ಬೆಂಗಳೂರು(Bengaluru): ಸಹಸ್ರ ಜನರ ಅಭಿಮಾನದ ಪ್ರವಾಹದ, ಕೇಕೆ, ಜಯಘೋಷ, ಧ್ವನಿ ಬೆಳಕಿನ ಚಿತ್ತಾರದ ನಡುವೆ ಪುನೀತ ಪರ್ವ ಇಲ್ಲಿನ ಅರಮನೆ ಮೈದಾನದಲ್ಲಿ ಶುಕ್ರವಾರ ವೈಭವದಿಂದ ಆರಂಭವಾಗಿದೆ.
ಪುನೀತ್ ಭಾವಚಿತ್ರವಿದ್ದ ಬಿಳಿಯ ಧ್ವಜ, ಕನ್ನಡಧ್ವಜ, ಮಿನುಗು ದೀಪದ ಭಾವಚಿತ್ರ ಹಿಡಿದು ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.
ಚಿತ್ರರಂಗದ ತಾರೆಯರು, ಅಭಿಮಾನಿಗಳು ಶ್ವೇತ ವಸ್ತ್ರಧಾರಿಗಳಾಗಿ ಕಂಗೊಳಿಸಿ ಅಪ್ಪು ಅವರಿಗೆ ಗೌರವ ಸಲ್ಲಿಸಿದರು. ಅಭಿಮಾನಿಗಳೇ ನಮ್ಮನೆ ದೇವ್ರು… ಜಾಕಿ ಜಾಕಿ ಜಾಕಿ…ಗಾನ ಬಜಾನಾ… ನೀನೇ ನೀನೇ ಮನಸ್ಸೆಲ್ಲಾ ನೀನೇ.. ಹಾಡುಗಳು ಧ್ವನಿವರ್ಧಕದಲ್ಲಿ ಮೊಳಗುತ್ತಿದ್ದಂತೆ ಪ್ರೇಕ್ಷಕರಲ್ಲಿ ಭಾವೋದ್ದೀಪನವಾಗುತ್ತಿತ್ತು. ಕೆಲವೊಮ್ಮೆ ಅರಿವಿಲ್ಲದೆ ಹೆಜ್ಜೆ ಹಾಕುತ್ತಿದ್ದರು. ಒಮ್ಮೆ ಮೌನವಾಗುತ್ತಿದ್ದರು.
ಪುನೀತ್ ಅವರ ಬೃಹತ್ ಕಟೌಟ್ ಗಳು ಹಾಡುಗಳ ಭಾವಕ್ಕೆ ಸ್ಪಂದಿಸಿದಂತೆ ಭಾಸವಾಯಿತು. ಅಪ್ಪು ಅಪ್ಪು ಘೋಷಣೆ ಪದೇಪದೇ ಮೊಳಗಿತು. ನೂರಾರು ಕ್ಯಾಮೆರಾಗಳು ಪ್ರೇಕ್ಷಕರ ಭಾವ ಸೆರೆ ಹಿಡಿದವು.ರಾಜ್ಯದ ವಿವಿಧ ಭಾಗಗಳಿಂದ ಬಸ್, ಕಾರು, ಟೆಂಪೋ, ಬೈಕ್ ಗಳಲ್ಲಿ ಅಭಿಮಾನಿಗಳು ಬಂದಿದ್ದರು. ಅರಮನೆ ರಸ್ತೆಯ ಎಲ್ಲ ಭಾಗಗಳಲ್ಲೂ ಸಂಚಾರ ದಟ್ಟಣೆ ಉಂಟಾಯಿತು.