ಮನೆ ಕಾನೂನು ದೂರುದಾರನಿಗೆ ಅಂತಿಮ ವರದಿ ಮಾಹಿತಿ ನೀಡಲು ತನಿಖಾಧಿಕಾರಿಗೆ ಆದೇಶಿಸುವಂತೆ ಡಿಜಿಪಿಗೆ ನಿರ್ದೇಶಿಸಿದ ಹೈಕೋರ್ಟ್

ದೂರುದಾರನಿಗೆ ಅಂತಿಮ ವರದಿ ಮಾಹಿತಿ ನೀಡಲು ತನಿಖಾಧಿಕಾರಿಗೆ ಆದೇಶಿಸುವಂತೆ ಡಿಜಿಪಿಗೆ ನಿರ್ದೇಶಿಸಿದ ಹೈಕೋರ್ಟ್

0

ಕ್ರಿಮಿನಲ್ ಪ್ರಕರಣಗಳ ತನಿಖೆ ನಡೆಸಿ ಸಿದ್ಧಪಡಿಸಿದ ಅಂತಿಮ ವರದಿ ಕುರಿತು ಮಾಹಿತಿಯನ್ನು ಪ್ರಕರಣದ ಪ್ರಥಮ ವರ್ತಮಾನ ಮಾಹಿತಿದಾರನಿಗೆ (ದೂರುದಾರ) ನೀಡುವಂತೆ ಎಲ್ಲಾ ತನಿಖಾ ಸಂಸ್ಥೆಗಳ ತನಿಖಾಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ .

Join Our Whatsapp Group

[ಬಿ ಪ್ರಶಾಂತ್ ಹೆಗ್ಡೆ ವರ್ಸಸ್ ಕರ್ನಾಟಕ ರಾಜ್ಯ].

ಬೆಂಗಳೂರಿನ ಬಿ ಪ್ರಶಾಂತ್ ಹೆಗ್ಡೆ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.

ಅಪರಾಧ ದಂಡ ಪ್ರಕ್ರಿಯಾ ಸಂಹಿತೆ ಸೆಕ್ಷನ್ 173(2) ಪ್ರಕಾರ ತನಿಖಾಧಿಕಾರಿಯು ತನಿಖೆ ಪೂರ್ಣಗೊಳಿಸಿ ಅದರ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಸೆಕ್ಷನ್ 173(2)(2) ಪ್ರಕಾರ ಅಂತಿಮ ವರದಿ ಸಲ್ಲಿಕೆಯ ಕುರಿತು ದೂರುದಾರನಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ಈ ಕುರಿತು ಸುಪ್ರಿಂ ಕೋರ್ಟ್ ಸಹ ಆದೇಶ ಮಾಡಿದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಅಲ್ಲದೇ, ತನಿಖೆಯ ಅಂತಿಮ ವರದಿ ಸಲ್ಲಿಕೆ ಕುರಿತು ತನಿಖಾಧಿಕಾರಿ ದೂರುದಾರನಿಗೆ ಮಾಹಿತಿ ನೀಡಿದರೆ, ತನಿಖೆ ಬಗ್ಗೆ ತಿಳಿಯಲು ಮತ್ತು ಪ್ರಕರಣವನ್ನು ಅನುಸರಿಸಲು (ಫಾಲೋ ಅಪ್) ಆತನಿಗೆ ಅನುಕೂಲವಾಗುತ್ತದೆ ಎಂದು ವಿವರಿಸಿದೆ.

ಪ್ರಕರಣವೊಂದರಲ್ಲಿ ಎರಡು ಖಾಸಗಿ ಬ್ಯಾಂಕ್ ಅಧಿಕಾರಿಗಳಿಂದ ಹಣ ದುರ್ಬಳಕೆ ಮತ್ತು ವಂಚನೆ ಆರೋಪ ಸಂಬಂಧ ಅರ್ಜಿದಾರರು ದೂರು ನೀಡಿದ್ದರು. ಇದರ ಆಧಾರದಲ್ಲಿ ಸಿಐಡಿ ತನಿಖೆ ನಡೆಸಿದೆ. ಜೊತೆಗೆ ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಆದರೆ, ತನಿಖೆಯ ಅಂತಿಮ ವರದಿ ಕುರಿತು ದೂರುದಾರರಾದ ಪ್ರಶಾಂತ್ ಹೆಗ್ಡೆ ಅವರಿಗೆ ಮಾಹಿತಿ ನೀಡಿಲ್ಲ ಎಂದು ಪೀಠ ಬೇಸರ ವ್ಯಕ್ತಪಡಿಸಿತು.

ಅಂತಿಮವಾಗಿ ರಾಜ್ಯದ ಎಲ್ಲಾ ತನಿಖಾ ಸಂಸ್ಥೆಗಳ ತನಿಖಾಧಿಕಾರಿಗಳಿಗೆ ತನಿಖೆಯ ಅಂತಿಮ ವರದಿ ಬಗ್ಗೆ ಪ್ರಕರಣದ ದೂರುದಾರರಿಗೆ ಮಾಹಿತಿ ನೀಡಬೇಕು ಎಂದು ನಿರ್ದೇಶಿಸುವಂತೆ ಡಿಜಿಪಿಗೆ ಪೀಠ ನಿರ್ದೇಶಿಸಿತು.

ಅಲ್ಲದೆ, “ಪ್ರಕರಣದಲ್ಲಿ ಆರೋಪಿಗಳು ಬ್ಯಾಂಕ್ ಉದ್ಯೋಗಿಗಳಾಗಿದ್ದಾರೆ. ಕೇವಲ ಅವರನ್ನು ಮಾತ್ರವೇ ಆರೋಪಿಗಳನ್ನಾಗಿ ಮಾಡಲಾಗಿದೆ. ಆದರೆ, ಬ್ಯಾಂಕ್ ಗಳ ವಿರುದ್ಧ ಆರೋಪ ಮಾಡಿಲ್ಲ. ಬ್ಯಾಂಕ್ ಮೂಲಕ ಅಧಿಕಾರಿಗಳು ಅಪರಾಧ ಎಸಗಿರುವುದರಿಂದ ಸಿಆರ್’ಪಿಸಿ ಸೆಕ್ಷನ್ 174(8) ಅನುಸಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಅನ್ನು ಸಹ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಮಾಡಿ, ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಸುವಂತೆ ತನಿಖಾಧಿಕಾರಿಗೆ ವಿಚಾರಣಾಧೀನ ನ್ಯಾಯಾಲಯವು ನಿರ್ದೇಶಿಸಬೇಕು. ಅಂತೆಯೇ, ಎರಡೂ ಬ್ಯಾಂಕ್ ಗಳ ವಿರುದ್ಧ ಸಂಜ್ಞೇಯ ಪರಿಗಣಿಸಬೇಕು” ಎಂದು ಸಹ ನ್ಯಾಯಾಲಯ ಆದೇಶಿಸಿತು.

ಪ್ರಕರಣದ ಹಿನ್ನೆಲೆ: ಹಣ ದುರ್ಬಳಕೆ, ವಂಚನೆ, ಅಪರಾಧಿಕ ಒಳಸಂಚು, ಕಳ್ಳತನ, ನಂಬಿಕೆ ದ್ರೋಹ ಮತ್ತು ಅತಿಕ್ರಮ ಪ್ರವೇಶ ಸೇರಿದಂತೆ ಇನ್ನಿತರ ಕ್ರಿಮಿನಲ್ ಆರೋಪಗಳ ಸಂಬಂಧ ಬೆಂಗಳೂರಿನ ಎರಡು ಬ್ಯಾಂಕ್ಗಳ ವಿರುದ್ಧ ಅರ್ಜಿದಾರರು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು.

ತನಿಖೆ ನಡೆಸಿದ್ದ ಸಿಐಡಿ ತನಿಖಾಧಿಕಾರಿ, ಎರಡೂ ಬ್ಯಾಂಕಿನ ಅಧಿಕಾರಿಗಳ ವಿರುದ್ಧ ಮಾತ್ರ ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಆದರೆ, ಬ್ಯಾಂಕ್ ಗಳನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಮಾಡಿ, ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಸಲು ಮತ್ತು ತನಿಖಾ ವರದಿಯನ್ನು ಕುರಿತು ಮಾಹಿತಿ ನೀಡಲು ಆದೇಶಿಸಬೇಕು ಎಂದು ಕೋರಿ ಪ್ರಶಾಂತ್ ಹೆಗ್ಡೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ನ್ಯಾಯಾಲಯವು ಮಾನ್ಯ ಮಾಡಿದೆ.