ಮನೆ ಕಾನೂನು ಬಿಜೆಪಿ ಶಾಸಕ ಅಭಯ್ ಕುಮಾರ್ ಪಾಟೀಲ್ ವಿರುದ್ಧದ ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಪ್ರಕರಣ...

ಬಿಜೆಪಿ ಶಾಸಕ ಅಭಯ್ ಕುಮಾರ್ ಪಾಟೀಲ್ ವಿರುದ್ಧದ ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

0

ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅಭಯ್ ಕುಮಾರ್ ಪಾಟೀಲ್ ವಿರುದ್ಧದ ಖಾಸಗಿ ದೂರನ್ನು ರದ್ದುಪಡಿಸಿ ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.

Join Our Whatsapp Group

ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿದ್ದ ಖಾಸಗಿ ದೂರನ್ನು ತನಿಖೆಗೆ ಶಿಫಾರಸ್ಸು ಮಾಡಿದ್ದ ಬೆಳಗಾವಿ ಜಿಲ್ಲೆಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶ ಮತ್ತು ಈ ಸಂಬಂಧ ಬೆಳಗಾವಿ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಎಫ್ ಐಆರ್ ರದ್ದುಪಡಿಸುವಂತೆ ಕೋರಿ ಅಭಯ್ ಕುಮಾರ್ ಪಾಟೀಲ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.

ತನಿಖೆಗೆ ಶಿಫಾರಸ್ಸು ಮಾಡಿದ ಸಂದರ್ಭದಲ್ಲಿ ಅರ್ಜಿದಾರರು ಶಾಸಕರಾಗಿರಲಿಲ್ಲ ಎಂಬುದಾಗಿ ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ. ಆದರೆ, 2012ರಲ್ಲೇ ಖಾಸಗಿ ದೂರು ದಾಖಲಾಗಿದೆ. ಆ ವೇಳೆ ಅವರು ಶಾಸಕರಾಗಿದ್ದರು. ಆ ಪ್ರಕರಣ ತನಿಖೆಗೆ ಮೂರು ಬಾರಿ ಶಿಫಾರಸ್ಸುಗೊಂಡಿತ್ತು. ಪ್ರಿಯಾಂಕ ಶ್ರೀವಾಸ್ತವ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ, ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್ ಪಿಸಿ) ಸೆಕ್ಷನ್ 154 ಪ್ರಕಾರ ಪೊಲೀಸರಿಗೆ ದೂರು ನೀಡದೆ, ನೇರವಾಗಿ ಖಾಸಗಿ ದೂರು ದಾಖಲಿಸಿದರೆ, ಆ ದೂರು ಪೊಲೀಸರಿಗೆ ಶಿಫಾರಸ್ಸು ಮಾಡುವುದು ಊರ್ಜಿತವಲ್ಲ ಎಂಬುದಾಗಿ ಆದೇಶಿಸಿದೆ ಎಂದು ವಿವರಿಸಲಾಗಿದೆ.

ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಆಸ್ತಿ ಮತ್ತು ಹೊಣೆಗಾರಿಕೆಯನ್ನು ಲೆಕ್ಕ ಹಾಕುವ ಮೂಲಕ ಲೆಕ್ಕಪರಿಶೋಧಕರಂತೆ ವರ್ತಿಸಲು ನ್ಯಾಯಾಲಯಕ್ಕೆ ಅವಕಾಶವಿಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ ಪ್ರಕರಣವೊಂದರಲ್ಲಿ ಆದೇಶ ಮಾಡಿದೆ. ಪ್ರಕರಣದಲ್ಲಿ ಖಾಸಗಿ ದೂರುದಾರ ದಾಖಲಿಸಿದ ಖಾಸಗಿ ದೂರನ್ನು ಪೊಲೀಸರಿಗೆ ತನಿಖೆಗೆ ಶಿಫಾರಸ್ಸು ಮಾಡಿರುವುದೇ ಊರ್ಜಿತವಾಗಿಲ್ಲ. ಇದೇ ಹೈಕೋರ್ಟ್ನ ಮತ್ತೊಂದು ಪೀಠವು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೇ ಖಾಸಗಿ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಎರಡು ಬಾರಿ ಪೊಲೀಸರು ದಾಖಲಿಸಿದ್ದ ಎಫ್ಐಆರ್ ಅನ್ನು ರದ್ದುಪಡಿಸಿದೆ. ಹೀಗಿದ್ದರೂ ಕೂಡ ಮೂರನೇ ಬಾರಿ ಎಫ್ಐಆರ್ ಹಾಕಿದ್ದು, ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯ ಸೆಕ್ಷನ್ 19 ಹೇಳುವಂತೆ ಪೂರ್ವಾನುಮತಿ ಪಡೆದಿಲ್ಲ. ಇದರಿಂದ ಪೂರ್ವಾನುಮತಿ ಇಲ್ಲದೆ ದಾಖಲಿಸಿದ ಖಾಸಗಿ ದೂರು ಮತ್ತು ಎಫ್ ಐಆರ್ ಕಾನೂನಿನ ಅಡಿಯಲ್ಲಿ ಊರ್ಜಿತವಾಗುವಾಗುದಿಲ್ಲ.

ಪೊಲೀಸರಿಂದ ಸೋರ್ಸ್ ರಿಪೋರ್ಟ್ ಇಲ್ಲದೆಯೇ ಖಾಸಗಿ ದೂರು ದಾಖಲಿಸಿರುವುದು ಮತ್ತು ಆ ಕುರಿತು ತನಿಖೆ ಮುಂದುವರಿಯುವುದು ಕಾನೂನಿನ ದುರ್ಬಳಕೆಯಾಗಿದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಅರ್ಜಿದಾರರ ವಿರುದ್ಧದ ಖಾಸಗಿ ದೂರು ಮತ್ತು ಎಸಿಬಿ ಪೊಲೀಸರು/ಲೋಕಾಯುಕ್ತ ಪೊಲೀಸರು 2017ರಲ್ಲಿ ದಾಖಲಿಸಿದ್ದ ಎಫ್ ಐಆರ್ ಅನ್ನು ರದ್ದುಪಡಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: 2004ರಿಂದ 2008ರ ಅವಧಿಯಲ್ಲಿ ಶಾಸಕರಾಗಿದ್ದ ಅಭಯ್ ಕುಮಾರ್ ಪಾಟೀಲ್ ಅವರು ಆದಾಯ ಮೀರಿ ಅಕ್ರಮವಾಗಿ ಆಸ್ತಿ ಗಳಿಕೆ ಮಾಡಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಬೆಳಗಾವಿ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದರು. ಆ ದೂರನ್ನು ನ್ಯಾಯಾಲಯವು ಲೋಕಾಯುಕ್ತ ಪೊಲೀಸರ ತನಿಖೆಗೆ ಆದೇಶಿಸಿತ್ತು. ಲೋಕಾಯುಕ್ತ ಪೊಲೀಸರು 2012ರಲ್ಲಿ ಎಫ್ಐಆರ್ ದಾಖಲಿಸಿದ್ದರು.

ಇದನ್ನು ಪ್ರಶ್ನಿಸಿ ಅಭಯ್ ಕುಮಾರ್ ಪಾಟೀಲ್ 2013ರಲ್ಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಎಫ್ ಐಆರ್ ರದ್ದುಪಡಿಸಿದ್ದ ಹೈಕೋರ್ಟ್, ಪ್ರಕರಣವನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಹಿಂದಿರುಗಿಸಿತ್ತು. ಮತ್ತೊಮ್ಮೆ ಅದೇ ಖಾಸಗಿ ದೂರನ್ನು ಲೋಕಾಯುಕ್ತ ಪೊಲೀಸರ ತನಿಖೆಗೆ ವಿಚಾರಣಾಧೀನ ನ್ಯಾಯಾಲಯ ಆದೇಶಿಸಿತ್ತು. ಈ ವೇಳೆ ಎಸಿಬಿ ಅಸ್ವಿತ್ವದಲ್ಲಿತ್ತು. ಎಸಿಬಿ ಪೊಲೀಸರು 2017ರಲ್ಲಿ ಎಫ್ಐಆರ್ ದಾಖಲಿಸಿದ್ದರು. ಮತ್ತೆ ಅಭಯ್ ಕುಮಾರ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಎರಡನೇ ಬಾರಿ ಕೂಡ ಹೈಕೋರ್ಟ್, ತನಿಖೆಗೆ ದೂರನ್ನು ಶಿಫಾರಸ್ಸು ಮಾಡಿದ ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿ 2017ರ ಆಗಸ್ಟ್ 8ರಂದು ಆದೇಶಿಸಿತ್ತು. ಇದಾದ ಬಳಿಕ ಮೂರನೇ ಬಾರಿ ಖಾಸಗಿ ದೂರನ್ನು ಪೊಲೀಸರಿಗೆ ವಿಚಾರಣಾಧೀನ ನ್ಯಾಯಾಲಯ ಶಿಫಾರಸ್ಸು ಮಾಡಿತ್ತು. ಎಸಿಬಿಯು ಎಫ್ ಐಆರ್ ದಾಖಲಿಸಿ ತನಿಖೆ ನಡೆಸಿತ್ತು. ಈ ಮಧ್ಯೆ ಎಸಿಬಿ ರಚನೆಯನ್ನು ಹೈಕೋರ್ಟ್ ಅಸಿಂಧುಗೊಳಿಸಿದ ಹಿನ್ನೆಲೆಯಲ್ಲಿ ತನಿಖೆ ಲೋಕಾಯುಕ್ತ ಪೊಲೀಸರ ಬಳಿ ಬಾಕಿಯಿತ್ತು. ಇದರಿಂದ ಮೂರನೇ ಬಾರಿ ಹೈಕೋರ್ಟ್ ಗೆ ಅಭಯ್ ಕುಮಾರ್ ಪಾಟೀಲ್ ಹೈಕೋರ್ಟ್ ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

ಹಿಂದಿನ ಲೇಖನದಾಂಡೇಲಿ: ಜಂಗಲ್ ಸಫಾರಿಗೆ ಹೋದ ವಾಹನ ಪಲ್ಟಿ; ಐವರಿಗೆ ಗಾಯ
ಮುಂದಿನ ಲೇಖನಕನ್ನಡ ನಾಡಿನ ಜನಹಿತಕ್ಕಾಗಿ ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ಬೆಂಬಲ: ಹೆಚ್.ಡಿ.ಕುಮಾರಸ್ವಾಮಿ