ಪಡುಬಿದ್ರಿ: ಕಾರ್ಕಳ ನಗರ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್, ಕಾಪು ಜನಾರ್ದನ ದೇವಸ್ಥಾನ ಬಳಿಯ ಅಂಗಡಿಮನೆ ನಿವಾಸಿ ಶೃತಿನ್ ಶೆಟ್ಟಿ (35) ನಾಪತ್ತೆಯಾಗಿದ್ದಾರೆ.
ಈ ಕುರಿತು ಅವರ ಪತ್ನಿ ಪೂಜಾ ಶೆಟ್ಟಿ ಶುಕ್ರವಾರದಂದು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾರ್ಕಳ ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶೃತಿನ್ ಶೆಟ್ಟಿ ಅ. 16ರಂದು ರಜೆ ಹಾಕಿದ್ದು, ತಾನು ಮನೆಗೆ ಬರುತ್ತಿರುವುದಾಗಿ ಪತ್ನಿಗೆ ಮೊಬೈಲ್ ಮೂಲಕ ತಿಳಿಸಿದ್ದರು. ಆದರೆ ಮನೆಗೂ ಬಾರದೆ, ಕಾರ್ಕಳ ನಗರ ಠಾಣೆಗೂ ಹೋಗದೆ ಶೃತಿನ್ ಶೆಟ್ಟಿ ನಾಪತ್ತೆಯಾಗಿದ್ದಾರೆ. ಶೃತಿನ್ ಶೆಟ್ಟಿ ಎರಡು ತಿಂಗಳ ಹಿಂದೆಯಷ್ಟೇ ಭಡ್ತಿಗೊಂಡು ಕಾರ್ಕಳ ನಗರ ಪೊಲೀಸ್ ಠಾಣೆ ಹೆಡ್ ಕಾನ್ ಸ್ಟೇಬಲ್ ಆಗಿ ಬಂದಿದ್ದರು.
ಸದ್ಯ ಅವರ ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿದೆ. ಪೂಜಾ ಶೆಟ್ಟಿ ದೂರಿನ ಬಳಿಕ ಸಿಸಿಟಿವಿ ಫೂಟೇಜ್ ಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ.
ಚಹರೆ: 178ಸೆ.ಮೀ. ಎತ್ತರ, ದೃಢಕಾಯದ ಶೃತಿನ್ ಶೆಟ್ಟಿ ತುಳು, ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳನ್ನು ಮಾತಾಡುತ್ತಾರೆ.
ಈ ವ್ಯಕ್ತಿಯ ಮಾಹಿತಿ ದೊರೆತಲ್ಲಿ ಪಡುಬಿದ್ರಿ ಪೊಲೀಸ್ ಠಾಣೆ (0820 2555452)ಯನ್ನು ಸಂಪರ್ಕಿಸಲು ಪೊಲೀಸರು ಮನವಿ ಮಾಡಿದ್ದಾರೆ.