತಲಕಲ್‌ ಮತ್ತು ಮೈಸೂರಿನ ವರುಣಾದಲ್ಲಿ ವಿಶ್ವೇಶ್ವರಯ್ಯ ವಿವಿಯ ಸಹಯೋಗದೊಂದಿಗೆ ಆರಂಭಿಸಲಾಗುವುದು ಎಂದರು.

ಸ್ಕಿಲ್‌ ಲೋಕಲಿ, ವರ್ಕ್‌ ಗ್ಲೋಬಲಿ

ಸ್ಕಿಲ್‌ ಲೋಕಲಿ, ವರ್ಕ್‌ ಗ್ಲೋಬಲಿ” (Skill Locally, Work Globally) ಎಂಬುದು ನಮ್ಮ ಸರ್ಕಾರದ ಮೂಲ ಮಂತ್ರವಾಗಿದೆ. ರಾಜ್ಯದ ಹಲವೆಡೆ ಜಿಟಿಟಿಸಿ ಸ್ಥಾಪಿಸಲು ನಮ್ಮ ಸರ್ಕಾರ ಸಿದ್ಧತೆ ನಡೆಸಿದೆ. ರಾಜ್ಯದ ಎಲ್ಲೆಡೆಯೂ ಕೌಶಲ್ಯ ಆಧಾರಿತ ತರಬೇತಿಯನ್ನು ಯುವ ಸಮೂಹಕ್ಕೆ ನೀಡಲಾಗುವುದು ಎಂದು ಸಚಿವರು ವಿವರಿಸಿದರು.

ಮುಂಬರುವ ಭಾರತ ಕೌಶಲ್ಯ-2025 ಸ್ಪರ್ಧೆಗಳು ಮತ್ತು ವಿಶ್ವ ಕೌಶಲ್ಯ ಸ್ಪರ್ಧೆ – 2026 ಗಾಗಿ 18 ಕೌಶಲ್ಯ ವಿಭಾಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು ನಮ್ಮ ಜಿಟಿಸಿಸಿ ಸಿದ್ಧಪಡಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ನಮ್ಮ ರಾಜ್ಯದವರು ಸಜ್ಜಾಗಲಿದ್ದಾರೆ ಎಂದು ಶರಣ್‌ಪ್ರಕಾಶ್‌ ಪಾಟೀಲ್‌ ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್‌ ಖರ್ಗೆ, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್‌, ಕಾಂತಾ ನಾಯಕ, ಅಧ್ಯಕ್ಷರು, ಕೆ.ಎಸ್.ಡಿ.ಸಿ, ಜಿಟಿಟಿಸಿ ವ್ಯವಸ್ಥಾಪಕ ನಿರ್ದೇಶಕ ವೈ.ಕೆ.ದಿನೇಶ್‌ ಕುಮಾರ್ ಹಿರಿಯ ಅಧಿಕಾರಿಗಳು, ಗಣ್ಯರು, ಉದ್ಯಮಿಗಳು ಈ ಸಮಾವೇಶದಲ್ಲಿ ಉಪಸ್ಥಿತರಿದ್ದರು.

ಪ್ರಮುಖ ಕಂಪನಿಗಳ ಜೊತೆ ಒಪ್ಪಂದಗಳು

* ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ತರಬೇತಿಗಾಗಿ ಇಂಟೆಲ್, ಐಬಿಎಂ, ನಾಸ್ಕಾಂ, ಟೆಸ್ಲಾ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

* ಮೆಕ್ಯಾನಿಕಲ್ ಕ್ಷೇತ್ರದಲ್ಲಿ ಟೊಯೊಟಾ, ಸೀಮನ್ಸ್, ಆಟೊ ಡೆಸ್ಕ್, ಮಾಸ್ಟರ್ ಕ್ಯಾಮ್, ಗ್ರೀನ್ ಸ್ಕಿಲ್ಸ್ ಕ್ಷೇತ್ರದಲ್ಲಿ ಗಿಜ್ ಜೊತೆಗೆ ಹಾಗೂ

* ⁠ಶೈಕ್ಷಣಿಕ ಕ್ಷೇತ್ರದಲ್ಲಿ ಐಐಎಸ್ಸಿ, ವಿಟಿಯು, ಗುಲ್ಬರ್ಗ ವಿವಿ, ಆರ್‌ ಎನ್‌ ಎಸ್‌ ಐಟಿ, ಬಿಎನ್ಎಂಐಟಿ ಜೊತೆ ಕೌಶಲ್ಯಾಭಿವೃದ್ಧಿ ತರಬೇತಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಜಿಟಿಟಿಸಿ ಪ್ರಮುಖ ಯೋಜನೆಗಳು

* 27 GTTC ಕೇಂದ್ರಗಳಲ್ಲಿ ಹೊಸ ಡಿಪ್ಲೊಮಾ ಕಾರ್ಯಕ್ರಮಗಳು

* ಏರೋಸ್ಪೇಸ್ ಮತ್ತು ಎಲೆಕ್ಟ್ರಾನಿಕ್ಸ್-ಸೆಮಿಕಂಡಕ್ಟರ್ ಡೊಮೇನ್‌ನಲ್ಲಿ ತಂತ್ರಜ್ಞಾನ ಕೇಂದ್ರಗಳ ಸ್ಥಾಪನೆ

* ಜರ್ಮನ್ ಚೇಂಬರ್ ಆಫ್ ಕಾಮರ್ಸ್ ಸಹಯೋಗದೊಂದಿಗೆ ಡಿಪ್ಲೊಮಾ ಮತ್ತು ಬಿಇ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ವಿನಿಮಯ ಕಾರ್ಯಕ್ರಮ

* ಜರ್ಮನ್ ಅಂತರಾಷ್ಟ್ರೀಯ ವಲಸೆ ಕೇಂದ್ರ

* ಉನ್ನತ-ಕೌಶಲ್ಯ ಮತ್ತು ಮರು-ಕೌಶಲ್ಯ ತರಬೇತಿ ಯೋಜನೆಗಳು