ಮನೆ ಕಾನೂನು ಕಟ್ಟಡದ ನೆಲಮಹಡಿ ಸಾರ್ವಜನಿಕ ಸ್ಥಳವಲ್ಲ:ಎಸ್ಸಿಎಸ್ಟಿ ಕಾಯ್ದೆ ಅನ್ವಯವಿಲ್ಲ-ಹೈಕೋರ್ಟ್

ಕಟ್ಟಡದ ನೆಲಮಹಡಿ ಸಾರ್ವಜನಿಕ ಸ್ಥಳವಲ್ಲ:ಎಸ್ಸಿಎಸ್ಟಿ ಕಾಯ್ದೆ ಅನ್ವಯವಿಲ್ಲ-ಹೈಕೋರ್ಟ್

0

ಕಟ್ಟಡದ ನೆಲಮಹಡಿ ಸಾರ್ವಜನಿಕ ವೀಕ್ಷಣೆಯ ಸ್ಥಳವಲ್ಲ, ಹಾಗಾಗಿ ಅಲ್ಲಿಂದ ಬೈಯ್ದರೆ ಅಥವಾ ನಿಂದನೆ ಮಾಡಿದರೆ ಅದು ಪರಿಶಿಷ್ಟ ಜಾತಿ, ಪಂಗಡದ ಮೇಲಿನ ದೌರ್ಜನ್ಯ ತಡೆ ಕಾಯ್ದೆ ವ್ಯಾಪ್ತಿಗೆ ಅನ್ವಯವಾಗುವುದಿಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ನಿಂದನೆ ಮಾಡಿದರೆ ಮಾತ್ರ ಅದು ಎಸ್ ಸಿ, ಎಸ್ ಟಿ ದೌರ್ಜನ್ಯ ತಡೆ ಕಾಯ್ದೆ ಗೆ ಅನ್ವಯವಾಗುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ರಿತೇಶ್ ಪಯಾಸ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.

ನೆಲಮಹಡಿ ಸಾರ್ವಜನಿಕ ವೀಕ್ಷಣೆಯ ಸ್ಥಳವಲ್ಲ. ಹೀಗಾಗಿ ಎಸ್ ಸಿ, ಎಸ್ ಟಿ ದೌರ್ಜನ್ಯ ತಡೆ ಕಾಯ್ದೆ ಸೆ.3(1)(ಆರ್)(ಎಸ್)(ವಿಎ) ಅನ್ವಯವಾಗುವುದಿಲ್ಲ ಎಂದು ಏಕಸದಸ್ಯ ಪೀಠ ಆದೇಶ ಕಟ್ಟಡದ ತಳಮಹಡಿಯಲ್ಲಿ ಜಾತಿ ನಿಂದನೆ ಮಾಡಿದ್ದಾರೆಂದು ಆರೋಪಿ ರಿತೇಶ್ ಪಯಾಸ್ ವಿರುದ್ದ ಹೂಡಿದ್ದ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಕೇಸ್ ಅನ್ನು ರದ್ದುಪಡಿಸಿದೆ.

ಅಲ್ಲದೆ, ಪ್ರಕರಣದಲ್ಲಿ ಕಟ್ಟಡದ ತಳಮಹಡಿಯಲ್ಲಿ ಆರೋಪಿಯು ಜಾತಿ ನಿಂದನೆ ಮಾಡಿರುವುದಾಗಿ ದೂರುದಾರರು ಆರೋಪಿಸಿದ್ದಾರೆ. ಆದರೆ, ತಳಮಹಡಿ ಸಾರ್ವಜನಿಕ ವೀಕ್ಷಣೆಯ ಸ್ಥಳ ಅಥವಾ ಸಾರ್ವಜನಿಕ ಸ್ಥಳವಲ್ಲ. ಜತೆಗೆ, ಘಟನೆ ವೇಳೆ ಸ್ಥಳದಲ್ಲಿದ್ದ ಇತರ ಸಾಕ್ಷಿಗಳು ದೂರುದಾರರ ಸ್ನೇಹಿತರೇ ಆಗಿದ್ದು, ಬೇರೆ ಯಾರೂ ನೋಡಿಲ್ಲ. ಆದ್ದರಿಂದ, ಪ್ರಕರಣದಲ್ಲಿ ಅಟ್ರಾಸಿಟಿ ಕಾಯ್ದೆಯ ಸೆಕ್ಷನ್‌ಗಳು ಅನ್ವಯವಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

“ದೂರು, ದಾಖಲೆಗಳನ್ನು ಪರಿಶೀಲಿಸಿದಾಗ ಅದರಲ್ಲಿ ಆರೋಪಿ ಕೆಳಮಹಡಿಯಿಂದ ಜಾತಿ ನಿಂದನೆ ಮಾಡಿದನೆಂದು ಹೇಳಲಾಗಿದೆ. ಆದರೆ ಕೆಳಮಹಡಿ ಸಾರ್ವಜನಿಕ ಸ್ಥಳವಾಗುವುದಿಲ್ಲ. ಹಾಗಾಗಿ ಅಲ್ಲಿಂದ ಜಾತಿ ನಿಂದನೆ ಮಾಡಿದ್ದಾರೆಂಬುದನ್ನು ಒಪ್ಪಲಾಗದು. ಹಾಗಾಗಿ ಆ ಕುರಿತಂತೆ ಸಲ್ಲಿಸಿರುವ ದೂರಿನಲ್ಲಿ ಹುರುಳಿಲ್ಲ, ಆರೋಪವೂ ಸರಿಯಲ್ಲ” ಎಂದು ನ್ಯಾಯಪೀಠ ಹೇಳಿದೆ.

ಘಟನೆ ನಡೆದಿದೆ ಎಂದು ದೂರಿನಲ್ಲಿ ಹೇಳಿರುವುದಕ್ಕೂ ಪ್ರಕರಣದ ವಿವರಗಳಿಗೂ ಮೇಲ್ನೋಟಕ್ಕೆ ಒಂದಕ್ಕೊಂದು ಸಂಬಂಧವಿಲ್ಲವೆಂದು ಕಂಡಬರುತ್ತಿದೆ. ಹಾಗಾಗಿ ಪ್ರಕರಣ ಮಾನ್ಯ ಮಾಡಲಾಗದು ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಆರೋಪಿ ರಿತೇಶ್ ಪಯಾಸ್ ಮತ್ತು ಜಯಕುಮಾರ್ ನಾಯರ್ ನಡುವೆ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸಿವಿಲ್ ವ್ಯಾಜ್ಯವಿತ್ತು.ನಾಯರ್ ವಿರುದ್ಧ ಪಯಾಸ್ ನಿರ್ಬಂಧಕಾಜ್ಞೆ ಪಡೆದಿದ್ದರು. ನಾಯರ್ ಕಟ್ಟಡದ ಕೆಲಸಗಾರನಿಂದ ಪಯಾಸ್ ವಿರುದ್ಧ ದೂರು ಎಸ್ ಸಿ, ಎಸ್ ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪುತ್ತೂರು ಟೌನ್ ಪೊಲೀಸ್ ಠಾಣೆಯಲ್ಲಿ ಜಾತಿನಿಂದನೆ ಕೇಸ್ ದಾಖಲಿಸಿದ್ದರು. ಹಾಗಾಗಿ ಪಯಾಸ್ , ದುರುದ್ದೇಶದಿಂದ ದೂರು ಕೊಡಿಸಲಾಗಿದೆ. ಸಿವಿಲ್ ವ್ಯಾಜ್ಯಕ್ಕೆ ಪ್ರತಿಯಾಗಿ ಜಾತಿನಿಂದನೆ ಕೇಸ್ ಹಾಕಿಸಲಾಗಿದೆ. ಹಾಗಾಗಿ ತಮ್ಮ ವಿರುದ್ಧದ ಪ್ರಕರಣ ರದ್ದುಗೊಳಿಸಬೇಕೆಂದು ಹೈಕೋರ್ಟ್ ಮೊರೆ ಹೋಗಿದ್ದರು.